Site icon Vistara News

CM Siddaramaiah: ಕೃಷಿಗೆ ಸಾಲ ಮಾಡಿ ಮದುವೆ ಮಾಡುವುದನ್ನು ನಿಲ್ಲಿಸಿ: ಸಿಎಂ ಸಿದ್ದರಾಮಯ್ಯ ಮನವಿ

Siddaramaiah at Male mahadeshwara betta

ಚಾಮರಾಜನಗರ: ಸಾಲ ಮಾಡಿ ಅದ್ಧೂರಿ ಮದುವೆ (Grand Marriage) ಮಾಡುವುದು ಅನಾರೋಗ್ಯಕಾರಿ. ವ್ಯವಸಾಯಕ್ಕೆಂದು ಸಾಲ (Agricultural loan) ಮಾಡಿ ಮದುವೆ ಮಾಡುವುದನ್ನು ನಿಲ್ಲಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಕರೆ ನೀಡಿದ್ದಾರೆ. ಶ್ರೀ ಮಲೈ ಮಹದೇಶ್ವರಸ್ವಾಮಿ ಕ್ಷೇತ್ರ (Male Mahadeshwara betta) ಅಭಿವೃದ್ಧಿ ಪ್ರಾಧಿಕಾರ ದೇವಸ್ಥಾನದ ರಂಗಮಂದಿರದ ಆವರಣದಲ್ಲಿ ಆಯೋಜಿಸಿದ್ದ ಸಾಮೂಹಿಕ ಸರಳ ವಿವಾಹದಲ್ಲಿ (Mass Marriage) ಪಾಲ್ಗೊಂಡು ಮಾತನಾಡಿದರು.

ಬಡವರು ಮತ್ತು ಮಧ್ಯಮ ವರ್ಗದವರ ಪಾಲಿಗೆ ಅದ್ದೂರಿ ಮದುವೆಗಳು ಬಹಳ ದೊಡ್ಡ ಹೊರೆಯಾಗುತ್ತವೆ. ಜೀವನ ಪರ್ಯಂತ ಸಾಲ ತೀರಿಸುತ್ತಾ ಕೂರಬೇಕಾಗುತ್ತದೆ. ಆದ್ದರಿಂದ ಸರಳ ಮತ್ತು ಸಾಮೂಹಿಕ ವಿವಾಹಗಳು ಹೆಚ್ಚೆಚ್ಚು ನಡೆಯಬೇಕು ಎಂದರು.

ಸಿಎಂ ಸಿದ್ದರಾಮಯ್ಯ ಮಲೆ ಮಹದೇಶ್ವರ ಬೆಟ್ಟದಲ್ಲಿ

ಮಲೈ ಮಹದೇಶ್ವರ ಬೆಟ್ಟ ಶ್ರಮಿಕ ಶೂದ್ರ ವರ್ಗದ ದೊಡ್ಡ ಅಧ್ಯಾತ್ಮಿಕ ಕ್ಷೇತ್ರ

ಮಹದೇಶ್ವರನ ಬೆಟ್ಟ ಅಧ್ಯಾತ್ಮಿಕ ಮಹತ್ವ ಇರುವ ಪುಣ್ಯ ಸ್ಥಳ. ಶೂದ್ರರು, ಶ್ರಮಿಕರು, ಬಡವರು, ಎಲ್ಲಾ ಜಾತಿಯವರ ಅಧ್ಯಾತ್ಮಿಕ ಕೇಂದ್ರವಾಗಿದೆ. ಈ ಕಾರಣಕ್ಕೇ ನನಗೆ ಈ ಕ್ಷೇತ್ರದ ಬಗ್ಗೆ ಅತ್ಯಂತ ಶ್ರದ್ದೆ ಮತ್ತು ಗೌರವ ಇದೆ. ನಾನು ಮೊದಲ ಬಾರಿ ಮುಖ್ಯಮಂತ್ರಿಯಾದಾಗ ಮಲೈ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರ ರಚಿಸಿದೆ. ಈಗ ಪ್ರಾಧಿಕಾರದ ಆದಾಯವೂ ಹೆಚ್ಚಾಗಿದೆ. ಶಕ್ತಿ ಯೋಜನೆಯ ಪರಿಣಾಮ ಭಕ್ತರು, ಅದರಲ್ಲೂ ಮಹಿಳಾ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮಲೈ ಮಾದೇಶ್ವರನ ದರ್ಶನ ಪಡೆಯುತ್ತಿದ್ದಾರೆ ಎಂದು ಸಿದ್ದರಾಮಯ್ಯ ಮೆಚ್ಚುಗೆ ಸೂಚಿಸಿದರು.

ಮುಂದಿನ ಐದು ವರ್ಷದಲ್ಲಿ ಬೆಟ್ಟದ ಚಿತ್ರಣವೇ ಬದಲು ಎಂದ ಸಿದ್ದರಾಮಯ್ಯ

ಮುಂದಿನ ಐದು ವರ್ಷದಲ್ಲಿ ಮಲೈ ಮಹದೇಶ್ವರ ಕ್ಷೇತ್ರದ ಚಿತ್ರಣವನ್ನೇ ಬದಲಾಯಿಸ್ತೀವಿ ಎಂದು ಮಹತ್ವದ ಘೋಷಣೆ ಮಾಡಿದ ಮುಖ್ಯಮಂತ್ರಿಗಳು ಕುಡಿಯುವ ನೀರು ಮತ್ತು ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಿ ಎಂದು ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಗದ್ಗುರು ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳು, ಶ್ರೀ ಪಟ್ಟದ ಗುರುಸ್ವಾಮಿಗಳು, ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳು ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹನೂರು ಶಾಸಕ ಎಂ.ಆರ್.ಮಂಜುನಾಥ್ ವಹಿಸಿದ್ದರು. ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್, ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೇರಿ ಜಿಲ್ಲೆಯ ಶಾಸಕರು ಮತ್ತು ನಾಯಕರು ಉಪಸ್ಥಿತರಿದ್ದರು.

ರಾಷ್ಟ್ರಪತಿ ಭವನ ಇನ್ನು ಮುಂದೆ ತಪೋಭವನ

ಮಲೈ ಮಹದೇಶ್ವರ ಬೆಟ್ಟದಲ್ಲಿರುವ ರಾಷ್ಟ್ರಪತಿ ಭವನದ ಹೆಸರು ಬದಲಾಗಿದೆ. ಇನ್ನು ಮುಂದೆ ಇದು ತಪೋಭವನ. ಮಾದೇಶ್ವರ ತಪಸ್ಸು ಮಾಡಿದ ಶಕ್ತಿ ಕೇಂದ್ರ ಇದು. ಆದ್ದರಿಂದ ಇದನ್ನು ನಾವು ತಪೋಭವನ ಎಂದು ಕರೆಯಬೇಕು. ಶ್ರೀ ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾ ಸ್ವಾಮಿಗಳ ಸಲಹೆಯಂತೆ ತಪೋಭವನ ಎಂದು ಬದಲಾಯಿಸಿದ್ದೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.

ದೇವರ ದರ್ಶನ ಪಡೆದ ಸಿದ್ದರಾಮಯ್ಯ, ಬೆಳ್ಳಿ ರಥೋತ್ಸವದಲ್ಲಿ ಭಾಗಿ

ಚಾಮರಾಜನಗರ ಜಿಲ್ಲಾ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಬೆಳಗ್ಗೆ ಶ್ರೀ ಮಲೆ ಮಹದೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಮಾದೇಶ್ವರನ ಬೆಳ್ಳಿ ರಥೋತ್ಸವದಲ್ಲಿಯೂ ಭಾಗಿಯಾದರು. ಬಳಿಕ ಅವರು ಕ್ಷೇತ್ರದಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡರು. ಮಂಗಳವಾರ ರಾತ್ರಿ ಮುಖ್ಯಮಂತ್ರಿಗಳು ಮಹದೇಶ್ವರ ಬೆಟ್ಟದ ರಾಷ್ಟ್ರಪತಿ ಭವನದಲ್ಲಿ ವಾಸ್ತವ್ಯ ಹೂಡಿದ್ದರು

ಇದನ್ನೂ ಓದಿ: CM Siddaramaiah : 2ನೇ ಅವಧಿಗೆ ಚಾಮರಾಜನಗರಕ್ಕೆ ಸಿಎಂ ಭೇಟಿ; ಮೌಢ್ಯಕ್ಕೆ ಸೆಡ್ಡು ಹೊಡೆದ ಸಿದ್ದರಾಮಯ್ಯ

Exit mobile version