Site icon Vistara News

CM Siddaramaiah : 2ನೇ ಅವಧಿಗೆ ಚಾಮರಾಜನಗರಕ್ಕೆ ಸಿಎಂ ಭೇಟಿ; ಮೌಢ್ಯಕ್ಕೆ ಸೆಡ್ಡು ಹೊಡೆದ ಸಿದ್ದರಾಮಯ್ಯ

CM Siddaramaiah infront of chamarajanagar male mahadeshwara hills

ಬೆಂಗಳೂರು: ಮುಖ್ಯಮಂತ್ರಿಯಾದವರು ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಿದರೆ ಅಧಿಕಾರವನ್ನು ಕಳೆದುಕೊಳ್ಳುತ್ತಾರೆ ಎಂಬ ನಂಬಿಕೆಯನ್ನು ಸುಳ್ಳಾಗಿಸಲು ಸಿಎಂ ಸಿದ್ದರಾಮಯ್ಯ (CM Siddaramaiah) ಮತ್ತೊಮ್ಮೆ ಸಜ್ಜಾಗಿದ್ದಾರೆ. ಅವರು ಈಗ ಎರಡನೇ ಅವಧಿಗೆ ಮುಖ್ಯಮಂತ್ರಿಯಾದಾಗಲೂ ಅಲ್ಲಿಗೆ ಭೇಟಿ ನೀಡಲು ಮುಂದಾಗಿದ್ದು, ಮತ್ತೆ ಮೌಡ್ಯಕ್ಕೆ ಸೆಡ್ಡು (Anti superstition move) ಹೊಡೆದಿದ್ದಾರೆ. ಮಂಗಳವಾರ ಚಾಮರಾಜನಗರ ಜಿಲ್ಲೆಗೆ (Chamarajanagar district) ತೆರಳಲಿರುವ ಸಿಎಂ, ಅಲ್ಲಿಯೇ ವಾಸ್ತವ್ಯವನ್ನೂ (CM Siddaramaiah stays) ಹೂಡಲಿದ್ದಾರೆ.

ಚಾಮರಾಜನಗರ ಜಿಲ್ಲೆಗೆ ಭೇಟಿ ಕೊಟ್ಟರೆ ಅಧಿಕಾರ ಹೋಗುತ್ತದೆ ಎಂಬ ಅಪನಂಬಿಕೆಯನ್ನು ಸಿಎಂ ಸಿದ್ದರಾಮಯ್ಯ ಅವರು ಕಳೆದ ಬಾರಿ ಸಿಎಂ ಆಗಿದ್ದಾಗಲೇ ಭೇಟಿ ನೀಡುವ ಮೂಲಕ ಮೌಢ್ಯಕ್ಕೆ ಬ್ರೇಕ್‌ ಹಾಕಿದ್ದರು. ಕಳೆದ ಬಾರಿ ಅವರು ಒಟ್ಟು 12 ಬಾರಿ ಚಾಮರಾಜನಗರ ಜಿಲ್ಲೆಗೆ ಭೇಟಿ ಕೊಟ್ಟಿದ್ದರು. ಇದೀಗ ಎರಡನೇ ಬಾರಿ ಅಂದ್ರೆ ಈ ಅವಧಿಯಲ್ಲಿ ಅಧಿಕಾರವಹಿಸಿಕೊಂಡ ನಂತರ ಮೊದಲ ಬಾರಿಗೆ ಎರಡು ದಿನ ಪ್ರವಾಸಕ್ಕಾಗಿ ಚಾಮರಾಜನಗರಕ್ಕೆ ಸಿಎಂ ಭೇಟಿ ನೀಡುತ್ತಿದ್ದಾರೆ.

ಮಂಗಳವಾರ ರಾತ್ರಿ ಮೈಸೂರಿನಿಂದ ಚಾಮರಾಜನಗರಕ್ಕೆ ಸಿಎಂ ಸಿದ್ದರಾಮಯ್ಯ ತೆರಳಲಿದ್ದಾರೆ. ಮಲೆಮಹದೇಶ್ವರ ಬೆಟ್ಟದ ರಾಷ್ಟ್ರಪತಿ ಭವನದಲ್ಲಿ ವಾಸ್ತವ್ಯ ಹೂಡಲಿರುವ ಸಿಎಂ ಮರು ದಿನ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.

ಬುಧವಾರ (ಸೆಪ್ಟೆಂಬರ್‌ 27) ಬೆಳಗ್ಗೆ ಮಲೆ ಮಹದೇಶ್ವರ ಬೆಟ್ಟ ಪ್ರಾಧಿಕಾರದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿಯೂ (Chamarajanagar District Level Progress Review Meeting) ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ: Cauvery water dispute : ಕಾವೇರಿ ನೆಪದಲ್ಲಿ ಬಿಜೆಪಿ – ಜೆಡಿಎಸ್‌ನಿಂದ ರಾಜಕೀಯ: ಸಿಎಂ ಸಿದ್ದರಾಮಯ್ಯ ಆರೋಪ

ಈ ಬಗ್ಗೆ ಸಿದ್ದರಾಮಯ್ಯ ಏನು ಹೇಳಿದ್ದರು?

ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಸಿಎಂ ಸಿದ್ದರಾಮಯ್ಯ ಅವರು, ಚಾಮರಾಜನಗರ ಜಿಲ್ಲೆಯ ಸಿಎಂ ಭೇಟಿ ಹಾಗೂ ಮೌಢ್ಯದ ಕುರಿತು ಪ್ರಸ್ತಾಪ ಮಾಡಿದ್ದರು. ಮಾಢ್ಯ, ಜಾತಿ ವ್ಯವಸ್ಥೆ, ಶಿಕ್ಷಣ ಸೇರಿದಂತೆ ಜಾಗೃತಿಗಳ ಬಗ್ಗೆ ಮಾತನಾಡಿದ್ದರು. ಅಂದು ಅವರು ಮಾತನಾಡುತ್ತಾ, “ಚಾಮರಾಜನಗರಕ್ಕೆ ಭೇಟಿ ನೀಡಿದರೆ ಸಿಎಂ ಕುರ್ಚಿ ಹೋಗುತ್ತದೆ ಎಂಬುದನ್ನು ವಿದ್ಯಾವಂತರೇ ಹೆಚ್ಚು ನಂಬುತ್ತಾರೆ. ಇದು ಮೌಢ್ಯವಲ್ಲವೇ? ನಾನು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ 12 ಬಾರಿ ಚಾಮರಾಜನಗರಕ್ಕೆ ಹೋಗಿದ್ದೆ. ಐದು ವರ್ಷ ಪೂರ್ಣಾವಧಿ ಆಡಳಿತವನ್ನೂ ಕೊಟ್ಟೆ. ಈಗ ಎರಡನೇ ಬಾರಿ ಮುಖ್ಯಮಂತ್ರಿ ಆಗಿದ್ದೇನೆ. ಬಸವಣ್ಣನವರು 12ನೇ ಶತಮಾನದಲ್ಲೇ ಇಂಥ ಮೌಢ್ಯ ಮತ್ತು ಜಾತಿ ವ್ಯವಸ್ಥೆ ವಿರುದ್ಧ ಹೋರಾಟ ನಡೆಸಿದ್ದರು. ಜನರಿಗೆ ಶಿಕ್ಷಣ ಲಭ್ಯವಾದರೆ ಜಾತಿ, ಮೌಢ್ಯ ತೊಲಗುತ್ತದೆ ಎನ್ನುವ ಮಾತು ಸುಳ್ಳಾಗಿದೆ ಎಂದು ಚಾಮರಾಜನಗರ ಭೇಟಿ ಬಗ್ಗೆ ಇರುವ ನಂಬಿಕೆ ಬಗ್ಗೆ ಬೇಸರವನ್ನು ಹೊರಹಾಕಿದ್ದರು.

Exit mobile version