Site icon Vistara News

ಗರ್ಭಿಣಿಯನ್ನು 8 ಕಿ.ಮೀ. ಕಾಡು ಮಾರ್ಗದಲ್ಲಿ 4 ಗಂಟೆ ಹೊತ್ತೊಯ್ದರು: ಚಾಮರಾಜನಗರದ ಗ್ರಾಮಸ್ಥರ ಬವಣೆ

ಡೋಲಿಗೆ ಮೊರೆಹೋದ ಗ್ರಾಮಸ್ಥರು

ಚಾಮರಾಜನಗರ: ಮಹದೇಶ್ವರ ಬೆಟ್ಟ ಅರಣ್ಯದ ಗ್ರಾಮಸ್ಥರು ನಾಗರಿಕ ಸಮಾಜದ ಬಹುತೇಕ ಮೂಲಸೌಕರ್ಯಗಳಿಂದ ವಂಚಿತರಾಗಿರುವುದಕ್ಕೆ ತಾಜಾ ಉದಾಹರಣೆಯೊಂದು ಲಭಿಸಿದೆ. ಗರ್ಭಿಣಿಯೊಬ್ಬರನ್ನು ಆಸ್ಪತ್ರೆಗೆ ಕರೆದಯ್ಯಲು ಕನಿಷ್ಠ ಸಾರಿಗೆ ವ್ಯವಸ್ಥೆಯೂ ಇಲ್ಲದೆ, ಸರ್ಕಾರದ ಯೋಜನೆಯೂ ಉಪಯೋಗಕ್ಕೆ ಬಾರದೆ ಕಾಡು ದಾರಿಯಲ್ಲಿ ಬಟ್ಟೆಯ ಜೋಲಿಯಲ್ಲಿ ಕಟ್ಟಿ ಹೊತ್ತೊಯ್ದಿರುವ ಘಟನೆಯು ರಾಜ್ಯದ ಆರೋಗ್ಯ ವ್ಯವಸ್ಥೆಯನ್ನು ಅಣಕಿಸುವಂತಿದೆ.

ದೊಡ್ಡಾಣೆಯ ಶಾಂತಲಾ ಎಂಬ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ನೋವಿನಿಂದ ಬಳಲುತ್ತಿದ್ದ ತುಂಬು ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಯಾವುದೇ ವಾಹನ ಸೌಲಭ್ಯ ಸಿಕ್ಕಿಲ್ಲ. ಕಾಡಿನ ಹಾದಿಯಲ್ಲಿ ಡೋಲಿ ಬಿದಿರಿನ ಕೋಲಿಗೆ ಸೀರೆ ಕಟ್ಟಿದ್ದಾರೆ. ಎರಡು ಜೋಲಿಯೊಳಗೆ ಒಂದು ಭಾಗದಲ್ಲಿ ತಲೆಯ ಭಾಗ, ಮತ್ತೊಂದು ಜೋಲಿಯಲ್ಲಿ ಕಾಲಿನ ಭಾಗವನ್ನು ಕೂರಿಸಿ ಹರಸಾಹಸ ಮಾಡಿ ಹೊತ್ತೊಯ್ದಿದ್ದಾರೆ. ಕಾಡಿನ ಮಾರ್ಗದಲ್ಲಿ ಬೆಳಕಿಲ್ಲದೆ ಟಾರ್ಜ್‌ಗಳನ್ನು ಹಿಡಿದು ಕೊನೆಗೂ ಆಸ್ಪತ್ರೆಗೆ ಸೇರಿಸಿದ್ದಾರೆ.

ನಾಳ್ಕು ಗಂಟೆಗಳ ದಾರಿ

ಗರ್ಭಿಣಿ ಇರುವ ದೊಡ್ಡಾಣೆಯಿಂದ ಆಸ್ಪತ್ರೆಗೆ 8 ಕಿಲೋಮೀಟರ್‌ ಸಾಗಬೇಕಿತ್ತು. ಹೀಗಾಗಿ ಡೋಲಿ ಕಟ್ಟಿ ಗರ್ಭಿಣಿಯನ್ನು ಹೊತ್ತು ಸತತ ನಾಲ್ಕು ಗಂಟೆ ಕಲ್ಲುಮುಳ್ಳುಗಳ ಹಾದಿಯಲ್ಲಿ, ಕಾಡುಮೃಗಗಳ ಭಯದಲ್ಲೇ ಸಾಗಿದ್ದಾರೆ. ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯನ್ನು ಮಧ್ಯರಾತ್ರಿ 2ಕ್ಕೆ ಹೊರಟು ದೊಡ್ಡಾಣೆಯಿಂದ ಸುಳ್ವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೆಳಗ್ಗೆ 6 ಗಂಟೆಗೆ ದಾಖಲಿಸಿದ್ದಾರೆ.

ಇದ್ದರೂ ಇಲ್ಲದಂತಾದ ಜನವನ ಸಾರಿಗೆ

ಅರಣ್ಯ ಪ್ರದೇಶದ ಗ್ರಾಮಸ್ಥದ ಅನುಕೂಲಕ್ಕಾಗಿ ಸರ್ಕಾರ ಜನವನ ಸಾರಿಗೆ ವ್ಯವಸ್ಥೆ ಜಾರಿ ಮಾಡಿದೆ. ತುರ್ತು ಸಂದರ್ಭದಲ್ಲಿ ವಾಹನಗಳ ಮೂಲಕ ಸಾಗಿಸುವ ಹೊಣೆ ನಿರ್ವಹಿಸಬೇಕಿದ್ದ ಯೋಜನೆ ಅತ್ಯಂತ ಮುಖ್ಯ ಸಮಯದಲ್ಲಿ ಕೈಕೊಟ್ಟಿದೆ. ಗರ್ಭಿಣಿಯನ್ನು ಸಾಗಿಸಲು ಗ್ರಾಮಸ್ಥರು ಕರೆ ಮಾಡಿದಾಗ ಜನಮನ ಯೋಜನೆಯ ಅಧಿಕಾರಿಗಳ ಮೊಬೈಲ್‌ ಸ್ವಿಚ್ಡ್‌ ಆಫ್‌ ಆಗಿತ್ತು. ಕೊನೆಗೆ ಡೋಲಿಯ ಮೂಲಕವೇ ಗರ್ಭಿಣಿಯನ್ನು ಸಾಗಿಸಿದ್ದಾರೆ.

ಇದನ್ನೂ ಓದಿ| Viral Video: ರೈಲ್ವೆ ನಿಲ್ದಾಣದಲ್ಲಿ ತುಂಬು ಗರ್ಭಿಣಿಯ ಪ್ರಾಣ ಕಾಪಾಡಿದ ಪೊಲೀಸ್‌ ಕಾನ್‌ಸ್ಟೆಬಲ್‌

Exit mobile version