ಮಲೆಮಹದೇಶ್ವರ ಬೆಟ್ಟ (ಚಾಮರಾಜ ನಗರ): ಇವತ್ತು ಮದುವೆ ಮಾಡಿಕೊಂಡ ನೀವೆಲ್ಲ ಒಂದೇ ಮಗುವನ್ನು (One Child policy) ಮಾಡಿಕೊಳ್ಳಿ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಸಲಹೆ ನೀಡಿದರು! ಬುಧವಾರ ಶ್ರೀ ಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವು (Shri Malai Mahadeshwara swamy Kshetra development Authoriy) ದೇವಸ್ಥಾನದ ರಂಗಮಂದಿರದಲ್ಲಿ ಆಯೋಜಿಸಿದ್ದ ಸಾಮೂಹಿಕ ಸರಳ ವಿವಾಹದಲ್ಲಿ (Mass Marriage) ಪಾಲ್ಗೊಂಡು ನವ ದಂಪತಿಗಳಿಗೆ (Newly wedded couple) ಶುಭ ಹಾರೈಸುವ ವೇಳೆ ಸಿದ್ದರಾಮಯ್ಯ ಅವರು ಈ ಕಿವಿ ಮಾತು ಹೇಳಿದರು.
ಬಡವರು ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು. ಜಗತ್ತಿನಲ್ಲಿ ನಾವು ಮಕ್ಕಳನ್ನು ಮಾಡುವುದರಲ್ಲಿ ಚೀನಾ ದೇಶವನ್ನು ಹಿಂದಿಕ್ಕಿದ್ದೇವೆ. ಹೀಗಾಗಿ ಕುಟುಂಬಕ್ಕೆ ಒಂದೇ ಮಗು ಸಾಕು ಎಂದು ಸಿಎಂ ಸಲಹೆ ನೀಡಿದರು. ಒಂದು ಬೇಕು, ಒಂದೇ ಸಾಕು ಎಂಬ ಪಾಲಿಸಿ ನಿಮ್ಮದಾಗಿರಲಿ. ಮಕ್ಕಳನ್ನು ಒಳ್ಳೆಯ ವಿದ್ಯಾವಂತರನ್ನಾಗಿ ಬೆಳೆಸಿ ಎಂದು ಹೇಳಿದರು. ಅದರ ಜತೆಗೆ ನಿಮ್ಮ ಮಕ್ಕಳಿಗೂ ಸಾಮೂಹಿಕ ವಿವಾಹದ ಬಗ್ಗೆ ಹೇಳಿ ಎಂದು ಸಲಹೆ ನೀಡಿದರು.
ನೂತನ ದಂಪತಿಗೆ ಖುಷಿಖುಷಿಯಾಗಿ ಹಾರೈಸಿ ಫೋಟೊ ತೆಗೆಸಿಕೊಂಡ ಸಿದ್ದರಾಮಯ್ಯ ಅವರು ಸಾಮೂಹಿಕ ವಿವಾಹಗಳ ಅಗತ್ಯತೆಯನ್ನು ಒತ್ತಿ ಹೇಳಿದರು.
ʻʻಸಾಮಾಜಿಕ ದೃಷ್ಟಿಯಿಂದ ವಿವಾಹಕ್ಕೆ ದುಂದು ವೆಚ್ಚ ಒಳ್ಳೆಯ ಬೆಳವಣಿಗೆ ಅಲ್ಲ. ಸರಳವಾಗಿ ವಿವಾಹ ಮಾಡಿಕೊಳ್ಳುವುದು ಒಳ್ಳೆಯದು. ಮದುವೆ ಎನ್ನುವುದು ಶ್ರೀಮಂತಿಕೆ ಪ್ರದರ್ಶನ ಆಗಬಾರದು. ಬಡವರು ಇಂತಹ ಸಾಮೂಹಿಕ ವಿವಾದಲ್ಲಿ ಸರಳವಾಗಿ ಮದುವೆ ಆಗುವುದು ಒಳ್ಳೆಯದು. ಸಾಲ ಸೋಲ ಮಾಡಿ ಮದುವೆ ಮಾಡುವುದು, ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವುದು ಸರಿಯಲ್ಲ. ಯಾರೂ ಕೂಡ ಸಾಲ ಮಾಡಿ ಮದುವೆ ಮಾಡಬೇಡಿʼʼ ಎಂದು ಸಿದ್ದರಾಮಯ್ಯ ಸಲಹೆ ನೀಡಿದರು.
ʻʻಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡುʼ ಎಂಬ ಗಾದೆ ಮಾತು ಉಲ್ಲೇಖಿಸಿದ ಸಿಎಂ ಸಾಲ ಮಾಡಿ ಮದುವೆ ಮಾಡಲೇಬೇಡಿ ಎಂದರು. ಶ್ರೀಮಂತರು ಕೂಡಾ ಮದುವೆಗಾಗಿ ದುಂದುವೆಚ್ಚ ಮಾಡುವುದನ್ನು ಬಿಡಬೇಕು. ಆ ಹಣವನ್ನು ಬೇರೆ ಸತ್ಕಾರ್ಯಗಳಿಗೆ ಬಳಸಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ: CM Siddaramaiah : ಸಿಎಂ ಆಗಿ 13ನೇ ಬಾರಿ ಭೇಟಿ; ಚಾಮರಾಜ ನಗರದ ಮೌಢ್ಯ ತೊಡೆದೆ ಎಂದ ಸಿದ್ದರಾಮಯ್ಯ
ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ಪಟ್ಟದ ಗುರುಸ್ವಾಮಿಗಳು, ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳು, ಶಾಸಕರಾದ ಎಂ.ಆರ್.ಮಂಜುನಾಥ್, ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್, ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೇರಿ ಜಿಲ್ಲೆಯ ಶಾಸಕರು ಮತ್ತು ನಾಯಕರು ಉಪಸ್ಥಿತರಿದ್ದರು.