Site icon Vistara News

Rain News | ವ್ಯಾಪಕ ಮಳೆಯಿಂದ ಮುಂದುವರಿದ ಸಾವು-ನೋವು; ಯಾವ್ಯಾವ ಜಿಲ್ಲೆಯಲ್ಲಿ ಏನೇನು ಅನಾಹುತ?

rain news

ಚಾಮರಾಜನಗರ/ಮೈಸೂರು/ ದಾವಣಗೆರೆ: ಬಂಗಾಳ ಕೊಲ್ಲಿಯಲ್ಲಿ ಕಾಣಿಸಿಕೊಂಡ ಮೇಲ್ಮೈಸುಳಿ ಗಾಳಿಯಿಂದಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದು (Rain News) ಸಾವು-ನೋವು ಮುಂದುವರಿದಿದೆ. ಸಿಡಿಲು ಬಡಿದು ಮಹಿಳೆಯೊಬ್ಬರು ಗಂಭೀರ ಗಾಯಗೊಂಡಿದ್ದರೆ, ಮತ್ತೊಂದು ಕಡೆ ಕೆರೆ ಕೋಡಿ ಒಡೆದು ಹಲವು ಗ್ರಾಮಗಳು ಜಲಾವೃತಗೊಂಡಿದೆ.

ಸಿಡಿಲು ಬಡಿದು ಗಂಭೀರ ಗಾಯಗೊಂಡ ಮಹಿಳೆ
ಮಲೆ ಮಹದೇಶ್ವರ ಬೆಟ್ಟದ ಕಾಡಂಚಿನ ವ್ಯಾಪ್ತಿಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಸಿಡಿಲು ಬಡಿದು ಮಹಿಳೆಯೊಬ್ಬರು ಗಂಭೀರ ಗಾಯಗೊಂಡಿದ್ದಾರೆ. ಜಡೆ ಮಾದಮ್ಮ ಎಂಬಾಕೆಗೆ ಸಿಡಿಲು ಬಡಿದ ಪರಿಣಾಮ ಬಲಗೈ, ಕಾಲು, ಸೊಂಟಕ್ಕೆ ಗಾಯವಾಗಿದ್ದು, ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪೊನ್ನಾಚ್ಚಿ ಗ್ರಾ.ಪಂ.ವ್ಯಾಪ್ತಿಯ ರಾಮೇಗೌಡನಹಳ್ಳಿಯಲ್ಲಿ ಘಟನೆ ನಡೆದಿದೆ.

ಹೆದ್ದಾರಿಯಲ್ಲಿ ನಿಂತ ಮಳೆ ನೀರು: ಮೀನು ಹಿಡಿದು ವ್ಯಂಗ್ಯ
ಮಳೆ ಬಂತೆಂದರೆ ಸಾಕು ರಾಷ್ಟ್ರೀಯ ಹೆದ್ದಾರಿ 209ರಲ್ಲಿ ರಸ್ತೆ ಎಲ್ಲವೂ ಜಲಾವೃತಗೊಳ್ಳುತ್ತದೆ. ಹೆದ್ದಾರಿ ಅವ್ಯವಸ್ಥೆಯನ್ನು ಎತ್ತಿ ತೋರಿಸಲು ಮೀನು ಹಿಡಿದು ಬಟ್ಟೆ ಒಗೆದು ಸ್ಥಳೀಯರೊಬ್ಬರು ವ್ಯಂಗ್ಯ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಹರಿಬಿಟ್ಟಿದ್ದಾರೆ. ಕರ್ನಾಟಕ- ತಮಿಳುನಾಡು ನಡುವಿನ ರಾಷ್ಟ್ರೀಯ ಹೆದ್ದಾರಿ ಇದಾಗಿದ್ದು, ಚಾಮರಾಜನಗರ ತಾಲೂಕಿನ ಕೋಳಿಪಾಳ್ಯದ ಬಳಿಯ ಅವ್ಯವಸ್ಥೆಯ ಬಗ್ಗೆ ಗಮನಹರಿಸದೆ ಇರುವುದಕ್ಕೆ ಕಿಡಿಕಾರಿದ್ದಾರೆ. ಕೋಳಿಪಾಳ್ಯ ನಿವಾಸಿ ದೇವರಾಜು ಎಂಬುವವರು ಹೆದ್ದಾರಿಯಲ್ಲಿ ನಿಂತ ನೀರಿನಲ್ಲಿ ಮೀನು ಹಿಡಿದು, ಬಟ್ಟೆ ಒಗೆದು ಆಕ್ರೋಶ ಹೊರಹಾಕಿದ್ದಾರೆ. ನಿತ್ಯ ನೂರಾರು ವಾಹನ ಸವಾರರು ಸಂಚಾರಿಸುತ್ತಾರೆ, ಹೆದ್ದಾರಿಯಲ್ಲಿ ನಿಂತ ನೀರಿನಿಂದ ಗಲಿಬಿಲಿಗೊಂಡು ಅಪಘಾತಕ್ಕೆ ಕಾರಣವಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.

ರಸ್ತೆ ಸಂರ್ಪಕ ಕಡಿತ
ಚಾಮರಾಜನಗರ ತಾಲೂಕಿನ ಹರವೆಯಿಂದ ಮಲೆಯೂರು, ಮುಕ್ಕಡಹಳ್ಳಿ‌ ರಸ್ತೆ ಸಂಪರ್ಕ ಕಡಿತಗೊಂಡಿದೆ. ಸತತ ಮಳೆಯಿಂದ ಗುಂಡ್ಲಾ ಕೆರೆ ಕೋಡಿ ಬಿದ್ದು, ರಸ್ತೆ ಮೇಲೆ 2-3 ಅಡಿ ನೀರು ಹರಿಯುತ್ತಿದ್ದು, ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಲು ಆಗದೆ ವಾಹನ ಸವಾರರು ಪರದಾಟ ಅನುಭವಿಸುತ್ತಿದ್ದಾರೆ.

ಅಪಾಯ ಮಟ್ಟ ಮೀರಿದ ಕೊಡಗನೂರು ಕೆರೆ
ದಾವಣಗೆರೆ ತಾಲೂಕಿನ ಕೊಡಗನೂರು ಗ್ರಾಮದಲ್ಲಿ ನಿರಂತರ ಮಳೆಯಿಂದಾಗಿ ಕೆರೆ ಏರಿ ಕುಸಿತವಾಗಿದೆ. ಒಂದು ಅಡಿಗಿಂತ ಹೆಚ್ಚು ನೀರು ಹರಿದು ಬರುತ್ತಿದ್ದು, ಲಕ್ಷಾಂತರ ಹೆಕ್ಟೇರ್ ಜಮೀನು ಪ್ರದೇಶ, ವಸತಿ ಪ್ರದೇಶ ಮುಳುಗಡೆ ಸಾಧ್ಯತೆ ಇದೆ. ಜಿಲ್ಲಾಡಳಿತವು ತಾತ್ಕಾಲಿಕವಾಗಿ ರಸ್ತೆ ಬಂದ್ ಮಾಡಿ ಕಾಮಗಾರಿ ನಡೆಸುತ್ತಿದ್ದು, ಕಾಟಚಾರಕ್ಕೆ ಕಾಮಗಾರಿ ಮಾಡದೆ ಕೆರೆ ಏರಿ ಭದ್ರಪಡಿಸುವಂತೆ ರೈತರು ಒತ್ತಾಯಿಸಿದ್ದಾರೆ.

ದೊಡ್ಡಕೆರೆ ಕೋಡಿ ಒಡೆದು ಅಪಾರ ಪ್ರಮಾಣದ ನೀರು ಹೊರಕ್ಕೆ ಬರುತ್ತಿರುವುದು

ಇತ್ತ ಮೈಸೂರಿನ ಪಿರಿಯಾಪಟ್ಟಣ ತಾಲೂಕಿನ ಬೆಕ್ಕರೆ ಗ್ರಾಮದ ದೊಡ್ಡಕೆರೆ ಕೋಡಿ ಒಡೆದಿದೆ. ಪರಿಣಾಮ ಅಪಾರ ಪ್ರಮಾಣದ ನೀರು ಹೊರಕ್ಕೆ ಬಂದು ಅಕ್ಕಪಕ್ಕದ ತೋಟ ಜಮೀನುಗಳಿಗೆ ನುಗ್ಗಿದೆ. ಇತ್ತೀಚೆಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕೆರೆ ಹೂಳೆತ್ತಿಸಿ ಅಭಿವೃದ್ಧಿ ಪಡಿಸಲಾಗಿತ್ತು. ಹಲವು ವರ್ಷಗಳ ಬಳಿಕ ಕೆರೆ ತುಂಬಿದ್ದರಿಂದ ರೈತರು ಸಂಭ್ರಮದಲ್ಲಿದ್ದರು. ಆದರೆ ಈ ವರ್ಷ ಸುರಿದ ಮಳೆಗೆ ಕೆರೆ ಕೋಡಿ ಬಿದ್ದಿದ್ದು ರೈತರು ಕಂಗಲಾಗಿದ್ದಾರೆ.

ಇದನ್ನೂ ಓದಿ | Rain News | ಸೇತುವೆ ದಾಟಲು ಹೋಗಿ ಇಬ್ಬರು ನೀರುಪಾಲು; ಶೋಧಕಾರ್ಯದಲ್ಲಿ ಅಗ್ನಿಶಾಮಕ ಸಿಬ್ಬಂದಿ

Exit mobile version