ಚಾಮರಾಜನಗರ: ಪತ್ನಿ ಮಾಡಿದ ರೀಲ್ಸ್‌ಗೆ (Reels Tragedy) ಪತಿಯೊಬ್ಬ ಆತ್ಮಹತ್ಯೆ ( Husband death) ಮಾಡಿಕೊಂಡಿದ್ದಾನೆ. ಚಾಮರಾಜನಗರದ ಹನೂರು ತಾಲೂಕಿನ ಪಿ.ಜಿ.ಪಾಳ್ಯ ಗ್ರಾಮದಲ್ಲಿ ಘಟನೆ ನಡೆದಿದೆ. ಪಿ.ಜಿ.ಪಾಳ್ಯ ಗ್ರಾಮದ ಕುಮಾರ್ (33) ನೇಣಿಗೆ (Self Harming) ಶರಣಾದವರು.
ರಿಯಲ್ ಸ್ಟಾರ್ ಉಪೇಂದ್ರ (Upendra Movie) ನಟನೆಯ “ಉಪೇಂದ್ರʼʼ ಸಿನಿಮಾದ ಓ ನಲ್ಲ.. ನೀನಲ್ಲ, ಕರಿಮಣಿ ಮಾಲೀಕ ನೀನಲ್ಲ ಹಾಡು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡಿಂಗ್‌ನಲ್ಲಿದೆ. ಎಲ್ಲಿ ಹೋದರು, ಎಲ್ಲಿ ನೋಡಿದರೂ ಈ ಹಾಡನ್ನು ಗುನುಗುವಂತಾಗಿದೆ. ಜನರು ಕ್ರಿಯೇಟಿವ್ ಆಗಿ ರೀಲ್ಸ್ ಹಂಚಿಕೊಳ್ಳಲು ಶುರು ಮಾಡಿದ್ದಾರೆ. ಆದರೆ ಇದೇ ಸಾಂಗ್ ಇದೀಗ ವ್ಯಕ್ತಿಯೊಬ್ಬನ ಪ್ರಾಣವನ್ನೇ ಕಸಿದುಕೊಂಡಿದೆ.
ಕುಮಾರ್ ಪತ್ನಿ ರೂಪಾ ಎಂಬಾಕೆ ತನ್ನ ಸೋದರಮಾವ ಹಾಗೂ ಸಹೋದರಿ ಜತೆಗೆ ಸೇರಿ ಓ ನಲ್ಲ, ನೀನಲ್ಲ.. ಕರಿಮಣಿ ಮಾಲೀಕ ನೀನಲ್ಲ ಎಂಬ ಸಾಂಗ್‌ಗೆ ರೀಲ್ಸ್ ಮಾಡಿ, ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಳು. ಈ ರೀಲ್ಸ್ ವಿಚಾರಕ್ಕೆ ಊರಲ್ಲಿ ಕುಮಾರ್‌ನನ್ನು ಕೆಲವರು ಕಾಲೆಳೆದು ಯಾರಪ್ಪಾ ಕರಿಮಣಿ ಮಾಲೀಕ ಎಂದು ಹೀಯಾಳಿದ್ದಾರೆ ಎನ್ನಲಾಗಿದೆ. ಇದರಿಂದ ಕುಮಾರ್‌ಗೆ ಅವಮಾನ ಅದಂತೆ ಆಗಿದೆ.
ಹೀಗಾಗಿ ಇದೇ ರೀಲ್ಸ್ ವಿಚಾರಕ್ಕೆ ದಂಪತಿ ನಡುವೆ ಮಾತಿನ ಚಕಮಕಿ ನಡೆದಿದೆ. ಮಾತ್ರವಲ್ಲದೇ ಸಣ್ಣ ಗಲಾಟೆ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದ ರೀಲ್ಸ್ ಅನ್ನು ತೆಗೆಯುವಂತೆ ಪತಿ ಕುಮಾರ್ ರೂಪಾಗೆ ಮನವಿ ಮಾಡಿದ್ದ. ಆದರೆ ಪತಿಯ ಮಾತನ್ನು ರೂಪಾ ನಿರಾಕರಿಸಿದ್ದಳು ಎನ್ನಲಾಗಿದೆ.
ಪತ್ನಿಯ ವರ್ತನೆಗೆ ಮನನೊಂದು ಕುಮಾರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ. ಇತ್ತ ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ