Site icon Vistara News

Road Accident : ಕೊಳ್ಳೇಗಾಲದಲ್ಲಿ ಭತ್ತ ಕಟಾವು ಯಂತ್ರದ ಲಾರಿಗೆ ಬೈಕ್‌ ಡಿಕ್ಕಿ; ಭೀಕರ ಅಪಘಾತಕ್ಕೆ ನಾಲ್ವರು ಬಲಿ

Bike collides with lorry of paddy harvesting machine in Kollegal Three dead in road accident

ಚಾಮರಾಜನಗರ: ಭತ್ತ ಕಟಾವು ಮಾಡುವ ಯಂತ್ರದ ಲಾರಿ ಹಾಗೂ ಬೈಕ್ ನಡುವೆ ಅಪಘಾತ (Road Accident) ಸಂಭವಿಸಿದೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಜಿನಕನಹಳ್ಳಿ ಬಳಿ ಭೀಕರ ಅಪಘಾತ (Kolegala Accident) ನಡೆದಿದೆ. ಲಾರಿಗೆ ಬೈಕ್‌ ಡಿಕ್ಕಿ ಹೊಡೆದ ರಭಸಕ್ಕೆ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಬ್ಬ ಬಾಲಕ ಗಾಯಗೊಂಡಿದ್ದ. ಸಂತೋಷ್(32), ಸೌಮ್ಯ (27), ನಿತ್ಯಸಾಕ್ಷಿ (4) ಮೃತ ದುರ್ದೈವಿಗಳು. ಗಾಯಾಳು ಅಭಿ (9) ಚಿಕಿತ್ಸೆಗೆ ಕೊಳ್ಳೇಗಾಲದ ಸಿಮ್ಸ್ ಆಸ್ಪತ್ರೆಗೆ ಕರೆತರಲಾಗುತ್ತಿತ್ತು. ಆದರೆ ಆತನೂ ಮಾರ್ಗ ಮಧ್ಯೆ ಅಸುನೀಗಿದ್ದಾನೆ.

ಮೃತಪಟ್ಟವರೆಲ್ಲ ಕೊಳ್ಳೇಗಾಲದ ಪಾಳ್ಯ ಗ್ರಾಮದವರು ಎನ್ನಲಾಗಿದೆ. ಒಂದೇ ಕುಟುಂಬದ ನಾಲ್ವರು ಬೈಕ್‌ನಲ್ಲಿ ಬರುವಾಗ ನಿಯಂತ್ರಣ ತಪ್ಪಿ ಎದುರು ಬಂದ ಲಾರಿಗೆ ಡಿಕ್ಕಿಯಾಗಿದೆ. ಬೈಕ್‌ನಿಂದ ಬಿದ್ದ ರಭಸಕ್ಕೆ ಸಂತೋಷ್‌, ಸೌಮ್ಯ ದಂಪತಿ ಹಾಗೂ ಮಗಳು ನಿತ್ಯಸಾಕ್ಷಿ ಮೂವರು ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಗ ಅಭಿ ಗಂಭೀರ ಗಾಯಗೊಂಡಿದ್ದ, ಇದೀಗ ಆತನೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಮೂವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗುತ್ತಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ನಡೆಸಲಿದ್ದಾರೆ.

ಮಧ್ಯರಾತ್ರಿ ನಿಯಂತ್ರಣ ತಪ್ಪಿ ಓಡಿದ ಕಾರು; ಯುವಕ ಸ್ಥಳದಲ್ಲೇ ಸಾವು

ಬೆಂಗಳೂರಿನಲ್ಲಿ ನಿಯಂತ್ರಣ ತಪ್ಪಿ ಓಡಿದ ಕಾರು ಸರಣಿ ಅಪಘಾತದಿಂದಾಗಿ (Road accident) ಯುವಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಭಾನುವಾರ ಮಧ್ಯರಾತ್ರಿ (Car Hits tree and driver dead) ಈ ಘಟನೆ ನಡೆದಿದೆ. ಬಾಣಸವಾಡಿ ಸಮೀಪದ ಸಿಎಂಆರ್ ರೋಡ್ ನಲ್ಲಿ ರಾತ್ರಿ 2.30ರ ಸುಮಾರಿಗೆ ನಡೆದ ಅಪಘಾತದಲ್ಲಿ ಮೃತಪಟ್ಟ ಯುವಕನನ್ನು ಮೆಲ್ವಿನ್ ಜೋಸ್ವಾ(25) ಎಂದು ಗುರುತಿಸಲಾಗಿದೆ (Bangalore News).

ಜೋಸ್ವಾ ಮೊದಲು ಮಧ್ಯರಾತ್ರಿ ಚಲಾಯಿಸಿಕೊಂಡು ಹೊರಟಿದ್ದ ಕಾರು ನಿಯಂತ್ರಣ ತಪ್ಪಿ ಮೊದಲು ಮರಕ್ಕೆ ಡಿಕ್ಕಿ ಹೊಡೆದಿತ್ತು. ಬಳಿಕ ಮರದ ಕೆಳಗೆ ನಿಂತಿದ್ದ ಕಾರು ಹಾಗೂ ಕಾಂಪೌಂಡ್‌ಗೆ ಡಿಕ್ಕಿ ಹೊಡೆದಿದೆ. ಈ ಹಂತದಲ್ಲಿ ತೀವ್ರ ಗಾಯಗೊಂಡು ಚಾಲಕ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಬಾಣಸವಾಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಸಂಭವಿಸಲು ಕಾರಣವೇನು? ಕುಡಿತದ ಮತ್ತಿನಲ್ಲಿದ್ದರೇ? ನಿದ್ದೆಯ ಮಂಪರೇ? ಅಥವಾ ವಾಹನದಲ್ಲಿ ಏನಾದರೂ ಸಮಸ್ಯೆ ಆಯಿತೇ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Makar Sankranti: ಸಂಕ್ರಾಂತಿ ಹಬ್ಬವನ್ನು ಆಚರಿಸಿದ್ರೆ ಈ ಊರಿಗೆ ಕೇಡು-ಜಾನುವಾರುಗಳ ಸಾವು!

ಕಾರಿನ ಟೈರ್‌ ಬದಲಿಸುತ್ತಿದ್ದಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿ; ಇಬ್ಬರು ಸಾವು

ತುಮಕೂರು: ಹಿಟ್‌ ಆ್ಯಂಡ್‌ ರನ್‌ (Hit and Run) ಪ್ರಕರಣವೊಂದರಲ್ಲಿ, ಕಾರಿನ ಟೈರ್‌ ಬದಲಿಸುತ್ತಿದ್ದ ಇಬ್ಬರು ಅಪರಿಚಿತ ವಾಹನ ಡಿಕ್ಕಿಯಾಗಿ (Road Accinent) ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕುಂಟೇಗೌಡನಹಳ್ಳಿ ಗೇಟ್ ಬಳಿ ಈ ದುರ್ಘಟನೆ ನಡೆದಿದೆ. ಬೆಂಗಳೂರಿನ ಆವಲಹಳ್ಳಿ ಮೂಲದ ಮಹೇಶ್ (38) ಹಾಗೂ ಉಮೇಶ್ (40) ಮೃತ ದುರ್ದೈವಿಗಳು.

ಬೆಂಗಳೂರು ಕಡೆಯಿಂದ ಶಿರಾ‌ ಕಡೆಗೆ ಹೋಗುತ್ತಿದ್ದ ಇವರು ತಮ್ಮ ಕಾರು ಪಂಚರ್ ಆದ ಹಿನ್ನೆಲೆಯಲ್ಲಿ ರಸ್ತೆ ಬದಿ ನಿಲ್ಲಿಸಿ ಕಾರಿನ ಟೈರ್ ಬದಲಿಸುತ್ತಿದ್ದರು. ಈ ಸಂದರ್ಭದಲ್ಲಿ ಹಿಂಬದಿಯಿಂದ ವೇಗವಾಗಿ ಬಂದು ಡಿಕ್ಕಿ ಹೊಡೆದು ಅಪರಿಚಿತ ವಾಹನ, ನಿಲ್ಲಿಸದೆ ಪರಾರಿಯಾಗಿದೆ.

ಇಬ್ಬರೂ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಸ್ಥಳಕ್ಕೆ ಕಳ್ಳಂಬೆಳ್ಳ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೃತದೇಹಗಳನ್ನು ತುಮಕೂರು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಲ್ಲಿಸಿದ್ದ ಲಾರಿಗೆ ಬೈಕ್‌ ಡಿಕ್ಕಿ, ಸವಾರ ಸಾವು

ಹಾವೇರಿ: ನಿಲ್ಲಿಸಿದ್ದ ಲಾರಿಗೆ ವೇಗವಾಗಿ ಬಂದ ಬೈಕ್ ಡಿಕ್ಕಿಯಾಗಿ, ಬೈಕ್ ಸವಾರ ಸ್ಥಳದಲ್ಲೆ ಸಾವಿಗೀಡಾಗಿದ್ದಾರೆ. ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನ ಗೆಜ್ಜಿಹಳ್ಳಿ ಗ್ರಾಮದ ಬಳಿ ಘಟನೆ ನಡೆದಿದೆ. ಹನುಮಕೊಪ್ಪ ಗ್ರಾಮದ ಮೆಹೆಬೂಬ (40) ಮೃತ ದುರ್ದೈವಿ.

ಹಾನಗಲ್‌ನ ಹೊಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಮೆಹೆಬೂಬ, ಬೆಳಗಿನ ಜಾವ ಹಾನಗಲ್‌ಗೆ ತೆರಳುವ ವೇಳೆ ಘಟನೆ ನಡೆದಿದೆ. ರಸ್ತೆ ಬದಿ ನಿಂತಿದ್ದ ಜಂಬಿಟ್ಟಿಗೆ ತುಂಬಿದ್ದ ಲಾರಿಗೆ ಹಿಂಬದಿಯಿಂದ ಡಿಕ್ಕಿ ಬೈಕ್‌ ಹೊಡೆದಿದೆ. ಮಂಜಿನಿಂದಾಗಿ ರಸ್ತೆ ಕಾಣದ ಪರಿಣಾಮ ಹೀಗಾಗಿರಬಹುದು ಎಂದು ಶಂಕಿಸಲಾಗಿದೆ. ಹಾನಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version