Site icon Vistara News

Karnataka Bandh : ಕಾವೇರಿ ನಮ್ಮದೆಂದ ತಮಿಳರು, ಮಸೀದಿಯಿಂದ ನೇರ ಪ್ರತಿಭಟನೆಗೆ ಇಳಿದ ಮುಸ್ಲಿಮರು

Karnataka Bandh Muslims protest at Chamaraja nagar

ಚಾಮರಾಜನಗರ: ಕರ್ನಾಟಕದ ಕಾವೇರಿ ಹೋರಾಟವು (Cauvery Protest) ಜಾತಿ-ಧರ್ಮ, ಭಾಷೆಗಳ ಹಂಗನ್ನು ಮೀರಿ ನಿಂತಿರುವುದಕ್ಕೆ ಚಾಮರಾಜ ನಗರದಲ್ಲಿ (Chamaraja nagara) ಶುಕ್ರವಾರ ಎರಡು ತಾಜಾ ಉದಾಹರಣೆಗಳು ದೊರೆತವು. ಕನ್ನಡ ಪರ ಸಂಘಟನೆಗಳು ಕರೆ ನೀಡಿದ ಕರ್ನಾಟಕ ಬಂದ್‌ಗೆ (Karnataka Bandh) ಚಾಮರಾಜ ನಗರದಲ್ಲಿ ತಮಿಳರು ದೊಡ್ಡ ಪ್ರಮಾಣದಲ್ಲಿ (Tamilians support Cauvery cause) ಬೆಂಬಲ ನೀಡಿದರು. ಮುಸ್ಲಿಂ ಸಮುದಾಯದವರಂತೂ (Muslim Community) ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆ (Friday prayer) ಮುಗಿಸಿ ನೇರ ಪ್ರತಿಭಟನೆಯನ್ನೇ ನಡೆಸಿದರು.

ಮಸೀದಿಯಿಂದ ನೇರ ಭುವನೇಶ್ವರಿ ವೃತ್ತಕ್ಕೆ ಬಂದ ಮುಸ್ಲಿಮರು

ಚಾಮರಾಜ ನಗರದ ಮುಸ್ಲಿಮರು ಶುಕ್ರವಾರ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ನೇರವಾಗಿ ಬಂದಿದ್ದು ಭುವನೇಶ್ವರಿ ವೃತ್ತಕ್ಕೆ. ಶುಕ್ರವಾರ ಚಾಮರಾಜ ನಗರ ಬಹುತೇಕ ಬಂದ್‌ ಆಗಿತ್ತು. ಅಂಗಡಿ ಮುಂಗಟ್ಟುಗಳು ಹೆಚ್ಚಿನವರು ತೆರೆದಿರಲಿಲ್ಲ. ಮುಸ್ಲಿಮರಲ್ಲಿ ಹೆಚ್ಚಿನವರು ವ್ಯಾಪಾರಿಗಳಾಗಿದ್ದು, ಅವರು ಕಾವೇರಿಗಾಗಿ ಅಂಗಡಿ ಬಂದ್‌ ಮಾಡಿದ್ದರು. ಗುರುವಾರ ಈದ್‌ ಮಿಲಾದ್‌ ಹಿನ್ನೆಲೆಯಲ್ಲಿ ಅಂಗಡಿಗಳನ್ನು ಬಂದ್‌ ಮಾಡಿದ್ದರೂ ಮರುದಿನವೇ ಕಾವೇರಿಗಾಗಿ ವ್ಯಾಪಾರ ನಿಲ್ಲಿಸಲು ಹಿಂದೆ ಮುಂದೆ ನೋಡಿರಲಿಲ್ಲ.

Karnataka Bandh Tamilians protest at Chamaraja nagar

ಶುಕ್ರವಾರ ಮಸೀದಿಗೆ ಪ್ರಾರ್ಥನೆ ಸಲ್ಲಿಸಲು ಬಂದವರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ನಿರ್ಧಾರಕ್ಕೆ ಬಂದರು. ಮಸೀದಿಯಲ್ಲಿ ನಮಾಜ್‌ ಮಾಡಿದ ಬಳಿಕ ನೇರವಾಗಿ ಅವರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇರುವ ಭುವನೇಶ್ವರಿ ವೃತ್ತಕ್ಕೆ ಆಗಮಿಸಿದರು. ಅಲ್ಲಿ ಕನ್ನಡ ಪರ ಹೋರಾಟಗಾರರು ಆಗಲೇ ಪ್ರತಿಭಟನೆ ನಡೆಸುತ್ತಿದ್ದು, ಜತೆಯಾಗಿ ಬಂದ ಮುಸ್ಲಿಮರನ್ನು ಸ್ವಾಗತಿಸಿದರು. ಹಿರಿಯರು, ಯುವಕರು ಮತ್ತು ಮಕ್ಕಳು ಕೂಡಾ ಜತೆಯಾಗಿ ಬಂದಿದ್ದರು.

Karnataka Bandh Tamilians protest at Chamaraja nagar

ಕಾವೇರಿ ನಮ್ಮದು, ಸರ್ಕಾರ ನೀರು ಬಿಡುವ ಮೂಲಕ ತಪ್ಪು ಮಾಡುತ್ತಿದೆ, ಕೇಂದ್ರ ಸರ್ಕಾರ, ಸುಪ್ರೀಂಕೋರ್ಟ್‌, ಪ್ರಾಧಿಕಾರಗಳು ನಮ್ಮ ಯಾವ ಮಾತನ್ನೂ ಕೇಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರ ಕೂಗಿದರು.

ಕನ್ನಡ ನಾಡಿನ ಪರ ನಿಂತ ತಮಿಳು ಸಂಘಟನೆಗಳು

ಇತ್ತ ಚಾಮರಾಜ ನಗರದ ತಮಿಳು ಸಂಘಟನೆಗಳು ಕೂಡಾ ಪ್ರತಿಭಟನೆಗೆ ಸಾಥ್‌ ನೀಡಿದವು. ಕಾಡಂಚಿನ ಗ್ರಾಮವಾದ ಹೂಗ್ಯಂನಲ್ಲೂ ಕಾವೇರಿ ಕಹಳೆ ಮೊಳಗುವಂತೆ ಮಾಡಿದರು.

ಹೋರಾಟಕ್ಕಿಳಿದ ಹನೂರಿನ ಕಾಡಂಚಿನ ಗ್ರಾಮದಲ್ಲಿ ತಮಿಳರು ಹೆಚ್ಚಾಗಿದ್ದಾರೆ. ಅವರೆಲ್ಲರೂ ಶುಕ್ರವಾರ ತಮ್ಮ ಎಲ್ಲ ವ್ಯಾಪಾರ ವಹಿವಾಟುಗಳನ್ನು ಬಂದ್‌ ಮಾಡಿದ್ದರು.

ಚಾಮರಾಜ ನಗರದ ಹೂಗ್ಯಂ ಹಳ್ಳಿಯಲ್ಲಿ ತಮಿಳರ ಪ್ರತಿಭಟನೆ

ಕಾವೇರಿ ನಮ್ಮದು ಎಂದು ಹೇಳಿದ ತಮಿಳು ಸಂಘಟನೆಗಳು ಕನ್ನಡ, ಕಾವೇರಿ ಪರ ನಿಂತವು. ಈ ಊರಿನಲ್ಲಿ ತಮಿಳರ ಅಂಗಡಿಗಳೇ ಹೆಚ್ಚು. ಆದರೆ ಗುರುವಾರವೇ ಎಲ್ಲರೂ ಅಂಗಡಿ ಮುಂಗಟ್ಟು ಮುಚ್ಚುವ ತೀರ್ಮಾನಕ್ಕೆ ಬಂದಿದ್ದರು.

ಅಂಗಡಿ ಬಂದ್‌ ಮಾಡಿದ್ದಲ್ಲದೆ ಪ್ರತಿಭಟನೆಯನ್ನೂ ನಡೆಸಿದ ತಮಿಳಿಗರು ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಕೂಡದು ಎಂದು ಆಗ್ರಹಿಸಿದರು. ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯ ಆಗುವುದನ್ನು ಒಪ್ಪುವುದಿಲ್ಲ ಎಂದರು. ನಾವು ತಮಿಳು ಭಾಷಿಗರೇ ಆಗಿರಬಹುದು. ಆದರೆ, ನಮಗೆ ಅನ್ನ ನೀಡುತ್ತಿರುವುದು ಕರ್ನಾಟಕ, ಕಾವೇರಿ ನಮ್ಮದು ಎಂದು ಅವರು ಹೇಳಿಕೊಂಡರು.

Exit mobile version