Site icon Vistara News

Animal Attack : ಕಾಡು ಪ್ರಾಣಿ ದಾಳಿಯಿಂದ ಗಂಭೀರ ಗಾಯಗೊಂಡಿದ್ದ ಮಗು ಸಾವು; ಶವ ಇಟ್ಟು ಪ್ರತಿಭಟನೆ

Wild animal attack

ಚಾಮರಾಜನಗರ: ಕಾಡುಪ್ರಾಣಿ ದಾಳಿಯಿಂದ (Wild animal attack) ಗಂಭೀರವಾಗಿ ಗಾಯಗೊಂಡಿದ್ದ ಮಗುವೊಂದು (Child death) ಮೃತಪಟ್ಟಿದೆ. ಇದೀಗ ಜನರು ಮಗುವಿನ ಶವವನ್ನು ಅರಣ್ಯ ಇಲಾಖೆ ಕಚೇರಿ (Protest in front of forest department office) ಮುಂದೆ ಇಟ್ಟು ನ್ಯಾಯ ಕೇಳುತ್ತಿದ್ದಾರೆ.

ಚಾಮರಾಜ ನಗರ ಜಿಲ್ಲೆ ಯಳಂದೂರು ತಾಲೂಕಿನ ಯರಿಯೂರು ಗ್ರಾಮದ ಮೂರು ವರ್ಷದ ಮಗು ರುಕ್ಮಿಣಿ ಮೇಲೆ 15 ದಿನಗಳ ಹಿಂದೆ ಕಾಡು ಪ್ರಾಣಿಯೊಂದು ದಾಳಿ ನಡೆಸಿತ್ತು. ಅಂಗಳದಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆ ಈ ದಾಳಿ ನಡೆದಿತ್ತು. ದಾಳಿಗೊಳಗಾದ ಮಗು ಮನೆಯಂಗಳದಲ್ಲಿ ಬಿದ್ದಿತ್ತು. ಹಾಗಾಗಿ ಯಾವ ಪ್ರಾಣಿಯ ದಾಳಿ ಎನ್ನುವುದು ಯಾರಿಗೂ ಗೊತ್ತಿರಲಿಲ್ಲ. ಚಿರತೆ ದಾಳಿ ಎಂದು ಶಂಕಿಸಲಾಗಿತ್ತು.

ಅಂದು ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಕಳೆದ 15 ದಿನಗಳಿಂದ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಗು ಗುರುವಾರ ಚಿಕಿತ್ಸೆ ಫಲಿಸದೆ ಮೃತಪಟ್ಟಿದೆ.

ಮಗುವಿನ ಸಾವಿನಿಂದ ಕೆರಳಿದ ಕುಟುಂಬಿಕರು ಅರಣ್ಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ, ಯಳಂದೂರು ವಲಯ ಅರಣ್ಯಾಧಿಕಾರಿ ಕಚೇರಿ ಎದುರು ಮಗುವಿನ ಶವ ಇಟ್ಟು ಪ್ರತಿಭಟನೆ ನಡೆಸಿದ್ದಾರೆ.

ಪ್ರಾಣಿ ದಾಳಿಯಿಂದ ಮಗು ಗಂಭೀರವಾಗಿ ಗಾಯಗೊಂಡಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿಲ್ಲ ಎನ್ನುವುದು ಅವರ ಪ್ರಧಾನ ಆಕ್ರೋಶ. ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಮಗು ಬಲಿಯಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಮಗು ಸಾವನ್ನಪ್ಪಿದಾಗಲೂ ಸೌಜನ್ಯಕ್ಕೂ ಸಾಂತ್ವನ ಹೇಳಲು ಬಾರದ ಅರಣ್ಯ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸ್ಥಳಕ್ಕೆ ಡಿಎಫ್ ಒ ಬರಬೇಕೆಂದು ಪಟ್ಟು ಹಿಡಿದಿರುವ ಪ್ರತಿಭಟನಾಕಾರರು ಅಲ್ಲಿವರೆಗೆ ಶವವನ್ನು ತೆಗೆದುಕೊಂಡು ಹೋಗುವುದಿಲ್ಲ ಎನ್ನುತ್ತಿದ್ದಾರೆ.

ವಿಜಯ ನಗರದಲ್ಲಿ ರೈತನ ಮೇಲೆ ಕರಡಿಗಳ ದಾಳಿ

ವಿಜಯನಗರ: ರಸ್ತೆಯಲ್ಲಿ ಹೋಗುತ್ತಿದ್ದ ರೈತರೊಬ್ಬರ ಮೇಲೆ ದಾಳಿ ಮಾಡಿ ಮುಖ ಮತ್ತಿತರ ಭಾಗಗಳಿಗೆ ಗಂಭೀರ ಗಾಯ ಮಾಡಿದ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ನಡೆದಿದೆ.

ಕೂಡ್ಲಿಗಿ ತಾಲೂಕಿನ ಗುಂಡುಮುಣಗು ಗ್ರಾಮದ ಸಿದ್ದಾಪುರ ರಸ್ತೆಯಲ್ಲಿ ಹೋಗುತ್ತಿದ್ದ ಶರಣಯ್ಯ ಬಿಎಂ (60) ಎಂಬವರ ಮೇಲೆ ಕರಡಿ ದಾಳಿ ನಡೆದಿದೆ. ಶರಣಯ್ಯ ಅವರು ತಮ್ಮ ಹೊಲಕ್ಕೆ ಹೋಗುತ್ತಿದ್ದಾಗ ಏಕಾಏಕಿ ದಾಳಿ ಮಾಡಿದ ಈ ಕರಡಿ ಅವರ ಮುಖದ ಭಾಗವನ್ನು ಸಂಪೂರ್ಣವಾಗಿ ಕಿತ್ತು ಹಾಕಿದೆ.

ರೈತನ ಮುಖಕ್ಕೆ ಹಿಗ್ಗಾಮುಗ್ಗಾ ಕಚ್ಚಿ ಗಾಯಗೊಳಿಸಿದ ಕರಡಿ ದೇಹದ ಇತರ ಭಾಗವನ್ನೂ ಬಿಡದೆ ಕಚ್ಚಿದೆ. ಈ ದಾಳಿಯ ತೀವ್ರತೆಯನ್ನು ನೋಡಿದರೆ ಶರಣಯ್ಯ ಅವರು ಬದುಕಿ ಬಂದಿದ್ದೇ ದೊಡ್ಡ ಪವಾಡ ಎಂಬಂತೆ ಕಾಣುತ್ತಿದೆ.

ಕರಡಿ ಮತ್ತು ಮರಿ ಕರಡಿ ಎರಡೂ ಸೇರಿ ರೈತನ ಮೇಲೆ ದಾಳಿ ಮಾಡಿದ್ದರಿಂದ ಮುಖ, ಹಣೆಯ ಮಾಂಸ ಕಿತ್ತು ಬಂದಿದೆ. ಚಿಕ್ಕಜೋಗಿಹಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ರೈತನಿಗೆ ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿ ವಿಮ್ಸ್ ಗೆ ರವಾನೆ ಮಾಡಲಾಗಿದೆ.

Exit mobile version