Site icon Vistara News

Veerappan Case : ಪೊಲೀಸರ ಹತ್ಯೆ; ವೀರಪ್ಪನ್‌ ಗ್ಯಾಂಗ್‌ನಲ್ಲಿದ್ದ ಸ್ಟೆಲ್ಲಾ ಮೇರಿಗೆ ಖುಲಾಸೆ

Veerappan Case Stella Mary

ಚಾಮರಾಜನಗರ: ಕುಖ್ಯಾತ ಕಾಡುಗಳ್ಳ ನರಹಂತಕ ವೀರಪ್ಪನ್‌ ಗ್ಯಾಂಗ್‌ (Veerappan Case) 1992ರ ಮೇ ತಿಂಗಳಲ್ಲಿ ತಮಿಳುನಾಡಿನ ರಾಮಾಪುರಂ ಪೊಲೀಸ್‌ ಠಾಣೆಯ ಮೇಲೆ ದಾಳಿ (Ramapuram Police station attack) ಮಾಡಿ ಐವರು ಸಿಬ್ಬಂದಿಯನ್ನು ಕೊಲೆ ಮಾಡಿ ಶಸ್ತ್ರಾಸ್ತ್ರಗಳೊಂದಿಗೆ ಪರಾರಿಯಾಗಿತ್ತು. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪ ಹೊತ್ತಿದ್ದ ಅಂದು ಅಪ್ರಾಪ್ತ ಬಾಲಕಿಯಾಗಿದ್ದ ಮಹಿಳೆಯೊಬ್ಬರಿಗೆ ಕ್ಲೀನ್‌ ಚಿಟ್‌ (Clean chit to Stella Mary) ಸಿಕ್ಕಿದೆ. ಹೀಗೆ ಪೊಲೀಸ್‌ ಠಾಣೆ ದಾಳಿ ಪ್ರಕರಣದಲ್ಲಿ ದೋಷಮುಕ್ತರಾದವರು ಕೊಳ್ಳೇಗಾಲ ತಾಲೂಕಿನ ಜಾಗೇರಿ ನಿವಾಸಿಯಾಗಿರುವ ಸ್ಟೆಲ್ಲಾ ಮೇರಿ (Stella Mary)!

ರಾಮಾಪುರ ಪೊಲೀಸ್ ಠಾಣೆ ಮೇಲೆ ದಾಳಿ ಪ್ರಕರಣದಲ್ಲಿ ಆರೋಪಿಯಾಗಿದ್ದ ಸ್ಟೆಲ್ಲಾ ಮೇರಿ ಅವರನ್ನು ಚಾಮರಾಜನಗರದ ಬಾಲ ನ್ಯಾಯ ಮಂಡಳಿ ಖುಲಾಸೆಗೊಳಿಸಿದೆ. ಪಾಲಾರ್ ಬಾಂಬ್ ಸ್ಫೋಟದ ಆರೋಪಿಯೂ ಆಗಿದ್ದ ಸ್ಟೆಲ್ಲಾ ಮೇರಿಯನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿ ಬಾಲ ನ್ಯಾಯಮಂಡಳಿ ಆದೇಶ ಹೊರಡಿಸಿದೆ.

ಏನಿದು ಪ್ರಕರಣ, ಯಾರು ಈ ಸ್ಟೆಲ್ಲಾ ಮೇರಿ?

ವೀರಪ್ಪನ್‌ ತನ್ನ ಕ್ರೌರ್ಯದ ಉತ್ತುಂಗದಲ್ಲಿ ಹಲವಾರು ಪೊಲೀಸ್‌ ಠಾಣೆಗಳ ಮೇಲೆ ದಾಳಿ ಮಾಡಿದ್ದ. 1992ರ ಆಸುಪಾಸಿನಲ್ಲಿ ನಡೆದ ಕೃತ್ಯಗಳಲ್ಲಿ ಸ್ಟೆಲ್ಲಾ ಮೇರಿ ಕೂಡಾ ಭಾಗಿಯಾದ ಆರೋಪ ಎದುರಾಗಿತ್ತು. ಆದರೆ, ಸ್ಟೆಲ್ಲಾ ಮೇರಿಯ ಬಂಧನವಾಗಿದ್ದು 2020ರ ಫೆಬ್ರವರಿಯಲ್ಲಿ. ಅಂದು ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪವಿದ್ದರೂ ಅಂದು ಆಕೆಯ ಬಂಧನ ನಡೆದಿರಲಿಲ್ಲ. ಆಕೆಯನ್ನು ಪೊಲೀಸ್‌ ಇಲಾಖೆ ಮರೆತೇ ಬಿಟ್ಟಂತಿತ್ತು. ಹಳೆ ಕೇಸುಗಳ ಪರಿಶೀಲನೆ ಸಂದರ್ಭದಲ್ಲಿ ಅದು ಮರಳಿ ಮೇಲೆ ಬಂದಿತ್ತು.

2020ರಲ್ಲಿ ಬಂಧನಕ್ಕೆ ಒಳಗಾದ ಬಳಿಕ ಆಕೆಯ ಮೇಲೆ ಟಾಡಾ, ಶಸ್ತ್ರಾಸ್ತ್ರ ಕಾಯ್ದೆ, ಸ್ಫೋಟಕ ಕಾಯ್ದೆ ಸೇರಿದಂತೆ ವಿವಿಧ ಆರೋಪಗಳಡಿ ಪ್ರಕರಣ ದಾಖಲಾಗಿತ್ತು. ಸ್ಟೆಲ್ಲಾ ಮೇರಿ ಬಂಧನ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಮೇರಿ ಪರವಾಗಿ ಮಾನವ ಹಕ್ಕುಗಳ ಸಂಘಟನೆಗಳು ನಿಂತಿದ್ದವು.

1992ರಲ್ಲಿ ರಾಮಾಪುರ ಪೊಲೀಸ್‌ ಠಾಣೆ ಮೇಲೆ ದಾಳಿ ಮಾಡಿದಾಗ ಸ್ಟೆಲ್ಲಾ ಮೇರಿ ಇನ್ನೂ 13 ವರ್ಷದ ಹುಡುಗಿಯಾಗಿದ್ದಳು. ಅಪ್ರಾಪ್ತ ಬಾಲಕಿಯಾಗಿದ್ದಳು. ಹೀಗಾಗಿ ಆಕೆಯ ವಿಚಾರಣೆಯನ್ನು ಬಾಲ ನ್ಯಾಯಮಂಡಳಿಯಲ್ಲಿ ನಡೆಸಬೇಕು ಎಂದು ಕೇಳಿಕೊಳ್ಳಲಾಗಿತ್ತು. ಇದರಂತೆ ಚಾಮರಾಜನಗರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಪ್ರಕರಣವನ್ನು ಬಾಲ ನ್ಯಾಯಮಂಡಳಿಗೆ ವಹಿಸಿತ್ತು.

ಆರೋಪ ಮುಕ್ತಗೊಳಿಸಲು ಕಾರಣವಾದ ಅಂಶ ಯಾವುದು?

ಸ್ಟೆಲ್ಲಾ ಮೇರಿ ವೀರಪ್ಪನ್‌ ಗ್ಯಾಂಗ್‌ನಲ್ಲಿ ಇದ್ದಿದ್ದು ನಿಜ. ಆಕೆ ರಾಮಾಪುರ ಪೊಲೀಸ್‌ ಠಾಣೆ ದಾಳಿಯಲ್ಲಿ ಭಾಗಿಯಾಗಿರಲಿಲ್ಲ. ಸ್ಟೆಲ್ಲಾ ಮೇರಿಯನ್ನು ಆಗ ಅಪಹರಣ ಮಾಡಿ ಗ್ಯಾಂಗ್‌ ಗೆ ಸೇರಿಸಲಾಗಿತ್ತು. ಆಗ ಅವಳು ಸಣ್ಣ ಬಾಲಕಿ. ಸ್ಟೆಲ್ಲಾ ಮೇರಿಯನ್ನು ವೀರಪ್ಪನ್ ಸಹಚರ ಸುಂಡವಲಿಯಾರ್ ಅಪಹರಿಸಿ ಮದುವೆಯಾಗಿದ್ದ. (ಆತ ಬಳಿಕ ಪೊಲೀಸ್ ಎನ್​ಕೌಂಟರ್‌ನಲ್ಲಿ ಬಲಿಯಾಗಿದ್ದ). ಹೀಗಾಗಿ ಈ ಪ್ರಕರಣದಲ್ಲಿ ಸ್ಟೆಲ್ಲಾ ಮೇರಿಯ ಪಾತ್ರವಿಲ್ಲ, ಆಕೆ ಅಪರಾಧಿಯಲ್ಲ ಎಂದು ಸ್ಟೆಲ್ಲಾ ಪರವಾಗಿ ವಾದ ಮಾಡಲಾಗಿದೆ. ಇದನ್ನು ಒಪ್ಪಿದ ಕೋರ್ಟ್‌ ಆಕೆಯನ್ನು ದೋಷಮುಕ್ತಗೊಳಿಸಿದೆ.

ಈ ಕುರಿತು ಕಕ್ಷಿದಾರರ ಪರವಾಗಿ ವಾದಿಸಿದ ವಕೀಲ ಪಿ.ಪಿ.ಬಾಬುರಾಜ್‌ ಪ್ರತಿಕ್ರಿಯಿಸಿ, ವೀರಪ್ಪನ್ ಗ್ಯಾಂಗ್ ನಿಂದ ಅಪಹರಣಕ್ಕೊಳಗಾಗಿ ಬಳಿಕ ಪೊಲೀಸರ ಕಣ್ತಪ್ಪಿನಿಂದ ಪ್ರಕರಣಗಳಲ್ಲಿ ಈಕೆಯ ಹೆಸರು ಸೇರಿತ್ತು. ಸಾಕ್ಷ್ಯಾಧಾರಗಳ ಕೊರತೆಯಿಂದ ಹಾಗೂ ಘಟನೆಗಳು ನಡೆದ ವೇಳೆ ಅಪ್ರಾಪ್ತೆಯಾಗಿದ್ದರಿಂದ ಬಾಲನ್ಯಾಯಮಂಡಲಿಯು ಎಲ್ಲಾ ಪ್ರಕರಣಗಳಿಂದ ಸ್ಟೆಲ್ಲಾ ಮೇರಿಯನ್ನು ಖುಲಾಸೆಗೊಳಿಸಿದೆ ಎಂದು ತಿಳಿಸಿದರು.

ಸ್ಟೆಲ್ಲಾ ಮೇರಿ ಪರವಾಗಿ ವಾದಿಸಿದ ವಕೀಲ ಪಿ ಪಿ ಬಾಬುರಾಜ್‌ ಅವರು, “ವೀರಪ್ಪನ್ ಗ್ಯಾಂಗ್ ನಿಂದ ಅಪಹರಣಕ್ಕೊಳಗಾಗಿ ಬಳಿಕ ಪೊಲೀಸರ ಕಣ್ತಪ್ಪಿನಿಂದ ಪ್ರಕರಣಗಳಲ್ಲಿ ಈಕೆಯ ಹೆಸರು ಸೇರಿತ್ತು. ಸಾಕ್ಷ್ಯಾಧಾರಗಳ ಕೊರತೆಯಿಂದ ಹಾಗೂ ಘಟನೆಗಳು ನಡೆದ ವೇಳೆ ಅಪ್ರಾಪ್ತೆಯಾಗಿದ್ದರಿಂದ ಬಾಲ ನ್ಯಾಯ ಮಂಡಳಿಯು ಎಲ್ಲ ಪ್ರಕರಣಗಳಿಂದ ಸ್ಟೆಲ್ಲಾ ಮೇರಿಯನ್ನು ಖುಲಾಸೆಗೊಳಿಸಿದೆ” ಎಂದು ಹೇಳಿದ್ದಾರೆ.

ಐವರು ಪೊಲೀಸರ ಹತ್ಯೆ ನಡೆದ ರಾಮಾಪುರಂ ಪೊಲೀಸ್‌ ಠಾಣೆ ಈಗ ಹೇಗಿದೆ?

Exit mobile version