ಬೆಂಗಳೂರು: ಈಗಾಗಲೆ ಜನಸಂಕಲ್ಪ ಯಾತ್ರೆಯನ್ನು ಬಿಜೆಪಿ ಆರಂಭಿಸಿತ್ತಾದರೂ ಅದು ಹೆಚ್ಚಿನ ಸದ್ದು ಮಾಡದೆ ತನ್ನಿಂತಾನೆ ಮುಕ್ತಾಯಗೊಂಡಿದೆ. ಇದೀಗ ನಾಲ್ಕು ರಥ ಯಾತ್ರೆಗಳಿಗೆ ಚಾಲನೆ ನೀಡಲಾಗುತ್ತಿದೆ. ಈ ಯಾತ್ರೆಯನ್ನು ಸಫಲಗೊಳಿಸುವುದು ಚುನಾವಣೆ ಮೇಲೆ ಹೆಚ್ಚಿನ ಪರಿಣಾಮ ಬೀರುವುದರಿಂದ ಬಿಜೆಪಿ ಹೆಚ್ಚಿನ ಜಾಗ್ರತೆ ವಹಿಸಿದೆ.
ಕರ್ನಾಟಕ ವಿಧಾನ ಸಭಾ ಚುನಾವಣಾ ದೃಷ್ಟಿಯಿಂದ ಬಹಳ ಮಹತ್ವ ಪಡೆದಿಕೊಂಡಿರುವ ರಥ ಯಾತ್ರೆಯು ರಾಜ್ಯದ ೨೨೪ ವಿಧಾನ ಸಭಾ ಕ್ಷೇತ್ರಗಳಲ್ಲಿ ಸಂಚಾರ ಮಾಡಲಿದೆ. ಯಾತ್ರೆಯಲ್ಲಿ ಬಿಜೆಪಿಯ ರಾಷ್ಟ್ರ ಮತ್ತು ರಾಜ್ಯ ನಾಯಕರು ಭಾಗಿಯಾಗಲಿದ್ದಾರೆ.
ಈಗಾಗಲೆ ರಥಯಾತ್ರೆ ಬಸ್‌ಗಳು ಸಿದ್ದಗೊಂಡಿದ್ದು, ಬಿಜೆಪಿ ಕಚೇರಿ ಬಳಿ ಬಸ್ ಗಳಿಗೆ ಬಿಜೆಪಿ ನಾಯಕರು ಪೂಜೆ ಸಲ್ಲಿಸುತ್ತಾರೆ. ಮೊದಲು ರಥಯಾತ್ರೆ ಮಾರ್ಚ್ ೧ರಂದು ಮಲೆ ಮಹದೇಶ್ವರ ದೇವಸ್ಥಾನ ದಿಂದ ಪ್ರಾರಂಭವಾಗಲಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಉದ್ಘಾಟನೆ ಮಾಡಲಿದ್ದಾರೆ. ಈ ರಥವು ಚಾಮರಾಜನಗರ, ಮೈಸೂರು, ಮಂಡ್ಯ, ಹಾಸನ, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಮೂಲಕ ದಾವಣಗೆರೆಗೆ ಸಾಗಲಿದೆ.
ಎರಡನೇ ತಂಡ ಮಾರ್ಚ್ ೨ ರಂದು ಬೆಳಗಾವಿ ಜಿಲ್ಲೆ ಖಾನಾಪುರದ ನಂದಗಢದ ಸಂಗೊಳ್ಳಿ ರಾಯಣ್ಣ ಸ್ಮಾರಕದಿಂದ ಪ್ರಾರಂಭವಾಗಲಿದೆ. ಕೇಂದ್ರ ಸಚಿವ ರಾಜನಾಥ ಸಿಂಗ್ ಉದ್ಘಾಟನೆ ಮಾಡಲಿದ್ದಾರೆ. ಈ ರಥವು ಬೆಳಗಾವಿ, ವಿಜಯಪುರ, ಬಾಗಲಕೋಟೆ, ಗದಗ, ಧಾರವಾಡ, ಉತ್ತರ ಕನ್ನಡ, ಹಾವೇರಿ ಮೂಲಕ ಸಾಗಿ ದಾವಣಗೆರೆ ತಲುಪಲಿದೆ.
ಮೂರನೇ ತಂಡವು ಮಾರ್ಚ್ ೩ ರಂದು ಬಸವಕಲ್ಯಾಣದ ಅನುಭವ ಮಂಟಪದಿಂದ ಆರಂಭವಾಗಲಿದ್ದು, ಕೇಂದ್ರ ಗೃಹಸಚಿವ ಅಮಿತ್ ಶಾ ಉದ್ಘಾಟನೆ ಮಾಡಲಿದ್ದಾರೆ. ಬೀದರ್, ಕಲ್ಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ ಮೂಲಕ ಸಾಗಿ ದಾವಣಗೆರೆ ತಲುಪಲಿದೆ.
ನಾಲ್ಕನೇ ತಂಡವು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಕೆಂಪೇಗೌಡ ಪ್ರತಿಮೆಯಿಂದ ಪ್ರಾರಂಭವಾಗಲಿದೆ. ಬೆಂಗಳೂರು ಗ್ರಾಮಾಂತರ, ರಾಮನಗರ, ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ ಮೂಲಕ ಸಾಗಿ ದಾವಣಗೆರೆ ಸೇರಲಿದೆ. ಅಂತಿಮವಾಗಿ ದಾವಣಗೆರೆ ಯಲ್ಲಿ ಮಹಾ ಸಮಾವೇಶ ಮಾಡಿ ಬಿಜೆಪಿ ರಥಯಾತ್ರೆ ಅಂತ್ಯವಾಗಲಿದೆ.
ಮಲೆ ಮಹದೇಶ್ವರ ಬೆಟ್ಟದಿಂದ ಆರಂಭವಾಗಲಿರುವ ರಥಯಾತ್ರೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಕಚೇರಿಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಸಭೆ ನಡೆಯಿತು. ಮೈಸೂರು ವಿಭಾಗದ ಪ್ರಭಾರಿಗಳ ಜೊತೆ ಸಭೆ ನಡೆದಿದ್ದು, ಚುನಾವಣಾ ಸಹ ಉಸ್ತುವಾರಿ ಅಣ್ಣಾಮಲೈ, ಮೈಸೂರು ಸಂಸದ ಪ್ರತಾಪ್ ಸಿಂಹ, ಮೈಸೂರು ಜಿಲ್ಲಾಧ್ಯಕ್ಷ ಸೇರು ಪ್ರಭಾರಿಗಳು ಭಾಗಿಯಾಗಿದ್ದರು. ರಥಯಾತ್ರೆಯ ಜತೆಗೆ ಮಾರ್ಚ್ 11ರಂದು ರಾಷ್ಟ್ರೀಯ ಹೆದ್ದಾರಿ ಉದ್ಘಾಟನೆಗೆ ಪ್ರಧಾನಿ ಮೋದಿ ಆಗಮಿಸುವ ಕಾರ್ಯಕ್ರಮವನ್ನೂ ಸಫಲಗೊಳಿಸಲು ಚರ್ಚೆ ನಡೆಸಲಾಗಿದೆ.
ಇದನ್ನೂ ಓದಿ: BJP Rathayatre : ಬಿಜೆಪಿ ರಾಜ್ಯವ್ಯಾಪಿ ರಥಯಾತ್ರೆಗಾಗಿ ನಾಲ್ಕು ರಥಗಳು ರೆಡಿ, ಸ್ಪೆಷಲ್ ವಾಹನಗಳ ವಿಶೇಷತೆ ಏನು?
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ರಾಜ್ಯ ಬಿಜೆಪಿ ಪ್ರಭಾರಿ ಅರುಣ್ ಸಿಂಗ್, ಬೂತ್ ವಿಜಯ ಅಭಿಯಾನ ಸಫಲವಾಗಿದೆ. ಈಗ ವಿಜಯ ಸಂಕಲ್ಪ ಅಭಿಯಾನ ಮಾಡ್ತಿದೀವಿ. ನಾಳೆ ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ ದೊರೆಯಲಿದೆ. ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲೂ ಯಾತ್ರೆ ನಡೆಯುತ್ತದೆ. ವಿಜಯ ಸಂಕಲ್ಪ ಯಾತ್ರೆ ಬಳಿಕ ಬಿಜೆಪಿ ಗೆಲ್ಲೋದು ಸ್ಪಷ್ಟವಾಗಲಿದೆ. ಬಿಜೆಪಿಗೆ 150 ಸ್ಥಾನ ಸಿಗುತ್ತೆ, ಮತ್ತೆ ನಾವೇ ಅಧಿಕಾರ ರಚಿಸ್ತೇವೆ.
ನಿನ್ನೆ ಮೋದಿಯವರ ರೋಡ್ ಶೋಗೆ ಲಕ್ಷ ಲಕ್ಷ ಜನ ಸೇರಿದ್ರು. ಜನ ಬಿಜೆಪಿ ಪರ ಇದಾರೆ ಅನ್ನೋದಿಕ್ಕೆ ಇದೇ ಸಾಕ್ಷಿ. ಜನ ಕಾಂಗ್ರೆಸ್ ಪರ ಇಲ್ಲ. ಕಾಂಗ್ರೆಸ್ ನಾಯಕರು ಭ್ರಮೆಯಲ್ಲಿದ್ದಾರೆ. ಕಾಂಗ್ರೆಸ್‌ನವರಿಗೆ ನಮ್ಮ ವಿರುದ್ಧ ಮಾತಾಡಲು ಯಾವುದೇ ವಿಚಾರ ಇಲ್ಲ. ಅವರ ಪಕ್ಷದಲ್ಲಿ ನಾಯಕರೂ ಇಲ್ಲ, ಕಾರ್ಯಕರ್ತರೂ ಇಲ್ಲ, ಸಂಘಟನೆಯೂ ಇಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಗಿಂತ ಬಿಜೆಪಿ ಮುಂದೆ ಇದೆ ಎಂದರು.