ಧಾರವಾಡ: ʻʻಚಾಮರಾಜ ಪೇಟೆಯ ಈದ್ಗಾ ಮೈದಾನ ಕಂದಾಯ ಇಲಾಖೆಗೆ ಸಂಬಂಧಿಸಿದ್ದು ಎಂದು ಈಗಾಗಲೇ ಸ್ಪಷ್ಟವಾಗಿದೆ. ಹೀಗಿರುವಾಗ ಈ ಜಾಗದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ಕೊಡುವುದಿಲ್ಲ ಎಂದು ಶಾಸಕ ಜಮೀರ್ ಅಹ್ಮದ್ ಅವರು ಹೇಳಿಕೆ ನೀಡುವ ಮೂಲಕ ಕೋಮುಗಲಭೆ ಸೃಷ್ಠಿಸುವ ಕೆಲಸ ಮಾಡುತ್ತಿದ್ದಾರೆ. ಹಾಗಿದ್ದರೂ ಸರ್ಕಾರ ಅವರ ಮೇಲೆ ಏಕೆ ಕ್ರಮ ಕೈಗೊಂಡಿಲ್ಲ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಪ್ರಶ್ನಿಸಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು, ವಿಶ್ವಭಾರತಿ ಸಂಸ್ಥೆಯ ಮುಖ್ಯಸ್ಥ ಭಾಸ್ಕರ್ ಮೇಲೆ ಕೋಮು ಭಾವನೆ ಕೆರಳಿಸುತ್ತಿದ್ದಾರೆ ಎಂದು ಅವರ ಮೇಲೆ ಕೇಸ್ ಹಾಕಿರುವ ಸರ್ಕಾರ ಈ ಜಮೀರ್ ಅಹ್ಮದ್ ಮೇಲೆ ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದ್ದಾರೆ.
ʻʻಈ ಸರ್ಕಾರ ತಾರತಮ್ಯ ಮಾಡುತ್ತಿದೆ. ಹಿಂದೂಗಳ ಮೇಲೆಯೇ ಹೆಚ್ಚು ಕೇಸ್ ಹಾಕಲಾಗಿದೆ. ಅದಕ್ಕಾಗಿಯೇ ರಾಜ್ಯ ಬಿಜೆಪಿ ಸರ್ಕಾರದ ಮೇಲೆ ಜನ ಸಿಟ್ಟಾಗಿದ್ದಾರೆ. ಶಾಸಕ ಜಮೀರ್ ಅಹ್ಮದ್ ಹಾಗೂ ಅಬ್ದುಲ್ ರಜಾಕ್ ಇಬ್ಬರ ಮೇಲೂ ಕೇಸು ದಾಖಲಿಸಬೇಕುʼʼ ಎಂದು ಮುತಾಲಿಕ್ ಒತ್ತಾಯಿಸಿದ್ದಾರೆ.
ʻʻಹಿಂದೂಗಳಿಂದ ಗೆದ್ದ ಬಿಜೆಪಿ ಸರ್ಕಾರ ಹಿಂದೂಗಳ ಮೇಲೆಯೇ ಕೇಸ್ ಹಾಕುವ ಕೆಲಸ ಮಾಡುತ್ತಿದೆ. ಜಮೀರ್‌ನನ್ನು ಬಚಾವ್ ಮಾಡಿ ಭಾಸ್ಕರ್ ಮೇಲೆ ಕೇಸ್ ಹಾಕ್ತೀರಾ? ಅಬ್ದುಲ್ ರಜಾಕ್ ಉದ್ಧಟತನ ಮಾಡುವ ಹಾಗೂ ದೇಶದ್ರೋಹಿಯನ್ನು ನೀವು ರಕ್ಷಣೆ ಮಾಡುತ್ತೀರಾ? ಚಾಮರಾಜಪೇಟೆಯ ಈದ್ಗಾ ಮೈದಾನ ಸರ್ಕಾರದ್ದು ಅಂದಮೇಲೆ ಸರ್ಕಾರ ಇದರ ಬಗ್ಗೆ ನಿರ್ಣಯ ಕೈಗೊಳ್ಳಬೇಕು. ಆ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಾಡಬೇಕು. ಅಲ್ಲಿ ಭಾರತ ಮಾತಾಕಿ ಜೈ ಎಂಬ ಘೋಷಣೆ ಮೊಳಗಬೇಕು ಸರ್ಕಾರ ಈ ನಿರ್ಣಯ ಕೈಗೊಳ್ಳದೇ ಹೋದರೆ ಮೋದಿಗೆ ನೀವು ಅಪಮಾನ ಮಾಡಿದಂತಾಗುತ್ತದೆʼʼ ಎಂದಿದ್ದಾರೆ ಮುತಾಲಿಕ್. ಸರಕಾರ ತುರ್ತು ಕ್ರಮ ಕೈಗೊಳ್ಳದೆ ಹೋದರೆ ಶ್ರೀರಾಮ ಸೇನೆ ವತಿಯಿಂದ ಆಂದೋಲನ ಮಾಡಲಾಗುವುದು ಎಂದು ಮುತಾಲಿಕ್ ಹೇಳಿದ್ದಾರೆ.
ಇದನ್ನೂ ಓದಿ| ಧ್ವಜಾರೋಹಣ ವಿವಾದ | ಮಾಣಿಕ್‌ಷಾ ಪರೇಡ್ ಗ್ರೌಂಡ್‌ಗಿಂತ ಚಾಮರಾಜಪೇಟೆ ಮೈದಾನವೇ ಈಗ ಕೇಂದ್ರಬಿಂದು!