ಬೆಂಗಳೂರು : ಚಾಮರಾಜಪೇಟೆಯ ಈದ್ಗಾ ಮೈದಾನವನ್ನು ಆಟದ ಮೈದಾನವನ್ನಾಗಿಯೇ ಉಳಿಸಿಕೊಳ್ಳಬೇಕು. ಇಲ್ಲಿ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅವಕಾಶ ಕೊಡಬೇಕು ಎಂದು ಆಗ್ರಹಿಸಿ ಚಾಮರಾಜಪೇಟೆ ನಾಗರಿಕ ಒಕ್ಕೂಟ ವೇದಿಕೆ ಮಂಗಳವಾರ (ಜುಲೈ 12) ಚಾಮರಾಜಪೇಟೆ ಬಂದ್‌ಗೆ ಕರೆ ನೀಡಿದೆ.
ಈ ಮೈದಾನ ಸಾರ್ವಜನಿಕರ ಮೈದಾನವಾಗಿದ್ದು, ಮಕ್ಕಳಿಗೆ ಆಟದ ಮೈದಾನವಾಗಿಯೇ ಉಳಿಯಬೇಕು. ಈದ್ಗಾ ಮೈದಾನವನ್ನು ಕಬಳಿಸಲು ಯಾರಿಗೂ ಅವಕಾಶ ಮಾಡಿಕೊಡಬಾರದು ಎಂಬ ಬೇಡಿಕೆಯೊಂದಿಗೆ ಜುಲೈ 12ರ ಬೆಳಗ್ಗೆ 10 ಗಂಟೆಗೆ ರ್‍ಯಾಲಿಯನ್ನೂ ಆಯೋಜಿಸಲಾಗಿದೆ.
ಇದನ್ನೂ ಓದಿ | ನಿಲ್ಲದ ಈದ್ಗಾ ಮೈದಾನ ವಿವಾದ: ಪಾಲಿಕೆಯ ನಡೆಗೆ ಎನ್.ಆರ್.ರಮೇಶ್ ಆಕ್ರೋಶ
ಈದ್ಗಾ ಮೈದಾನ ಸರ್ಕಾರದ ಆಸ್ತಿ ಆಗಿದ್ದು, ವರ್ಷಕ್ಕೆ ಎರಡು ಬಾರಿ ಮಾತ್ರ ಇಲ್ಲಿ ನಮಾಜ್ ಮಾಡಲು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಹೀಗಿದ್ದರೂ ಈದ್ಗಾ ಮೈದಾನ ವಕ್ಫ್ ಬೋರ್ಡ್‌ಗೆ ಸೇರಿದೆ ಎಂದು ಹೇಳಿ ಗೊಂದಲ ಮೂಡಿಸಲಾಗುತ್ತಿದೆ. ಶಾಸಕ ಜಮೀರ್ ಹೇಳಿದಂತೆ ಬಿಬಿಎಂಪಿ ವರ್ತಿಸುತ್ತಿದೆ ಎಂದು ನಾಗರಿಕ ಒಕ್ಕೂಟ ಆಪಾದಿಸಿದೆ.
ಇಲ್ಲಿ ಬಿರುಕು ಬಿಟ್ಟಿರುವ ಗೋಡೆಯನ್ನು ದುರಸ್ತಿ ಮಾಡಲು ಅವಕಾಶ ಮಾಡಿಕೊಡಿ. ನಂತರ ಸಾರ್ವಜನಿಕರು ಗಣೇಶ ಉತ್ಸವ, ದಸರಾ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಲಿ. ವರ್ಷಕ್ಕೆ ಎರಡು ಬಾರಿ ಮಾತ್ರ ನಮಗೆ ಅವಕಾಶ ಮಾಡಿಕೊಡಿ ಎಂದು ಶಾಸಕ ಜಮೀರ್ ೨೦೦೬ರಲ್ಲಿ ಹೇಳಿದ್ದರು. ಆದರೆ ಗೋಡೆ ದುರಸ್ತಿ ಮುಗಿದ ಬಳಿಕ ಈ ಮಾತನ್ನು ನಡೆಸಿಕೊಂಡಿಲ್ಲ. ಅವರು ಎಲ್ಲರಿಗೂ ಶಾಸಕರೇ ಹೊರತು ಒಂದು ಸಮುದಾಯಕ್ಕಲ್ಲ. ಆದ್ದರಿಂದ ಅವರನ್ನು ಈ ಬಗ್ಗೆ ಪ್ರಶ್ನಿಸಲು ನಿರ್ಣಯ ಕೈಗೊಂಡಿದ್ದೇವೆ ಎಂದು ವೇದಿಕೆ ಸದಸ್ಯ ಶಂಶಾಂಕ್ ಹೇಳಿಕೆ ನೀಡಿದ್ದಾರೆ. ಈ ಮೈದಾನಕ್ಕೆ ಜಯ ಚಾಮರಾಜೇಂದ್ರ ಒಡೆಯರ್ ಆಟದ ಮೈದಾನ ಎಂದು ನಾಮಕರಣ ಮಾಡಬೇಕು ಎಂದೂ ಒತ್ತಾಯ ಮಾಡಲಿದ್ದೇವೆ ಎಂದವರು ಹೇಳಿದ್ದಾರೆ.
ಇದನ್ನೂ ಓದಿ | ಚಾಮರಾಜಪೇಟೆ ಈದ್ಗಾ ಮೈದಾನದ ಖಾತೆ ಯಾರಿಗೂ ಮಾಡಿಕೊಟ್ಟಿಲ್ಲ: ಬಿಬಿಎಂಪಿ ಸ್ಪಷ್ಟನೆ