ಬೆಂಗಳೂರು: ಚಾಮರಾಜಪೇಟೆ ಮೈದಾನದಲ್ಲಿ ಬಿಗಿ ಭದ್ರತೆಯ ನಡುವೆ ಸ್ವಾತಂತ್ರ್ಯೋತ್ಸವ ಆಚರಣೆ ಯಶಸ್ವಿಯಾಗಿ ನಡೆದ ಬೆನ್ನಿಗೇ ಇಲ್ಲಿ ಗಣೇಶೋತ್ಸವವನ್ನೂ ಮಾಡಿಯೇ ಸಿದ್ಧ ಎಂದು ಶ್ರೀರಾಮ ಸೇನೆ ಘೋಷಿಸಿದೆ.
ಧ್ವಜಾರೋಹಣ ನಡೆದ ಬೆನ್ನಿಗೇ ಪಟಾಕಿ ಸಿಡಿಸಿ ಸಂಭ್ರಮಿಸಿದ ಶ್ರೀರಾಮಸೇನೆಯ ಕಾರ್ಯಕರ್ತರು ಮುಂದೆ 250 ಅಡಿ ಧ್ಚಜಾ ಹಿಡಿದು ಗ್ರೌಂಡ್ ಸುತ್ತ ಘೋಷಣೆ ಕೂಗಲು ಸಿದ್ಧತೆ ನಡೆಸುತ್ತಿದ್ದಾರೆ. ಈ ವೇಳೆ ಮಾತನಾಡಿದ ಶ್ರೀರಾಮ ಸೇನೆ ನಗರ ಘಟಕದ ಅಧ್ಯಕ್ಷ ಚಂದ್ರಶೇಖರ್, ಧ್ವಜಾರೋಹಣ ಮಾಡಿದ್ದು ಸಂತಸ ತಂದಿದೆ. ಮುಂದೆ ಇಲ್ಲಿ ಗಣೇಶೋತ್ಸವ, ಶಿವನ ಹಬ್ಬ ಎಲ್ಲವನ್ನೂ ಮಾಡುತ್ತೇವೆ ಎಂದರು.
ʻʻಸ್ವಾತಂತ್ರ್ಯ ದಿನಾಚರಣೆ ಆಗಿದೆ. ಮುಂದೆ ಗಣೇಶನ ಹಬ್ಬ ಆಚರಣೆಗೆ ಮತ್ತು ಶಿವನ ಆಚರಣೆಗೆ ಅವಕಾಶ ಕೊಡಬೇಕು. ನಮ್ಮ ಧಾರ್ಮಿಕ ನಂಬಿಕೆಯ ಪ್ರಕಾರ ಗಣೇಶನನ್ನು ಕೂರಿಸುತ್ತೇವೆ. ಇದಕ್ಕೆ ಸರಕಾರ ಹೇಗೆ ಪ್ರತಿಕ್ರಿಯಿಸುತ್ತದೆ ಎನ್ನುವುದರ ಆಧಾರದ ಮೇಲೆ ಅದು ಹಿಂದೂ ಪರವೋ, ಹಿಂದೂ ವಿರೋಧಿಯೋ ಎನ್ನುವುದು ನಿರ್ಧಾರವಾಗುತ್ತದೆʼʼ ಎಂದು ಚಂದ್ರಶೇಖರ್ ಹೇಳಿದರು. ʻʻಗಣೇಶೋತ್ಸವದ ಸಂದರ್ಭದಲ್ಲಿ ಗಣೇಶನನ್ನು ಕೂರಿಸುವುದು ಖಚಿತ. ಏನು ಮಾಡ್ತಾರೆ, ಅರೆಸ್ಟ್ ಮಾಡ್ತಾರಾ ಗುಂಡು ಹಾರಿಸ್ತಾರಾ, ನೋಡೋಣʼʼ ಎಂದು ಸವಾಲು ಹಾಕಿದರು.
ಸನಾತನ ಸಂಸ್ಥೆಯ ಭಾಸ್ಕರನ್ ಮಾತನಾಡಿ, ಎಲ್ಲಾ ಧರ್ಮದವರಿಗೆ ಈ ಮೈದಾನ ಅನುಕೂಲ ಆಗುತ್ತದೆ ಅಂದುಕೊಂಡಿದ್ದೇನೆ, ಮುಂದೆ ಇಲ್ಲಿ ಗಣಪನೂ ಕೂರ್ತಾನೆ, ಶಿವನೂ ಇರ್ತಾನೆ ಎಂದರು.
ಇದನ್ನೂ ಓದಿ| Amrit Mahotsav: ಚಾಮರಾಜಪೇಟೆ ಮೈದಾನದಲ್ಲಿ ಹಾರಾಡಿದ ರಾಷ್ಟ್ರಧ್ವಜ, ಮುಗಿಲು ಮುಟ್ಟಿದ ಸಂಭ್ರಮ