ಚಾಮರಾಜಪೇಟೆ : ಈದ್ಗಾ ಮೈದಾನ ವಿವಾದ ಆಯ್ತು, ಈಗ ಪುತ್ಥಳಿ ವಿಚಾರವಾಗಿ ಫೈಟ್ ಶುರುವಾಗಿದ್ದು, ಒಂದು ಗುಂಪು ನಟ ಪುನೀತ್ ರಾಜ್‌ಕುಮಾರ್ ಅವರ ಪುತ್ಥಳಿಗಾಗಿ ಪಟ್ಟು ಹಿಡಿದಿದ್ದರೆ, ಮತ್ತೊಂದು ಗುಂಪು ಜಯ ಚಾಮರಾಜೇಂದ್ರ ಒಡೆಯರ್ ಪುತ್ಥಳಿಗಾಗಿ ಪಟ್ಟು ಹಿಡಿದಿದೆ. ಈ ಎರಡು ಗುಂಪುಗಳ ಕಿತ್ತಾಟ ಬಿಬಿಎಂಪಿಗೆ ತಲೆನೋವು ತರಿಸಿದೆ.
ಬೆಂಗಳೂರಿನ ಚಾಮರಾಜಪೇಟೆ ನಿವಾಸಿಗಳು ಪುನೀತ್ ರಾಜ್‌ಕುಮಾರ್ ಅವರ ಪುತ್ಥಳಿ ನಿರ್ಮಾಣಕ್ಕೆ ಮನವಿ ಮಾಡಿ 7 ತಿಂಗಳಾದರೂ ಬಿಬಿಎಂಪಿ ಯಾವುದೇ ಅನುಮತಿ ನೀಡಿರಲಿಲ್ಲ. ಹೀಗಾಗಿ ಸ್ಥಳೀಯರೇ ಪುನೀತ್ ರಾಜ್‌ಕುಮಾರ್ ಅವರ ೧೫ ಅಡಿ ಎತ್ತರದ ಪುತ್ಥಳಿ ನಿರ್ಮಾಣಕ್ಕೆ ಮುಂದಾಗಿದ್ದರು. ಇದಕ್ಕಾಗಿ ಸಿದ್ಧತೆಗಳನ್ನೂ ಮಾಡಿಕೊಂಡಿದ್ದರು.
ಇದನ್ನು ಓದಿ| ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ: ಜುಲೈ 12ರಂದು ಚಾಮರಾಜಪೇಟೆ ಬಂದ್ ಕರೆ
ಇದೇ ವೇಳೆ ಮತ್ತೊಂದು ಗುಂಪಿನಿಂದ ಚಾಮರಾಜೇಂದ್ರ ಒಡೆಯರ್ ಪುತ್ಥಳಿ ನಿರ್ಮಾಣಕ್ಕೆ ಒತ್ತಾಯ ಹೆಚ್ಚಾಯಿತು. ಚಾಮರಾಜಪೇಟೆಯಲ್ಲಿ ಒಂದೇ ಒಂದು ಚಾಮರಾಜೇಂದ್ರ ಪುತ್ಥಳಿಯೂ ಇಲ್ಲ. ಮೊದಲು ಇವರ ಪುತ್ಥಳಿ ನಿರ್ಮಿಸಿ, ನಂತರ ಪುನೀತ್ ಪ್ರತಿಮೆ ಅನಾವರಣಗೊಳಿಸಿ ಎಂದು ಒತ್ತಾಯಿಸಿದ್ದಾರೆ.
ಈ ವಿಚಾರದ ಬಗ್ಗೆ ಮಾತನಾಡಿದ ಬಿಬಿಎಂಪಿ ಪಶ್ಚಿಮ ವಲಯದ ಆಯುಕ್ತ ಶ್ರೀನಿವಾಸ್, ಸದ್ಯಕ್ಕೆ ಬಿಬಿಎಂಪಿಯಿಂದ ನಾವು ಯಾವುದಕ್ಕೂ ಅನುಮತಿ ಕೊಟ್ಟಿಲ್ಲ. ಪಾದಚಾರಿ ರಸ್ತೆಯಲ್ಲಿ ಪುನೀತ್ ಪ್ರತಿಮೆ ನಿರ್ಮಿಸಲಾಗುತ್ತಿತ್ತು. ಈ ಬಗ್ಗೆ ಮೌಖಿಕವಾಗಿ ದೂರು ನೀಡಿದ್ದರಿಂದ ಸ್ಥಳಕ್ಕೆ ಬಿಬಿಎಂಪಿ ಜೆಸಿ ಭೇಟಿ ನೀಡಿದ್ದರು. ಪಾದಚಾರಿ ಸ್ಥಳದಲ್ಲಿ ಪುತ್ಥಳಿ ನಿರ್ಮಾಣ ಮಾಡುವಂತಿಲ್ಲ. ಹೀಗಾಗಿ ಚಾಮರಾಜಪೇಟೆಯಲ್ಲಿ ಪುತ್ಥಳಿ ನಿರ್ಮಾಣ ಕಾರ್ಯ ಸ್ಥಗಿತಗೊಳಿಸಲಾಗಿದೆ. ಸ್ಥಗಿತಗೊಳಿಸುವುದರ ಕುರಿತಾಗಿ ಇಂಜಿನಿಯರ್ ಕೂಡ ಮಾಹಿತಿ ನೀಡಿದ್ದಾರೆ. ಒಂದು ವೇಳೆ ಪುನಃ ನಿರ್ಮಾಣ ಕಾರ್ಯ ಮುಂದುವರಿಸಿದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಒಟ್ಟಿನಲ್ಲಿ ಚಾಮರಾಜಪೇಟೆಯಲ್ಲಿ ಇಷ್ಟು ದಿನ ಈದ್ಗಾ ಮೈದಾನದ ವಿವಾದವಿತ್ತು. ಈಗ ಇದರ ಜತೆಗೆ ಪುತ್ಥಳಿ ನಿರ್ಮಾಣದ ಗಲಾಟೆ ಸೇರ್ಪಡೆಗೊಂಡಿದೆ.
ಇದನ್ನು ಓದಿ| ನಿಲ್ಲದ ಈದ್ಗಾ ಮೈದಾನ ವಿವಾದ: ಪಾಲಿಕೆಯ ನಡೆಗೆ ಎನ್.ಆರ್.ರಮೇಶ್ ಆಕ್ರೋಶ