Site icon Vistara News

ಕಸಾಪ ಸದಸ್ಯತ್ವ ಪಡೆದ ಕೆನಡಾ ಸಂಸತ್ತಿನಲ್ಲಿ ಕನ್ನಡ ಮಾತನಾಡಿದ ಸಂಸದ ಚಂದ್ರ ಆರ್ಯ

kannada sahitya parishat

ಬೆಂಗಳೂರು: ಕೆನಡಾ ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತನಾಡಿ ಕನ್ನಡಿಗರ ಮನಸ್ಸು ಗೆದ್ದಿದ್ದ ಕೆನಡಾದ ರಾಜಕಾರಣಿ, ಸಂಸದ ಚಂದ್ರ ಆರ್ಯ ಬುಧವಾರ ಕನ್ನಡ ಸಾಹಿತ್ಯ ಪರಿಷತ್ತಿಗೆ ಭೇಟಿ ನೀಡಿ, ಕನ್ನಡಿಗರ ಅಸ್ಮಿತೆಯ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಪಡೆದುಕೊಂಡಿದ್ದಾರೆ.

ಅಲ್ಲದೆ, ಕೆನಡಾದಲ್ಲಿ ಕನ್ನಡದ ಕೆಲಸವನ್ನು ಮಾಡಲು ಕನ್ನಡ ಸಾಹಿತ್ಯ ಪರಿಷತ್ತಿನ ಕೆನಡಾ ಘಟಕದ ಮುಂದಾಳತ್ವವನ್ನು ವಹಿಸಿಕೊಳ್ಳಲು ಒಪ್ಪಿಗೆ ನೀಡಿದ್ದಾರೆ. ಕಳೆದ ಮೇ ತಿಂಗಳಿನಲ್ಲಿ ಅವರು ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತನಾಡಿದ್ದು ದೊಡ್ಡ ಸುದ್ದಿಯಾಗಿತ್ತು. ಕನ್ನಡಿಗರು ಅವರು ಕನ್ನಡ ಪ್ರೇಮವನ್ನು ಕೊಂಡಾಡಿದ್ದರು.

ಕೆನಡಾ ಸಂಸತ್ತಿನಲ್ಲಿ ಚಂದ್ರ ಆರ್ಯ ಕನ್ನಡದಲ್ಲಿ ಮಾತನಾಡುತ್ತಿರುವುದು.

ಸಂಸದ ಚಂದ್ರ ಆರ್ಯರ ಜತೆಗೆ ಅವರ ಪತ್ನಿ ಸಂಗೀತಾ ಗಾಯತ್ರಿ, ಸಹೋದರ ಶ್ರೀನಿವಾಸ್ ಸಹ ಸದಸ್ಯತ್ವ ಪಡೆದುಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಜಾತಿ, ಮತ, ಪಂಥ, ಧರ್ಮಗಳ ಕಟ್ಟುಗಳನ್ನು ಮೀರಿ ಏಕಸೂತ್ರದಲ್ಲಿ ಎಲ್ಲರನ್ನೂ ಒಂದು ಮಾಡುವ ಶಕ್ತಿ ಮಾತೃಭಾಷೆಗೆ ಇದೆ. ಈ ಭಾಷಾಬಂಧನಕ್ಕೆ ಪ್ರಪಂಚದಲ್ಲಿ ಎಲ್ಲರನ್ನೂ ಒಂದು ಮಾಡುವ ಶಕ್ತಿ ಇದೆ” ಎಂದರು.

ಈ ಸಂಬಂಧ ಕಸಾಪದ ಪಂಪ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಪರಿಷತ್ತಿನ ಕಾರ್ಯಚಟುವಟಿಕೆಗಳ ಕುರಿತು ಚಂದ್ರ ಆರ್ಯರಿಗೆ ಸಂಪೂರ್ಣ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೆನಡಾ ಸಂಸದರು, “ಕನ್ನಡ ಸಾಹಿತ್ಯ ಪರಿಷತ್ತು ಕೆಲ ಚಟುವಟಿಕೆಗಳಿಗೆ, ಕೆಲವರಿಗೆ ಮಾತ್ರ ಸೀಮಿತವಾಗದೆ ಎಲ್ಲ ಕನ್ನಡಿಗರನ್ನೂ ಒಳಗೊಳ್ಳುತ್ತಿರುವುದು ಸಂತಸದ ಸಂಗತಿ” ಎಂದರು.

“ನನ್ನ ತಂದೆಯವರು ತಮ್ಮ ಸರಕಾರಿ ಸೇವೆಯಲ್ಲಿರುವಾಗ ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ರೂಪಿಸುವಲ್ಲಿ ಕಾರ್ಯಯೋಜನೆಯನ್ನು ಕೈಗೊಂಡಿದ್ದರು” ಎಂಬುದನ್ನು ಅವರು ಈ ಸಂದರ್ಭದಲ್ಲಿ ನೆನಪಿಸಿಕೊಂಡರು.
“ಕೆನಡಾದಲ್ಲಿರುವ ಕನ್ನಡಿಗರನ್ನು ಒಟ್ಟುಗೂಡಿಸಿ ಪರಿಷತ್ತಿನ ಘಟಕವನ್ನು ರಚಿಸಿ ಅದನ್ನು ಮುನ್ನಡೆಸುವ ಮಹತ್ವದ ಜವಾಬ್ದಾರಿಯನ್ನು ನಾಡೋಜ ಡಾ. ಮಹೇಶ ಜೋಶಿ ಅವರು ನೀಡಿದ್ದಾರೆ. ಅದನ್ನು ನಾನು ನನ್ನ ಕರ್ತವ್ಯ ಎಂದು ನಿಭಾಯಿಸುತ್ತೇನೆ” ಎಂಬ ಭರವಸೆಯನ್ನು ಚಂದ್ರ ಆರ್ಯ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಮಾತನಾಡಿ, “ಕೆನಡಾ ಸಂಸತ್ತಿನಲ್ಲಿ ಕನ್ನಡ ಮಾತನಾಡುವ ಮೂಲಕ ಎಲ್ಲರ ಮನಸ್ಸು ಗೆದ್ದ ಚಂದ್ರ ಆರ್ಯ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಪಡೆದುಕೊಂಡಿರುವುದು ಶ್ಲಾಘನೀಯ. ಹಾವೇರಿಯಲ್ಲಿ ನಡೆಯಲಿರುವ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮುಖ್ಯ ಅಥಿತಿಗಳಾಗಿ ಭಾಗವಹಿಸುವುದಕ್ಕೆ ಒಪ್ಪಿಗೆ ನೀಡಿದ್ದಾರೆʼʼ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ನೇ.ಭ. ರಾಮಲಿಂಗಶೆಟ್ಟಿ, ಗೌರವ ಕೋಶಾಧ್ಯಕ್ಷ, ಬಿ.ಎಮ್. ಪಟೇಲ್ಪಾಂಡು, ಕನ್ನಡಪರ ಹೋರಟಗಾರ ಸತೀಶ ಗೌಡ ಅವರು ಉಪಸ್ಥಿತರಿದ್ದರು.

ಇದನ್ನೂ ಓದಿ | SHE Q Award | ಗಲ್ಫ್ ಮಾಧ್ಯಮಂ ಶಿ-ಕ್ಯೂ ಎಕ್ಸಲೆನ್ಸ್ ಪ್ರಶಸ್ತಿಗೆ ಕನ್ನಡತಿ ಸುಮಾ ಮಹೇಶ್ ಗೌಡ ಭಾಜನ

Exit mobile version