ಬಳ್ಳಾರಿ: ನಗರದ ಕಮ್ಮ ಭವನದ ಮುಂದೆ ನಿರ್ಮಿಸಲಾಗಿರುವ ಆಂಧ್ರ ಪ್ರದೇಶದ ಮಾಜಿ ಸಿಎಂ, ಖ್ಯಾತ ನಟ ಎನ್.ಟಿ.ರಾಮಾರಾವ್ (NTR Statue) ಅವರ 7 ಅಡಿ ಎತ್ತರದ ಪುತ್ಥಳಿಯನ್ನು ಆಂಧ್ರ ಪ್ರದೇಶದ ಮಾಜಿ ಸಿಎಂ, ತೆಲುಗು ದೇಶಂ ಪಾರ್ಟಿ ಅಧ್ಯಕ್ಷ ನಾರಾ ಚಂದ್ರಬಾಬು ನಾಯ್ಡು ಅವರು ಮಂಗಳವಾರ ಅನಾವರಣಗೊಳಿಸಿದರು.
ಇದಕ್ಕೂ ಮುನ್ನಾ ನಗರಕ್ಕೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ನಾರಾ ಚಂದ್ರುಬಾಬು ನಾಯ್ಡು ಅವರಿಗೆ ಕಮ್ಮ ಸಮುದಾಯದಿಂದ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಚಂದ್ರುಬಾಬು ನಾಯ್ಡು ಅವರಿಗೆ ಬಳ್ಳಾರಿ ಉಸ್ತುವಾರಿ ಸಚಿವ ನಾಗೇಂದ್ರ, ಶಾಸಕ ಭರತ್ ರೆಡ್ಡಿ ಸಾಥ್ ನೀಡಿದರು.
ಇದನ್ನೂ ಓದಿ | Republic of Bharat: ಇಂಡಿಯಾಗೆ ರಿಪಬ್ಲಿಕ್ ಆಫ್ ಭಾರತ್ ಎಂದು ಮರುನಾಮಕರಣ; ಸಿಎಂ ಸಿದ್ದರಾಮಯ್ಯ, ಡಿಕೆಶಿ ಆಕ್ಷೇಪ
ಸಚಿವ ನಾಗೇಂದ್ರ ಮಾತನಾಡಿ, ದೇಶದ ಬುದ್ಧಿವಂತ ರಾಜಕಾರಣಿಯಲ್ಲಿ ಚಂದ್ರಬಾಬು ನಾಯ್ಡು ಒಬ್ಬರು. ಒಳ್ಳೆಯ ಆಲೋಚನೆ ಮಾಡುವ, ಅಂದುಕೊಂಡಿದ್ದನ್ನು ಮಾಡುವ ನಾಯಕ ನಾಯ್ಡು ಅವರು, 1999ರಲ್ಲಿ ಬಳ್ಳಾರಿಗೆ ಬಂದಿದ್ದರು. ಈಗ ಮತ್ತೊಮ್ಮೆ ಇಲ್ಲಿಗೆ ಬಂದಿದ್ದಾರೆ. ಇದನ್ನು ಸಾರ್ವಜನಿಕ ಕಾರ್ಯಕ್ರಮ ಮಾಡಿದ್ದರೆ ನಾಲ್ಕೈದು ಲಕ್ಷ ಜನರು ಸೇರುತ್ತಿದ್ದರು ಎಂದು ತಿಳಿಸಿದರು.
ಕಮ್ಮವಾರಿ ಸಂಘಟನೆಯವರು ನಿರ್ಮಿಸಿರುವ ಎನ್‌ಟಿಆರ್ ಪ್ರತಿಮೆ ಅದ್ಭುತವಾಗಿ ಮೂಡಿ ಬಂದಿದೆ. ಮೂರ್ತಿ ಉದ್ಘಾಟನೆಗೆ ಚಂದ್ರಬಾಬು ನಾಯ್ಡು ಬರಲೇಬೇಕೆಂದು ಹಠ ಹಿಡಿದು ಸುಮದಾಯದವರು ಕರೆಸಿದ್ದಾರೆ. ಭವಿಷ್ಯದಲ್ಲಿ ಮತ್ತೊಮ್ಮೆ ಚಂದ್ರಬಾಬು ನಾಯ್ಡು ಅವರು ದೊಡ್ಡ ಹುದ್ದೆ ಅಲಂಕರಿಸುತ್ತಾರೆ ಎಂದು ಪರೋಕ್ಷವಾಗಿ ಮುಖ್ಯಮಂತ್ರಿಗುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ | DK Shivakumar : ನಿಗಮ ಮಂಡಳಿಗಳಲ್ಲಿ ಶಾಸಕರು, ಕಾರ್ಯಕರ್ತರಿಗೆ ಅವಕಾಶ; ಡಿಸಿಎಂ ಡಿ.ಕೆ.ಶಿವಕುಮಾರ್ ಭರವಸೆ
ಶಿವಾಲಯವ ಕಾಮಗಾರಿ ವೀಕ್ಷಿಸಿದ ಚಂದ್ರುಬಾಬು ನಾಯ್ಡು
ಬಳ್ಳಾರಿ ಭೇಟಿ ವೇಳೆ ತಾಲೂಕಿನ ಬಾಲಾಜಿ ಕ್ಯಾಂಪ್‌ನಲ್ಲಿ 16 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಬೃಹತ್ ಶಿವಾಲಯವನ್ನು ಚಂದ್ರುಬಾಬು ನಾಯ್ಡು ಅವರು ವೀಕ್ಷಿಸಿದರು. ಒಂದು ಎಕರೆ ಪ್ರದೇಶದಲ್ಲಿ ಶಿವಾಲಯ ನಿರ್ಮಿಸಲಾಗುತ್ತಿದ್ದು, ದೇವಸ್ಥಾನದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಎರಡೂವರೆ ಅಡಿ ಎತ್ತರದ ಸ್ಫಟಿಕ ಶಿವಲಿಂಗ ಪ್ರತಿಷ್ಠಾಪನೆ ಮಾಡಲು ಉದ್ದೇಶಿಸಲಾಗಿದೆ. ಒಂದೇ ಕಲ್ಲಿನಿಂದ ಹಾಗೂ ಕೃಷ್ಣ ಶಿಲೆಯಿಂದ ದೇವಸ್ಥಾನದ ನಿರ್ಮಾಣ ಮಾಡಲಾಗುತ್ತಿದ್ದು, ತೆಲುಗಿನ ಖ್ಯಾತ ನಿರ್ಮಾಪಕ ಸಾಯಿ ಕೊರ್ರಪಾಟಿ ಅವರು ದೇವಾಲಯವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇನ್ನು ಆರು ತಿಂಗಳೊಳಗೆ ದೇವಸ್ಥಾನದ ಕಾಮಗಾರಿ ಮುಗಿಯಲಿದೆ.