Site icon Vistara News

Missing case | ಅಧ್ಯಾತ್ಮದ ಕಡೆ ಹೆಚ್ಚು ಒಲವು ಹೊಂದಿದ್ದ ಚಂದ್ರಶೇಖರ್; ಮೈಸೂರು ಭಾಗದಲ್ಲಿರುವ ಶಂಕೆ

Missing case

ದಾವಣಗೆರೆ: ಶಾಸಕ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಸಹೋದರನ ಮಗ ನಾಪತ್ತೆ (Missing case) ಹಿನ್ನೆಲೆಯಲ್ಲಿ ಜಿಲ್ಲೆಯ ಹೊನ್ನಾಳಿ ನಿವಾಸದಲ್ಲಿ ನೀರವ ಮೌನ ಆವರಿಸಿದೆ. ಸಹೋದರನ ಮಗನಿಗಾಗಿ ರೇಣುಕಾಚಾರ್ಯ ಹಾಗೂ ಅವರ ಆಪ್ತರು ನಿರಂತರ ಹುಡುಕಾಟ ನಡೆಸುತ್ತಿದ್ದಾರೆ. ಆದರೆ, ನಾಪತ್ತೆ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗುತ್ತಿವೆ. ಅಧ್ಯಾತ್ಮದ ಕಡೆ ಹೆಚ್ಚು ಒಲವು ಹೊಂದಿದ್ದ ಚಂದ್ರಶೇಖರ್, ಮೈಸೂರು ಅಥವಾ ಚಾಮರಾಜನಗರ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿರುವ ಶಂಕೆ ವ್ಯಕ್ತವಾಗಿದೆ.

ರೇಣುಕಾಚಾರ್ಯ ಸಹೋದರ ಎಂ.ಪಿ.ರಮೇಶ್‌ ಪುತ್ರ ಚಂದ್ರಶೇಖರ್ ಕಳೆದ ವಾರ ಶಿವಮೊಗ್ಗದ ಗೌರಿಗದ್ದೆಗೆ ಹೋಗಿ ವಿನಯ್ ಗುರೂಜಿ ಅವರ ಆಶೀರ್ವಾದ ಪಡೆದಿದ್ದರು. ಬಳಿಕ ಶಿವಮೊಗ್ಗದಲ್ಲಿ ಸ್ನೇಹಿತರನ್ನು ಮಾತನಾಡಿಸಿ ಹೊನ್ನಾಳಿಗೆ ಬಂದಿದ್ದರು. ಇದೀಗ ಚಂದ್ರಶೇಖರ್ ಅಧ್ಯಾತ್ಮದ ಕಡೆ ಹೆಚ್ಚು ಒಲವು ಹೊಂದಿದ್ದರು ಎಂಬುವುದು ತಿಳಿದು ಬಂದಿದ್ದು, ಈ ಬಗ್ಗೆ ರೇಣುಕಾಚಾರ್ಯ ಅವರ ಆಪ್ತ ಮೂಲಗಳು ಹೌದು ಎಂದೇ ಹೇಳುತ್ತಿವೆ.

ಇದನ್ನೂ ಓದಿ | ರೇಣುಕಾಚಾರ್ಯ ಸಹೋದರನ ಪುತ್ರ ನಾಪತ್ತೆ ಪ್ರಕರಣ; ಅನುಮಾನಕ್ಕೆ ಎಡೆ ಮಾಡಿಕೊಟ್ಟ ಸಿಸಿ ಟಿವಿ ದೃಶ್ಯ

ನಾಪತ್ತೆಯಾಗಿರುವು ಚಂದ್ರಶೇಖರ್, ಎಂ.ಪಿ.ರೇಣುಕಾಚಾರ್ಯ ಸಹೋದರ ಎಂ.ಪಿ.ರಮೇಶ್ ಮೊದಲನೇ ಪತ್ನಿ ಮಗನಾಗಿದ್ದಾರೆ. ಪತ್ನಿಗೆ ಅನಾರೋಗ್ಯ ಇದ್ದ ಕಾರಣ ಎಂ.ಪಿ.ರಮೇಶ್ ಮತ್ತೊಂದು ಮದುವೆಯಾಗಿದ್ದರು. ಮೊದಲ ಪತ್ನಿ ಶಿವಮೊಗ್ಗದಲ್ಲಿ ವಾಸವಿದ್ದು ಚಿಕಿತ್ಸೆ ಪಡೆಯುತ್ತಿದ್ದರು. ಹೀಗಾಗಿ ಚಂದ್ರಶೇಖರ್ ಹೊನ್ನಾಳಿಯಲ್ಲಿ ತಂದೆ ಮತ್ತು ಚಿಕ್ಕಮ್ಮನ ಜತೆ ವಾಸವಿದ್ದರು. ಶಿವಮೊಗ್ಗಕ್ಕೆ ಹೋಗಿ ಆಗಾಗ್ಗೆ ತಾಯಿಯನ್ನು ಮಾತನಾಡಿಸಿಕೊಂಡು ಬರುತ್ತಿದ್ದರು.

ಇತ್ತೀಚೆಗೆ ತಾಯಿ ಅನಾರೋಗ್ಯ ಪರಿಸ್ಥಿತಿ ನೋಡಿ ಮಾನಸಿಕವಾಗಿ ನೊಂದು ಅಧ್ಯಾತ್ಮದ ಕಡೆ ವಾಲಿದ್ದರು ಎನ್ನಲಾಗಿದೆ. ಹೀಗಾಗಿ ಮೈಸೂರು ಅಥವಾ ಚಾಮರಾಜನಗರ ಅರಣ್ಯ ಪ್ರದೇಶದಲ್ಲಿರುವ ಶಂಕೆ ವ್ಯಕ್ತವಾಗಿದೆ. ಇನ್ನು ವಿವಿಧೆಡೆ ಹುಡುಕಾಟ ನಡೆಸಿದರೂ ಇವರ ಸುಳಿವು ಪತ್ತೆಯಾಗದ ಹಿನ್ನೆಲೆಯಲ್ಲಿ ಪೊಲೀಸರಿಗೆ ತಲೆ‌ಬಿಸಿ ಉಂಟಾಗಿದೆ.

ಊಟ ಬಿಟ್ಟು ಕೂತಿದ್ದ ರೇಣುಕಾಚಾರ್ಯ
ಸಹೋದರನ ಮಗ ನಾಪತ್ತೆಯಾಗಿದ್ದರಿಂದ ದುಃಖಿತರಾದ ಶಾಸಕ ರೇಣುಕಾಚಾರ್ಯ ಹೊನ್ನಾಳಿಯ ನಿವಾಸದಲ್ಲಿ ಕಣ್ಣೀರಿಡುತ್ತಾ ಬುಧವಾರ ಬೆಳಗ್ಗೆಯಿಂದ ಊಟ ಬಿಟ್ಟು ಕುಳಿತಿದ್ದರು. ಇದನ್ನು ನೋಡಲಾರದೆ ರೇಣುಕಾಚಾರ್ಯ ಮಗಳು ಚೇತನಾ, “ಚಂದ್ರು ಅಣ್ಣ ಬರ್ತಾನೆ, ಊಟ ಮಾಡಪ್ಪ..” ಎಂದು ಸಮಾಧಾನಪಡಿಸಿ ಮಧ್ಯಾಹ್ನ ಕೈ ತುತ್ತು ತಿನ್ನಿಸಿದ್ದಾರೆ.

ಬಿಜೆಪಿ ನಾಯಕರಿಂದ ಸಾಂತ್ವನ
ರೇಣುಕಾಚಾರ್ಯಗೆ ಮಾಜಿ ಸಿಎಂ ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ, ವಿ.ಸೋಮಣ್ಣ, ಕೆ.ಎಸ್‌.ಈಶ್ವರಪ್ಪ ಸೇರಿ ಹಲವು ಬಿಜೆಪಿ ನಾಯಕರು ಕರೆ ಮಾಡಿ ಸಾಂತ್ವನ ಹೇಳಿದ್ದಾರೆ. ಯಡಿಯೂರಪ್ಪ ಜತೆ ಮಾತನಾಡುವಾಗ ರೇಣುಕಾಚಾರ್ಯ ಕಣ್ಣೀರು ಹಾಕಿದ್ದಾರೆ. ಹಾಗೆಯೇ ಮನೆಗೆ ಜಿಲ್ಲಾಧಿಕಾರಿ ಶಿವಾನಂದ ಕಾಪಾಶಿ, ಜಿಲ್ಲಾ ಪಂಚಾಯತ್ ಸಿಇಒ, ತಹಸೀಲ್ದಾರ್ ಆಗಮಿಸಿ ಶಾಸಕರಿಗೆ ಸಾಂತ್ವನ ಹೇಳಿದ್ದಾರೆ.

ಇದನ್ನೂ ಓದಿ | Missing Case | ರೇಣುಕಾಚಾರ್ಯ ತಮ್ಮನ ಪುತ್ರ ಚಂದ್ರಶೇಖರ್‌ ಕೊಠಡಿ ಶೋಧ; ಸಾಂತ್ವನ ಹೇಳಿದ ಬಿಎಸ್‌ವೈ

Exit mobile version