Site icon Vistara News

Chandrayaan 3 : ಚಂದ್ರೋತ್ಸವ ವೈಭವ; ತಾವೇ ಚಂದಮಾಮನ ಮೇಲೆ ಕಾಲಿಟ್ಟು ಧ್ವಜ ಹಾರಿಸಿದಂತೆ ಕುಣಿದಾಡಿದ ಜನ!

Chandrayaan Celebrations at Mandya

ಬೆಂಗಳೂರು: ಪುಟ್ಟ ಮಗುವಿನಂಥ ರೋವರ್‌ನ್ನು (Pragyaan Rover) ಒಡಲಲ್ಲಿ ಹೊತ್ತ ವಿಕ್ರಮ್‌ ಲ್ಯಾಂಡರ್‌ (Vikram Lander) ತುಂಬು ಗರ್ಭಿಣಿಗೂ ಆಯಾಸವಾಗದಷ್ಟು ಮೃದುವಾಗಿ ಚಂದ್ರನ ಮೇಲೆ ಮೆಲ್ಲಗೆ ಹೆಜ್ಜೆ ಇಡುತ್ತಿದ್ದಂತೆಯೇ ಇತ್ತ ಇಡೀ ಭಾರತವೇ ಎದ್ದು ನಿಂತು (Celebration by public) ಕುಣಿದಾಡಿತು. ಚಂದ್ರಯಾನ 3ಯ (Chandrayaan 3) ಕೊನೆಯ ಕ್ಷಣಗಳನ್ನು ಉಗುರುಕಚ್ಚುತ್ತಾ ವೀಕ್ಷಿಸುತ್ತಿದ್ದ ಜನರು ವಿಕ್ರಮ್‌ ಲ್ಯಾಂಡರ್‌ ಚಂದ್ರನ ಮೇಲೆ ಸಾಫ್ಟ್‌ ಲ್ಯಾಂಡಿಂಗ್‌ (Soft Landing) ಮಾಡುತ್ತಿದ್ದಂತೆಯೇ ಒಮ್ಮೆಗೇ ನಿರಾಳರಾಗಿ ಮತ್ತೆ ಹುಚ್ಚೆದ್ದು ಕುಣಿದರು. ಕೆಲವರು ಭಾವುಕರಾದರು, ಕೆಲವರು ಮಕ್ಕಳಂತೆ ಚಪ್ಪಾಳೆ ತಟ್ಟಿದರು. ಒಟ್ಟಿನಲ್ಲಿ ಚಂದ್ರನಲ್ಲಿ ಕಾಲಿಟ್ಟದ್ದು ತಾವೇ ಎಂಬಂತೆ ರಾಷ್ಟ್ರ ಧ್ವಜ ಬೀಸುತ್ತಾ ಮೈಮರೆತರು.

ಇದು ದೇಶದ ಎಲ್ಲೆಡೆ ಕಂಡ ದೃಶ್ಯಾವಳಿ. ಅದರಲ್ಲೂ ಮುಂಜಾನೆಯಿಂದಲೇ ಪೂಜೆ ಪುನಸ್ಕಾರ, ವೀಕ್ಷಣೆಯ ಖುಷಿಯಲ್ಲೇ ದಿನ ಕಳೆದ ಕರ್ನಾಟಕದ ಜನರಂತೂ ಇದನ್ನೊಂದು ಹಬ್ಬದಂತೆ ಸಂಭ್ರಮಿಸಿದರು. ರಾಜ್ಯದ ನಾನಾ ಭಾಗಗಳಲ್ಲಿ ಜನರು ಸಿಹಿ ಹಂಚಿದರು, ನಗಾರಿ ಬಾರಿಸಿ ನಲಿದರು, ಪಟಾಕಿ ಸಿಡಿಸಿದರು.

ಉಡುಪಿಯಲ್ಲಿ ಸಿಹಿ ಹಂಚಿ, ನಾಸಿಕ್‌ ಬ್ಯಾಂಡ್‌ ಬಾರಿಸಿ ಸಂಭ್ರಮ

ಉಡುಪಿಯಲ್ಲಿ ಉಡುಪಿ ಜಿಲ್ಲಾ ನಾಗರಿಕ ಸಮಿತಿಯಿಂದ ಸಂಭ್ರಮಾಚರಣೆ ನಡೆಯಿತು. ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಸಂಭ್ರಮಾಚರಣೆ ಆಯೋಜನೆ ಮಾಡಿದರು. ಜನರು ಬೃಹತ್ ರಾಷ್ಟ್ರಧ್ವಜದೊಂದಿಗೆ ಕುಣಿದು ಕುಪ್ಪಳಿಸಿದರು. ನೂರಾರು ಸಾರ್ವಜನಿಕರಿಗೆ ಮೈಸೂರ್ ಪಾಕ್ ವಿತರಣೆ ಮಾಡಲಾಯಿತು. ನಾಸಿಕ್ ಬ್ಯಾಂಡ್ ಚೆಂಡೆ ಪಟಾಕಿ ಸೇರಿಸಿ ಸಂಭ್ರಮಿಸಲಾಯಿತು.

ಧಾರವಾಡದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ

ಧಾರವಾಡದಲ್ಲಿ ಬಿಜೆಪಿ ಕಾರ್ಯಕರ್ತರು ಕೈಯಲ್ಲಿ ರಾಷ್ಟ್ರ ಧ್ವಜ ಹಿಡಿದು ವಂದೇ ಮಾತರಂ ಘೋಷಣೆ ಹಾಕಿದರು. ನಗರದ ಸುಭಾಸ್ ರಸ್ತೆಯಲ್ಲಿ ಇರುವ ಪಕ್ಷದ ಕಚೇರಿ ಬಳಿ ಸಂಭ್ರಮಾಚರಣೆ ನಡೆಯಿತು. ಭಾರತ್ ಮಾತಾಕಿ ಜೈ ಎಂದು ಘೋಷಣೆ ಮುಗಿಲುಮುಟ್ಟಿತು.

ಹಾಸನದಲ್ಲಿ ಚಂದ್ರಯಾನ ಯಶಸ್ಸಿಗೆ ಸಂಭ್ರಮಾಚರಣೆ

ವಿಕ್ರಂ ಲ್ಯಾಂಡರ್ ಚಂದ್ರನಲ್ಲಿ ಇಳಿಯುತ್ತಲೇ ಹಾಸನದ ಎಂ.ಜಿ. ರಸ್ತೆಯಲ್ಲಿ ಸಂಭ್ರಮಾಚರಣೆ ಮುಗಿಲು ಮಟ್ಟಿತು. ಸಿಹಿ ಹಂಚಿ ಘೋಷಣೆ ಕೂಗಿ ಪಟಾಕಿ ಸಿಡಿಸಲಾಯಿತು.

ಸಕಲೇಶಪುರ ಸಕಲೇಶಪುರ ತಾಲೂಕಿನ ಬಾಳ್ಳುಪೇಟೆಯ ಬಿಜೆಪಿ ಕಾರ್ಯಕರ್ತರು ಹಾಗೂ ಸಾರ್ವಜನಿಕರಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು. ಪ್ರಧಾನಿ ಮೋದಿ, ಇಸ್ರೋ ವಿಜ್ಞಾನಿಗಳಿಗೆ ಜೈಕಾರ ಹಾಕಿದರು.

ಲಕ್ಷ್ಮೇಶ್ವರ ಪಟ್ಟಣದಲ್ಲಿ ಶಾಲಾ ಮಕ್ಕಳ ಸಂಭ್ರಮ

ಇಸ್ರೋ ಕೈಗೊಂಡಿದ್ದ ಚಂದ್ರಯಾನ-3 ಲ್ಯಾಂಡಿಂಗ್ ಯಶಸ್ವಿಯಾದ ಹಿನ್ನೆಲೆಯಲ್ಲಿ ಲಕ್ಷ್ಮೇಶ್ವರ ಪಟ್ಟಣದ ಚಂದನ ಸ್ಕೂಲ್ ವಿದ್ಯಾರ್ಥಿಗಳು, ಬ್ಯಾಂಡ್ ಬಾರಿಸಿ‌ ರಾಷ್ಟ್ರಧ್ವಜ ಹಾರಿಸಿ‌ ಸಂಭ್ರಮಿಸಿದರು. ಇಸ್ರೋ‌ ಸಂಸ್ಥೆಯ ವಿಜ್ಞಾನಿಗಳ ಪರ ಜೈಕಾರ ಕೂಗಿದರು.

ಕೊಪ್ಪಳ: ಇಸ್ರೋ, ಭಾರತ ಪರ ಘೋಷಣೆ ಕೂಗಿ ಜನರು

ಚಂದ್ರಯಾನ 3 ವಿಕ್ರಂ ಯಶಸ್ವಿ ಲ್ಯಾಂಡಿಂಗ್ ಹಿನ್ನೆಲೆಯಲ್ಲಿ ಕೊಪ್ಪಳದಲ್ಲಿ ವಿಜಯೋತ್ಸವ, ಸಂಭ್ರಮಾಚರಣೆ ನಡೆಯಿತು. ಕೊಪ್ಪಳ ನಗರದ ಬಿ.ಸಿ. ಪಾಟೀಲ್ ವೃತ್ತದಲ್ಲಿ ಹೈ.ಕ ಹೋರಾಟ ಸಮಿತಿ ಯುವ ಘಟಕದ ವತಿಯಿಂದ ವಿಜಯೋತ್ಸವ ಆಯೋಜಿಸಲಾಗಿತ್ತು. ಇಸ್ರೋ, ಭಾರತದ ಪರ ಘೋಷಣೆ ಕೂಗಿದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಬೆಂಗಳೂರಿನಲ್ಲಿರುವ ಇಸ್ರೋ ಕಚೇರಿಯ ಮುಂ ಭಾಗದಲ್ಲಿ ಸಾರ್ವಜನಿಕರ ಸಂಭ್ರಮಾಚರಣೆಯ ದೃಶ್ಯ

ಇದನ್ನೂ ಓದಿ: Chandrayaan 3: ಸಾಫ್ಟ್ ಲ್ಯಾಂಡಿಂಗ್ ಸಕ್ಸೆಸ್, ಹೊಸ ಯುಗದ ಉದಯ ಎಂದ ಪ್ರಧಾನಿ ಮೋದಿ

Exit mobile version