ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಯ ಮಹತ್ವಾಕಾಂಕ್ಷಿ ಚಂದ್ರಯಾನ 3 (Chandrayaan 3) ಮಿಷನ್ ಹಂತಿಮ ಹಂತ ತಲುಪಿದೆ. ವಿಕ್ರಮ್ ಲ್ಯಾಂಡರ್‌ನ ವೇಗ ತಗ್ಗಿಸುವಿಕೆಯನ್ನು (Deboosting) ಎರಡನೇ ಹಾಗೂ ಕೊನೆಯ ಬಾರಿಗೆ ಭಾನುವಾರ (ಆಗಸ್ಟ್ 20) ಬೆಳಗಿನ ಜಾವ ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಇನ್ನು ಮುಂದಿನ ನಿಲ್ದಾಣ ಚಂದ್ರನೇ ಆಗಿದ್ದಾನೆ. ಒಂದೆಡೆ ರಷ್ಯಾದ ಲೂನಾ 25 ನೌಕೆಯು ಚಂದ್ರನ ಅಂಗಳದಲ್ಲಿ ತುರ್ತು ಪರಿಸ್ಥಿತಿ ಎದುರಿಸುತ್ತಿದ್ದರೆ, ಭಾರತದ ನೌಕೆಯು ಸುರಕ್ಷಿತವಾಗಿದೆ. ಹಾಗಾಗಿ, ನಮ್ಮದೇ ನೌಕೆಯು ದಕ್ಷಿಣ ಧ್ರುವದಲ್ಲಿ ಮೊದಲು ಇಳಿಯಲಿದೆ ಎಂದು ಹೇಳಲಾಗುತ್ತಿದೆ.
ಡಿಬೂಸ್ಟಿಂಗ್ ಪ್ರಕ್ರಿಯೆ ಪೂರ್ಣಗೊಳಿಸಿದ ಕುರಿತು ಇಸ್ರೋ ಮಾಹಿತಿ ನೀಡಿದೆ. “ಲ್ಯಾಂಡರ್ ಮಾಡ್ಯೂಲ್ ಸಂಪೂರ್ಣವಾಗಿ ಸುರಕ್ಷಿತ ಹಾಗೂ ದಕ್ಷತೆಯಿಂದ ಇದೆ. ಲ್ಯಾಂಡರ್ ಮಾಡ್ಯೂಲ್ ಡಿಬೂಸ್ಟಿಂಗ್ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ನೌಕೆಯನ್ನು 25 km x 157 kmಗೆ ಇಳಿಸಲಾಗಿದೆ. ಆಗಸ್ಟ್ 23ರಂದು ಸಂಜೆ 5.45ಕ್ಕೆ ನೌಕೆಯು ಸಾಫ್ಟ್ ಲ್ಯಾಂಡ್ ಆಗಲಿದೆ” ಎಂದು ಇಸ್ರೋ ಮಾಹಿತಿ ನೀಡಿದೆ.
ಆಗಸ್ಟ್ 18ರಂದು ಡಿಬೂಸ್ಟಿಂಗ್ ಪ್ರಕ್ರಿಯೆ ಕೈಗೊಳ್ಳಲಾಗಿತ್ತು. ಈಗ ಎರಡನೇ ಬಾರಿಯೂ ಯಶಸ್ವಿಯಾಗಿ ವೇಗ ತಗ್ಗಿಸುವಿಕೆಯನ್ನು ಯಶಸ್ವಿಯಾಗಿ ಕೈಗೊಳ್ಳಲಾಗಿದೆ. ಇನ್ನೇನಿದ್ದರೂ ಇಸ್ರೋ ವಿಜ್ಞಾನಿಗಳಿಗೆ ಆಗಸ್ಟ್ 23ರಂದು ಸಾಫ್ಟ್ ಲ್ಯಾಂಡಿಂಗ್ ಮಾಡುವುದಷ್ಟೇ ಬಾಕಿ ಉಳಿದಿದೆ. ಸಾಫ್ಟ್ ಲ್ಯಾಂಡಿಂಗ್ ಯಶಸ್ವಿಯಾದರೆ ಭಾರತ ಇತಿಹಾಸ ಸೃಷ್ಟಿಸಲಿದೆ. ಹಾಗಾಗಿ, ಎಲ್ಲರ ಗಮನ ಈಗ ಆಗಸ್ಟ್ 23ರತ್ತ ಇದೆ.
ಇದನ್ನೂ ಓದಿ: Russia Moon Mission: ಭಾರತ ಬೆನ್ನಲ್ಲೇ ರಷ್ಯಾದಿಂದಲೂ ಚಂದ್ರಯಾನ; ಮೊದಲು ತಲುಪುವವರು ಯಾರು?
ಜುಲೈ 14ರಂದು ಇಸ್ರೋ ಚಂದ್ರಯಾನ 3 ಮಿಷನ್ ಉಡಾವಣೆ ಮಾಡಿದೆ. ಚಂದ್ರಯಾನ 3 ಮಿಷನ್ ಆಗಸ್ಟ್ 5ರಂದು ಚಂದ್ರನ ಕಕ್ಷೆ ತಲುಪಿದೆ. ಇನ್ನು ರಷ್ಯಾ ಕೂಡ ದಕ್ಷಿಣ ಧ್ರುವದಲ್ಲೇ ಇಳಿಯುವ ದಿಸೆಯಲ್ಲಿ ಚಂದ್ರಯಾನ ಕೈಗೊಂಡಿದ್ದು, ಆಗಸ್ಟ್ 23ರಂದು ಯಾವ ದೇಶದ ನೌಕೆಯು ಸಾಫ್ಟ್ ಲ್ಯಾಂಡ್ ಆಗಲಿದೆ ಎಂಬ ಕುತೂಹಲ ಹೆಚ್ಚಾಗಿದೆ. ಹಾಗೊಂದು ವೇಳೆ ಭಾರತದ ನೌಕೆ ಸುರಕ್ಷಿತವಾಗಿ ಇಳಿದರೆ, ಇಂತಹ ಸಾಧನೆ ಮಾಡಿದ ಜಗತ್ತಿನ ಮೊದಲ ರಾಷ್ಟ್ರ ಎಂಬ ಖ್ಯಾತಿ ಭಾರತದ್ದಾಗಲಿದೆ. ಆದರೆ, ರಷ್ಯಾದ ಲೂನಾ 25 ನೌಕೆಗೆ ಲ್ಯಾಂಡಿಂಗ್‌ಗೂ ಮುನ್ನ ಸಮಸ್ಯೆ ಎದುರಾಗಿದೆ ಎಂದು ತಿಳಿದುಬಂದಿದೆ.