Site icon Vistara News

Chandrayaan 3: ಶ್ರೀಹರಿಕೋಟದಲ್ಲೇ ಲೈವ್‌ ಆಗಿ ಚಂದ್ರಯಾನ ವೀಕ್ಷಿಸಲಿರುವ 100ಕ್ಕೂ ಅಧಿಕ ಕನ್ನಡಿಗರು

Chandrayaan 3 Mission Is Ready To Launch

Chandrayaan 3: Hundreds Of Kannadigas Will Watch The Launch At Sriharikota

ಬೆಂಗಳೂರು: ಇಸ್ರೊದ ಮಹತ್ವಾಕಾಂಕ್ಷಿ ಚಂದ್ರಯಾನ 3 ಉಡಾವಣೆಗೆ (Chandrayaan 3) ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್‌ ಧವನ್‌ ಬಾಹ್ಯಾಕಾಶ ಸಂಶೋಧನಾ ಕೇಂದ್ರ ಸಜ್ಜಾಗಿದೆ. ಜುಲೈ 14ರ ಶುಕ್ರವಾರ ಮಧ್ಯಾಹ್ನ 2.35ಕ್ಕೆ ಸ್ಯಾಟಲೈಟ್‌ ಲಾಂಚ್‌ ವೆಹಿಕಲ್‌ ಮಾರ್ಕ್‌- 3 (LVM-3) ರಾಕೆಟ್‌ ಮೂಲಕ ಚಂದ್ರಯಾನ-3 ಮಿಷನ್‌ ಕೈಗೊಳ್ಳಲಾಗುತ್ತಿದೆ. ಇನ್ನು ಚಂದ್ರಯಾನ ಉಡಾವಣೆಯ ಐತಿಹಾಸಿಕ ಕ್ಷಣಗಳನ್ನು ವೀಕ್ಷಿಸಲು ಇಸ್ರೊ ಅವಕಾಶ ನೀಡಿದ್ದು, ಇದರಲ್ಲಿ ನೇರವಾಗಿ ವೀಕ್ಷಿಸುವ ಸಾವಿರಾರು ಜನರಲ್ಲಿ ನೂರಾರು ಕನ್ನಡಿಗರೂ ಇದ್ದಾರೆ ಎಂಬುದು ಗಮನಾರ್ಹ ಸಂಗತಿಯಾಗಿದೆ.

ಹೌದು, ಶ್ರೀಹರಿಕೋಟದ ಎಸ್‌ಡಿಎಸ್‌ಸಿ-ಎಸ್‌ಎಚ್‌ಎಆರ್‌ನ ಲಾಂಚ್ ವ್ಯೂ ಗ್ಯಾಲರಿ ಮೂಲಕ ಚಂದ್ರಯಾನ-3 ಲಾಂಚ್ ಕ್ಷಣದಗಳನ್ನು ವೀಕ್ಷಿಸಲು ಸಾರ್ವಜನಿಕರಿಗೆ ಇಸ್ರೊ ಆಹ್ವಾನಿಸಿದೆ. ಚಂದ್ರಯಾನ ವೀಕ್ಷಣೆಗೆ ಬೆಂಗಳೂರಿನಿಂದ 130 ಜನ ಆಯ್ಕೆಯಾಗಿದ್ದು, ಇವರಲ್ಲಿ 100 ಕ್ಕೂ ಅಧಿಕ ಕನ್ನಡಿಗರಿದ್ದಾರೆ. ಬಾಹ್ಯಾಕಾಶದ ಬಗ್ಗೆ ಕುತೂಹಲ ಇರುವ ಉತ್ತರ ಕರ್ನಾಟಕದವರಿಗೂ ಚಂದ್ರಯಾನ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿದುಬಂದಿದೆ. ಲಡಾಕ್‌ ಸೈನ್ಸ್‌ ಫೌಂಡೇಷನ್‌ (LSF) ಹಾಗೂ ಇಸ್ರೊ ಸಹಯೋಗದಲ್ಲಿ ಜನರಿಗೆ ಉಡಾವಣೆಯನ್ನು ವೀಕ್ಷಿಸಲು ಅವಕಾಶ ನೀಡಲಾಗಿದೆ.

ಉಡಾವಣೆಗೆ ಸಜ್ಜು

ಶ್ರೀಹರಿಕೋಟಕ್ಕೆ ತೆರಳಲು ಆಗದವರು ಬೆಂಗಳೂರಿನಲ್ಲೂ ಉಡಾವಣೆಯನ್ನು ಲೈವ್‌ ಆಗಿ ನೋಡಲು ಅವಕಾಶ ಕಲ್ಪಿಸಲಾಗಿದೆ. ಬೆಂಗಳೂರಿನ ನೆಹರು ತಾರಾಲಯದಲ್ಲಿ ಚಂದ್ರಯಾನದ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ. ವಿಜ್ಞಾನಿ ಗುರುಪ್ರಸಾದ್‌ ಅವರು ಉಡಾವಣೆಯ ಕುರಿತ ಮಾಹಿತಿಯನ್ನು ಕನ್ನಡದಲ್ಲಿಯೇ ತಿಳಿಸಿದ್ದಾರೆ. ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳು ಸೇರಿ ಎಲ್ಲ ಸಾರ್ವಜನಿಕರು ಶುಕ್ರವಾರ ಮಧ್ಯಾಹ್ನ 1.30ರಿಂದ 3.30ರವರೆಗೆ ನೆಹರು ತಾರಾಲಯದಲ್ಲಿ ಚಂದ್ರಯಾನ 3 ಉಡಾವಣೆಯ ವೀಕ್ಷಣೆ ಮಾಡಬಹುದಾಗಿದೆ.

ಇದನ್ನೂ ಓದಿ: Chandrayaan 3: ಚಂದ್ರಯಾನ ಯಶಸ್ಸಿಗಾಗಿ ತಿರುಪತಿ ದೇಗುಲಕ್ಕೆ ತೆರಳಿ ಪ್ರಾರ್ಥಿಸಿದ ಇಸ್ರೊ ವಿಜ್ಞಾನಿಗಳು

ಆನ್‌ಲೈನ್‌ನಲ್ಲಿ ಚಂದ್ರಯಾನ-3 ಲಾಂಚ್ ವೀಕ್ಷಿಸಿ

ಒಂದೊಮ್ಮೆ ಇಸ್ರೋ ಲಾಂಚಿಂಗ್‌ ಸೆಂಟರ್‌ನಲ್ಲಿ ವೀಕ್ಷಿಸಲು ಸಾಧ್ಯವಾಗದೇ ಹೋದರೆ ಸಾರ್ವಜನಿಕರು ಆನ್‌ಲೈನ್ ಮೂಲಕ ಈ ಕ್ಷಣಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಇಸ್ರೊ ಆಫಿಷಿಯಲ್ ಯುಟ್ಯೂಬ್ ಚಾನೆಲ್ ಮೂಲಕ ವೀಕ್ಷಣೆ ಮಾಡಬಹುದಾಗಿದೆ. ಚಂದ್ರಯಾನ-3 ಲಾಂಚ್ ಆನ್ ಲೈನ್ ವೀಕ್ಷಣೆಗೆ ಇಲ್ಲಿ ಕ್ಲಿಕ್ ಮಾಡಿ. ಅಷ್ಟೇ ಅಲ್ಲದೇ, ಇಸ್ರೋ ಅಧಿಕೃತ ಜಾಲತಾಣ ಮೂಲಕ ವೀಕ್ಷಣೆ ಮಾಡಬಹುದಾಗಿದೆ.

Exit mobile version