ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಯ ಮಹತ್ವಾಕಾಂಕ್ಷಿ ಚಂದ್ರಯಾನ 3 (Chandrayaan 3) ನಿರ್ಣಾಯಕ ಹಂತ ತಲುಪಿದೆ. ಚಂದ್ರಯಾನದ ಪ್ರೊಪಲ್ಶನ್ ಮಾಡ್ಯೂಲ್‌ನಿಂದ ವಿಕ್ರಮ್ ಲ್ಯಾಂಡರ್ ಬೇರ್ಪಟ್ಟಿದ್ದು, ಚಂದ್ರನ ಅಂಗಳದ ದಕ್ಷಿಣ ಧ್ರುವಕ್ಕೆ ಇಳಿಯಲು ಲ್ಯಾಂಡರ್ ಸಜ್ಜಾಗಿದೆ. ಇದರ ಬೆನ್ನಲ್ಲೇ, ಚಂದಿರನ ಅಂಗಳದಿಂದ ವಿಕ್ರಮ್ ಲ್ಯಾಂಡರ್ ಅದ್ಭುತ ಫೋಟೊಗಳನ್ನು ಕಳುಹಿಸಿದೆ. ಇದರ ಬೆನ್ನಲ್ಲೇ, ನೌಕೆಯ ವೇಗ ತಗ್ಗಿಸುವ ಪ್ರಕ್ರಿಯೆಯೂ (Deboosting) ಶುಕ್ರವಾರ (ಆಗಸ್ಟ್) ಸಂಜೆ 4 ಗಂಟೆಗೆ ಯಶಸ್ವಿಯಾಗಿದೆ. ಡಿಬೂಸ್ಟಿಂಗ್ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಕೈಗೊಳ್ಳಲಾಗಿದ್ದು, ನೌಕೆ ಆರೋಗ್ಯಯುತವಾಗಿದೆ ಎಂದು ಇಸ್ರೋ ತಿಳಿಸಿದೆ. ಆಗಸ್ಟ್ 20ರಂದು ಎರಡನೇ ಬಾರಿಗೆ ವೇಗ ಇಳಿಸಲಾಗುತ್ತದೆ ಎಂದು ಕೂಡ ಮಾಹಿತಿ ನೀಡಿದೆ.
ನೌಕೆ ವೇಗ ತಗ್ಗಿಸುವ ಪ್ರಕ್ರಿಯೆ ಯಶಸ್ವಿ
“ಪ್ರೊಪಲ್ಶನ್ ಮಾಡ್ಯೂಲ್‌ನಿಂದ ವಿಕ್ರಮ್ ಲ್ಯಾಂಡರ್ ಬೇರ್ಪಡುತ್ತಲೇ ಚಂದಿರನ ಅಂಗಳದ ಹಲವು ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ” ಎಂದು ಹಲವು ಫೋಟೊಗಳ ಕೊಲಾಜ್ ಇರುವ ವಿಡಿಯೊವನ್ನು ಇಸ್ರೋ ಟ್ವೀಟ್ (ಈಗ X) ಮಾಡಿದೆ. ಹಾಗೆಯೇ, ಆಗಸ್ಟ್ 15ರಿಂದ 17ರ ಅವಧಿಯಲ್ಲಿ ತೆಗೆಯಲಾದ ಹಲವು ಫೋಟೊಗಳನ್ನು ಕೂಡ ಇಸ್ರೋ ಹಂಚಿಕೊಂಡಿದೆ. ಚಂದಿರನ ಅಂಗಳದ ಫೋಟೊಗಳನ್ನು ನೋಡಿ ಜನ ಪುಳಕಿತರಾಗಿದ್ದಾರೆ.
ಆಗಸ್ಟ್ 17ರ ಫೋಟೊಗಳು
ಚಂದ್ರನಿಂದ ಲ್ಯಾಂಡರ್ ಕೆಲವೇ ಕಿಲೋಮೀಟರ್ ದೂರದಲ್ಲಿದೆ. ಗುರುವಾರ ಲ್ಯಾಂಡರ್ ಬೇರ್ಪಟ್ಟ ಕಾರಣ ಅದರ ವೇಗ ಕಡಿಮೆಯಾಗಿದೆ. ಸಾಫ್ಟ್ ಲ್ಯಾಂಡಿಂಗ್ ದೃಷ್ಟಿಯಿಂದ ವೇಗವನ್ನು ಕಡಿಮೆಗೊಳಿಸಲಾಗುತ್ತಿದೆ. ಹೀಗೆ ನಿಯಮಿತವಾಗಿ ವೇಗ ಕಡಿಮೆಗೊಳಿಸುತ್ತ ವಿಕ್ರಮ್ ಲ್ಯಾಂಡರ್‌ಅನ್ನು ಚಂದ್ರನಿಗೆ ಮತ್ತಷ್ಟು ಸಮೀಪಗೊಳಿಸಲಾಗುತ್ತದೆ. ಆಗಸ್ಟ್ 23ರಂದು ಸಂಜೆ 5.47ಕ್ಕೆ ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡ್ ಆದರೆ ಭಾರತ ಇತಿಹಾಸ ಸೃಷ್ಟಿಸಲಿದೆ. ಹಾಗಾಗಿ, ಮುಂದಿನ ಪ್ರಕ್ರಿಯೆಗಳು ಕುತೂಹಲ ಕೆರಳಿಸಿವೆ.
ಆಗಸ್ಟ್ 15ರ ಫೋಟೊಗಳು
ಜುಲೈ 14ರಂದು ಇಸ್ರೋ ಚಂದ್ರಯಾನ 3 ಮಿಷನ್ ಉಡಾವಣೆ ಮಾಡಿದೆ. ಚಂದ್ರಯಾನ 3 ಮಿಷನ್ ಆಗಸ್ಟ್ 5ರಂದು ಚಂದ್ರನ ಕಕ್ಷೆ ತಲುಪಿದೆ. ಇನ್ನು ರಷ್ಯಾ ಕೂಡ ದಕ್ಷಿಣ ಧ್ರುವದಲ್ಲೇ ಇಳಿಯುವ ದಿಸೆಯಲ್ಲಿ ಚಂದ್ರಯಾನ ಕೈಗೊಂಡಿದ್ದು, ಆಗಸ್ಟ್ 23ರಂದು ಯಾವ ದೇಶದ ನೌಕೆಯು ಸಾಫ್ಟ್ ಲ್ಯಾಂಡ್ ಆಗಲಿದೆ ಎಂಬ ಕುತೂಹಲ ಹೆಚ್ಚಾಗಿದೆ. ಹಾಗೊಂದು ವೇಳೆ ಭಾರತದ ನೌಕೆ ಸುರಕ್ಷಿತವಾಗಿ ಇಳಿದರೆ, ಇಂತಹ ಸಾಧನೆ ಮಾಡಿದ ಜಗತ್ತಿನ ಮೊದಲ ರಾಷ್ಟ್ರ ಎಂಬ ಖ್ಯಾತಿ ಭಾರತದ್ದಾಗಲಿದೆ.