ಮಂಗಳೂರು: ಭಾರತೀಯರ ಚಂದ್ರಯಾನದ ಕನಸು ನನಸಾಗಲು ಕ್ಷಣಗಣನೆ ಆರಂಭವಾಗಿದೆ. ಇದೇ ಆಗಸ್ಟ್ 23ರಂದು ಸಂಜೆ 6:04ಕ್ಕೆ (ಭಾರತೀಯ ಕಾಲಮಾನ) ಚಂದ್ರಯಾನ 3 (Chandrayaan 3) ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಪ್ರಕಟಿಸಿದೆ. ಈ ಅಪರೂಪದ ಕ್ಷಣಕ್ಕೆ ಎಲ್ಲರೂ ಕಾದುಕುಳಿತಿದ್ದಾರೆ. ಚಂದ್ರನ ಸುರಕ್ಷಿತವಾಗಿ ಇಳಿಯಲಿ ಎಂದು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ (Kukke Subrahmanya Temple) ನಾಗರ ಪಂಚಮಿಯಂದು ವಿಶೇಷ ಪೂಜೆ (Nag Panchami) ನೆರವೇರಿಸಲಾಗಿದೆ.
ನಾಗರ ಪಂಚಮಿ ದಿನದಂದು ಇಸ್ರೋ ಹೆಸರಿನಲ್ಲಿ ನಾಗ ದೇವರಿಗೆ ಕಾರ್ತಿಕ ಪೂಜೆಯನ್ನು ಸಲ್ಲಿಸಲಾಗಿದೆ. ಕುಕ್ಕೆ ಸುಬ್ರಹ್ಮಣ್ಯ ಆಡಳಿತ ಮಂಡಳಿ ಹಾಗೂ ಸಾರ್ವಜನಿಕರ ಸೇವೆ ಅಡಿ ಚಂದ್ರಯಾನ 3 ರ ಯಶಸ್ವಿಗೆ ಇಸ್ರೋ ಹೆಸರಲ್ಲಿ ಅರ್ಚನೆ ಮಾಡಲಾಗುತ್ತಿದೆ. ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಗುತ್ತಿದ್ದು, ನಾಗ ದೇವರಿಗೆ ಹಾಲಿನ ಅಭಿಷೇಕ ಮಾಡಿ ಪೂಜೆ ಮಾಡಲಾಗುತ್ತಿದೆ.
ಸ್ಮರಣೀಯ ಕ್ಷಣಕ್ಕೆ ಕಾದು ಕುಳಿತ ಶತಕೋಟಿ ಜನ
ಚಂದ್ರಯಾನ 3 (Chandrayaan 3) ನೌಕೆಯು ಚಂದ್ರನ (Lunar mission) ಸುತ್ತ ತನ್ನ ನಿಗದಿತ ಐದು ಸುತ್ತುಗಳಲ್ಲಿ ಕೊನೆಯ ಸುತ್ತನ್ನು ಪೂರ್ಣಗೊಳಿಸಿದೆ. ಇದರೊಂದಿಗೆ ಚಂದ್ರನಿಗೆ ಭಾರತದ ನೌಕೆ ಇನ್ನಷ್ಟು ಹತ್ತಿರವಾಗಿದೆ. ಅಷ್ಟೇ ಅಲ್ಲ, ಗುರುವಾರ (ಆಗಸ್ಟ್ 17) ನೌಕೆಯಿಂದ ಲ್ಯಾಂಡರ್‌ಅನ್ನು ಬೇರ್ಪಡಿಸುವ ಪ್ರಕ್ರಿಯೆ ನಡೆಯಲಿದ್ದು, ಇದರೊಂದಿಗೆ ಚಂದ್ರಯಾನ-3 ಕೊನೆಯ ಹಂತ ತಲುಪಿದಂತಾಗಿದೆ.
ಈ ಸಾಧನೆಯು ಭಾರತೀಯ ವಿಜ್ಞಾನ, ಎಂಜಿನಿಯರಿಂಗ್, ತಂತ್ರಜ್ಞಾನ ಮತ್ತು ಉದ್ಯಮ ಕ್ಷೇತ್ರದಲ್ಲಿನ ಮಹತ್ವದ ಹೆಜ್ಜೆಯಾಗಿದೆ. ಬಾಹ್ಯಾಕಾಶ ಪರಿಶೋಧನೆಯಲ್ಲಿ ನಮ್ಮ ರಾಷ್ಟ್ರದ ಪ್ರಗತಿಯನ್ನು ಇದು ಸಂಕೇತಿಸುತ್ತದೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಚಂದ್ರಯಾನ -3 ರ ಸಾಫ್ಟ್ ಲ್ಯಾಂಡಿಂಗ್ ಒಂದು ‘ಸ್ಮರಣೀಯ ಕ್ಷಣ’ ಎಂದು ಇಸ್ರೋ ಹೇಳಿದೆ. ಇದು ಕುತೂಹಲವನ್ನು ಹೆಚ್ಚಿಸುವುದಲ್ಲದೆ ನಮ್ಮ ಯುವಕರ ಮನಸ್ಸಿನಲ್ಲಿ ಅನ್ವೇಷಣೆಯ ಉತ್ಸಾಹವನ್ನು ಪ್ರಚೋದಿಸುತ್ತದೆ ಎಂಬುದಾಗಿಯೂ ತಿಳಿಸಿದೆ.
ನಾವು ಒಟ್ಟಾಗಿ ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನದ ಸಾಮರ್ಥ್ಯವನ್ನು ಸಂಭ್ರಮಿಸುತ್ತಿದ್ದೇವೆ. ಇದು ಆಳವಾದ ಹೆಮ್ಮೆ ಮತ್ತು ಏಕತೆಯ ಪ್ರಜ್ಞೆಯನ್ನು ಸೃಷ್ಟಿಸುತ್ತದೆ. ಇದು ವೈಜ್ಞಾನಿಕ ವಿಚಾರಣೆ ಮತ್ತು ನಾವೀನ್ಯತೆಯ ವಾತಾವರಣವನ್ನು ಬೆಳೆಸಲು ಕೊಡುಗೆ ನೀಡಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ ಅಭಿಪ್ರಾಯ ಪಟ್ಟಿದೆ.
ಚಂದ್ರಯಾನ-3 ಲ್ಯಾಂಡಿಂಗ್ ಯಾವಾಗ?
ಎಲ್ಲರೂ ಕೌತುಕದಿಂದ ಕಾಯುವ ಚಂದ್ರಯಾನದ-3ರ ಸಾಫ್ಟ್ ಲ್ಯಾಂಡಿಂಗ್ ಆಗಸ್ಟ್ 23, 2023 ರಂದು ಸಂಜೆ 5:27 ರಿಂದ ನೇರ ಪ್ರಸಾರವಾಗಲಿದೆ. ಇಸ್ರೋದ ಅಧಿಕೃತ ವೆಬ್‌ಸೈಟ್, ಅದರ ಅಧಿಕೃತ ಯೂಟ್ಯೂಬ್ ಚಾನೆಲ್, ಅದರ ಅಧಿಕೃತ ಫೇಸ್‌ಬುಕ್ ಪುಟ ಮತ್ತು ಡಿಡಿ ನ್ಯಾಷನಲ್ ಟಿವಿ ಚಾನೆಲ್ ಸೇರಿದಂತೆ ಅನೇಕ ವೇದಿಕೆಗಳಲ್ಲಿ ನೇರ ಪ್ರಸಾರವಾಗಲಿದೆ. ಆಗಸ್ಟ್ 23, 2023 ರಂದು ಸಂಜೆ 6:04 ರ ಸುಮಾರಿಗೆ ಚಂದ್ರಯಾನ -3 ಚಂದ್ರನ ಮೇಲೆ ಇಳಿಯಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ