ಬೆಂಗಳೂರು: ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ 3 (Chandrayaan 3) ಮಿಷನ್‌ನ ನೌಕೆಯು ಸಾಫ್ಟ್ ಲ್ಯಾಂಡ್ ಆದ ಬಳಿಕ ಪ್ರಜ್ಞಾನ್ ರೋವರ್ ಅಧ್ಯಯನ ಆರಂಭಿಸಿದ್ದು, ಚಂದ್ರನ ದಕ್ಷಿಣ ಧ್ರುವದ ಮೇಲ್ಮೈನಲ್ಲಿ ಗಂಧಕ ಕೆಮಿಕಲ್ (Sulphur) ಇರುವುದನ್ನು ದೃಢಪಡಿಸಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಇದನ್ನು ಖಚಿತಪಡಿಸಿದೆ. ಇದರಿಂದ ಚಂದ್ರಯಾನ 3 ಮಿಷನ್‌ಗೆ ಮಹತ್ವದ ಮುನ್ನಡೆ ಸಿಕ್ಕಂತಾಗಿದೆ.
“ಚಂದ್ರನ ದಕ್ಷಿಣ ಧ್ರುವದ ಮೇಲ್ಮೈನಲ್ಲಿ ಸಲ್ಫರ್ (S) ಇರುವುದನ್ನು ಪ್ರಜ್ಞಾನ್ ರೋವರ್‌ನಲ್ಲಿರುವ ಲೇಸರ್-ಇಂಡ್ಯೂಸ್ಡ್ ಬ್ರೇಕ್‌ಡೌನ್ ಸ್ಪೆಕ್ಟ್ರೋಸ್ಕೋಪ್ (LIBS) ಉಪಕರಣವು ದೃಢಪಡಿಸಿದೆ” ಎಂದು ಇಸ್ರೋ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ತಿಳಿಸಿದೆ. ಇದರೊಂದಿಗೆ ಚಂದ್ರನ ಅಂಗಳದಲ್ಲಿ ಪ್ರಜ್ಞಾನ್ ರೋವರ್ ಅಧ್ಯಯನ ಆರಂಭಿಸಿ ಒಂದು ವಾರ ಆಗಿದ್ದು, ಇನ್ನೂ ಏಳು ದಿನ ಅಧ್ಯಯನ ನಡೆಸಲಿದೆ.
ಇಸ್ರೋ ಹಂಚಿಕೊಂಡ ಮಾಹಿತಿ
ಚಂದ್ರನ ದಕ್ಷಿಣ ಧ್ರುವದ ಮೇಲ್ಮೈನಲ್ಲಿ ಗಂಧಕದ ಜತೆಗೆ ಅಲ್ಯೂಮಿನಿಯಂ (AI), ಕ್ಯಾಲ್ಶಿಯಂ (Ca), ಐರನ್ (Fe), ಟೈಟಾನಿಯಂ (Ti), ಮ್ಯಾಂಗನೀಸ್ (Mn), ಸಿಲಿಕಾನ್ (Si) ಹಾಗೂ ಆಮ್ಲಜನಕದ (O) ಅಂಶಗಳನ್ನೂ ಪ್ರಜ್ಞಾನ್ ರೋವರ್ ಪತ್ತೆಹಚ್ಚಿದೆ. ಇನ್ನೂ ಹೆಚ್ಚಿನ ಅಂಶಗಳ ಕುರಿತು ಅಧ್ಯಯನ ಮುಂದುವರಿದಿದ್ದು, ಯಾವ ಅಂಶಗಳು ಪತ್ತೆಯಾಗುತ್ತವೆ ಎಂಬ ನಿರೀಕ್ಷೆ ಹೆಚ್ಚಾಗಿದೆ.
ಇದನ್ನೂ ಓದಿ: Chandrayaan 3: ನಾಲ್ಕು ಮೀಟರ್ ದೊಡ್ಡ ಕುಳಿಯೊಳಗೇ ಬೀಳುತ್ತಿತ್ತು ಪ್ರಜ್ಞಾನ್ ರೋವರ್! ಆದರೆ…
ಜುಲೈ 14ರಂದು ಇಸ್ರೋ ಚಂದ್ರಯಾನ 3 ಮಿಷನ್ ಉಡಾವಣೆ ಮಾಡಿದೆ. ಮಿಷನ್‌ನ ನೌಕೆಯು ಆಗಸ್ಟ್ 23ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್‌ಲ್ಯಾಂಡ್ ಆಗಿದೆ. ಇದರೊಂದಿಗೆ ಜಗತ್ತಿನಲ್ಲೇ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡ್ ಮಾಡಿದ ಮೊದಲ ದೇಶ ಭಾರತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹಾಗಾಗಿ, ಇಸ್ರೋ ವಿಜ್ಞಾನಿಗಳಿಗೆ ಭಾರತ ಸೇರಿ ಜಗತ್ತಿನಾದ್ಯಂತ ಅಭಿನಂದನೆ, ಮೆಚ್ಚುಗೆಗಳ ಮಹಾಪೂರವೇ ಹರಿದುಬಂದಿದೆ.