ಬೆಳಗಾವಿ: ಭಾರತೀಯ ಬಾಹ್ಯಾಕಾಶ ಸಂಸ್ಥೆ (ISRO) ಮಹತ್ವಾಕಾಂಕ್ಷೆಯ ಚಂದ್ರಯಾನ 3 (Chandrayaan 3) ಉಡಾವಣೆಗೊಂಡಿದೆ. ಜಗತ್ತೇ ಕಾತರದಿಂದ ಕಾಯುತ್ತಿರುವ ಈ ಮಹತ್ವಾಕಾಂಕ್ಷಿ ಪಯಣ ಶ್ರೀಹರಿ ಕೋಟಾದ (Sriharikota) ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ (Satish Dhawan Space centre) ಆರಂಭವಾಗಿದೆ. ಇದು ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲೊಂದು ಐತಿಹಾಸಿಕ ಮೈಲುಗಲ್ಲಾಗಿದೆ.
ಇಂಥ ಅಪೂರ್ವ ಚಂದ್ರಯಾನಕ್ಕೆ ಬಲ ತುಂಬಿದ ರಾಕೆಟ್ ಮತ್ತು ಲಾಂಚರ್‌ಗಳ ಬಿಡಿಭಾಗ ತಯಾರಾಗಿದ್ದು ಬೆಳಗಾವಿಯಲ್ಲಿ. ಹೌದು, ಜಗತ್ತೇ ಕೌತುಕದಿಂದ ಕಾಯುತ್ತಿರುವ ಚಂದ್ರಯಾನ-3 ರಾಕೆಟ್‌ಗೆ ಬಳಸಿದ್ದ ಬಿಡಿಭಾಗ ತಯಾರಿಕೆಯಾಗಿದ್ದು ಕುಂದಾನಗರಿಯಲ್ಲಿ.
ಬೆಳಗಾವಿಯ ಸರ್ವೋ ಕಂಟ್ರೋಲರ್ ಏರೋಸ್ಪೇಸ್ ಇಂಡಿಯಾ ಪ್ರೈ ಲಿಮಿಟೆಡ್‌ನಲ್ಲಿ ಬಿಡಿಭಾಗ ತಯಾರಿಕೆ ನಡೆದಿದೆ ಎಂದು ಸಂಸ್ಥೆಯ ಆಡಳಿತ ನಿರ್ದೇಶಕ ದೀಪಕ್ ಧಡೂತಿ ತಿಳಿಸಿದ್ದಾರೆ.
ʻʻಚಂದ್ರಯಾನ-3 ಪ್ರಯಾಣ ಬೆಳೆಸಲಿರುವ ರಾಕೆಟ್, ಲಾಂಚರ್‌ಗೆ ಬಿಡಿಭಾಗ ನಾವೇ ತಯಾರಿಸಿದ್ದೇವೆ. ಚಂದ್ರಯಾನ-2 ಕೊನೆಯ ಘಳಿಗೆಯಲ್ಲಿ ವಿಫಲವಾಯಿತು, ಚಂದ್ರಯಾನ-3 ಯಶಸ್ವಿಯಾಗಲಿದೆʼʼ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸರ್ವೋ ಕಂಟ್ರೋಲರ್ ಏರೋಸ್ಪೇಸ್ ಇಂಡಿಯಾ ಪ್ರೈ ಲಿ ಕಳೆದ 15 ವರ್ಷಗಳಿಂದ ಇಸ್ರೋ ಜತೆಗೆ ಕೆಲಸ ಮಾಡುತ್ತಿದೆ. ಈ ಹಿಂದೆ ಮಂಗಳಯಾನ ಯಶಸ್ವಿಯಾದ ರಾಕೆಟ್‌ಗೂ ಬೆಳಗಾವಿಯಿಂದಲೇ ಬಿಡಿಭಾಗ ಪೂರೈಸಲಾಗಿತ್ತು ಎಂದು ದೀಪಕ್ ಧಡೂತಿ ತಿಳಿಸಿದ್ದಾರೆ.
ʻʻಸ್ವದೇಶಿ ಮತ್ತು ವಿದೇಶಿ ಟೆಕ್ನಾಲಜಿ ಬಳಸಿ ಬಿಡಿಭಾಗಗಳನ್ನು ಇಸ್ರೋಗೆ ಪೂರೈಕೆ ಮಾಡಲಾಗಿದೆʼʼ ಎಂದು ಹೇಳಿರುವ ದೀಪಕ್ ದಢೂತಿ, ಇಸ್ರೋ ಜೊತೆಗೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ನಮ್ಮ ಭಾಗ್ಯ, ಇದು ಕರುನಾಡೇ ಹೆಮ್ಮೆ ಡುವ ಸಂಗತಿʼʼ ಎಂದು ಹೇಳಿದ್ದಾರೆ.
ವಿಜ್ಞಾನಿ ಪ್ರಕಾಶ್ ಪೆಡ್ನೇಕರ್ ಭಾಗಿ
ಬೆಳಗಾವಿಯ ವಿಜ್ಞಾನಿ ಪ್ರಕಾಶ್ ಪೆಡ್ನೇಕರ್ ಅವರು ಈ ಚಂದ್ರಯಾನದಲ್ಲಿ ಭಾಗಿಯಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಅನಗಡಿ ಗ್ರಾಮದ ಪ್ರಕಾಶ ಪಡ್ನೇಕರ್ ಚಂದ್ರಯಾನ-3 ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಅವರು ಕಳೆದ 5 ವರ್ಷಗಳಿಂದ ಶ್ರೀಹರಿಕೋಟಾದಲ್ಲಿ ವಿಜ್ಞಾನಿಯಾಗಿದ್ದಾರೆ.
ಇದನ್ನೂ ಓದಿ : Chandrayaan 3: ಚಂದ್ರಯಾನ 3 ಉಡಾವಣೆ ಯಶಸ್ವಿ; ಆದರೂ, ಆಗಸ್ಟ್ 23ರವರೆಗೆ ನಾವೇಕೆ ಕಾಯಬೇಕು?