ಬೆಂಗಳೂರು: ಭಾರತದ ಇಸ್ರೋ ಕೈಗೊಂಡಿರುವ ಚಂದ್ರಯಾನ 3 ಮಿಷನ್ ಕುರಿತು ದೇಶಾದ್ಯಂತ ಕುತೂಹಲ ಮೂಡಿದೆ. ಚಂದ್ರಯಾನ 3 ಲ್ಯಾಂಡರ್ ಮಾಡ್ಯೂಲ್ (Lander Module) ಆಗಸ್ಟ್ 23ರಂದು ಸಂಜೆ ಸಾಫ್ಟ್ ಲ್ಯಾಂಡ್ ಆಗಲಿದ್ದು, ಇದರೊಂದಿಗೆ ಭಾರತ ಇತಿಹಾಸ ಸೃಷ್ಟಿಸಲಿದೆ. ಹೀಗೆ ಲ್ಯಾಂಡರ್ ಮಾಡ್ಯೂಲ್ ಸಾಫ್ಟ್ ಲ್ಯಾಂಡಿಂಗ್ ಯಶಸ್ಸಿಗೆ ದೇಶವೇ ಕಾಯುತ್ತಿರುವ ಬೆನ್ನಲ್ಲೇ ಚಂದ್ರನ ಅಂಗಳದಲ್ಲಿ ಲ್ಯಾಂಡರ್ ಮಾಡ್ಯೂಲ್‌ಗೆ 2019ರಲ್ಲಿ ಉಡಾವಣೆ ಮಾಡಲಾದ ಚಂದ್ರಯಾನ 2ರ ಆರ್ಬಿಟರ್ ಸಿಕ್ಕಿದೆ. ಅದರ ಜತೆ ಸಂಪರ್ಕ ಸಾಧಿಸಿದೆ.
ಹೌದು, ಇಸ್ರೋ ಈ ಕುರಿತು ಮಾಹಿತಿ ನೀಡಿದೆ. “ಚಂದ್ರಯಾನ 3ಅನ್ನು ಚಂದ್ರಯಾನ 2 ಔಪಚಾರಿಕವಾಗಿ ಸ್ವಾಗತಿಸಿದೆ. ಚಂದ್ರಯಾನ 3 ಲ್ಯಾಂಡರ್ ಹಾಗೂ ಚಂದ್ರಯಾನ 2ರ ಆರ್ಬಿಟರ್ ಮಧ್ಯೆ ದ್ವಿಮುಖ ಸಂವಹನ ಸಾಧ್ಯವಾಗಿದೆ. ಲ್ಯಾಂಡರ್ ಮಾಡ್ಯೂಲ್ ಜತೆ ಸಂಪರ್ಕ ಸಾಧಿಸಲು ಮತ್ತಷ್ಟು ದಾರಿ ಸಿಕ್ಕಂತಾಗಿದೆ” ಎಂದು ಇಸ್ರೋ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ.
ಇಸ್ರೋ ಮಾಹಿತಿ
ಯಶಸ್ಸಿಗಾಗಿ ಪ್ರಾರ್ಥಿಸಿ ಪೂಜೆ
ಚಂದ್ರನ ಅಂಗಳದಲ್ಲಿ ಲ್ಯಾಂಡರ್ ಸುರಕ್ಷಿತವಾಗಿ ಇಳಿಯಲಿ ಎಂದು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಾಗರ ಪಂಚಮಿಯಂದು ವಿಶೇಷ ಪೂಜೆ ನೆರವೇರಿಸಲಾಗಿದೆ. ನಾಗರ ಪಂಚಮಿ ದಿನದಂದು ಇಸ್ರೋ ಹೆಸರಿನಲ್ಲಿ ನಾಗ ದೇವರಿಗೆ ಕಾರ್ತಿಕ ಪೂಜೆಯನ್ನು ಸಲ್ಲಿಸಲಾಗಿದೆ. ಕುಕ್ಕೆ ಸುಬ್ರಹ್ಮಣ್ಯ ಆಡಳಿತ ಮಂಡಳಿ ಹಾಗೂ ಸಾರ್ವಜನಿಕರ ಸೇವೆ ಅಡಿ ಚಂದ್ರಯಾನ 3 ರ ಯಶಸ್ವಿಗೆ ಇಸ್ರೋ ಹೆಸರಲ್ಲಿ ಅರ್ಚನೆ ಮಾಡಲಾಗುತ್ತಿದೆ. ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಗುತ್ತಿದ್ದು, ನಾಗ ದೇವರಿಗೆ ಹಾಲಿನ ಅಭಿಷೇಕ ಮಾಡಿ ಪೂಜೆ ಮಾಡಲಾಗುತ್ತಿದೆ.
ಚಂದ್ರಯಾನ 3 ಕಳುಹಿಸಿದ ಫೋಟೊಗಳು
ಚಂದ್ರಯಾನ 3 ಲೈವ್ ವೀಕ್ಷಿಸಿ
ಎಲ್ಲರೂ ಕೌತುಕದಿಂದ ಕಾಯುವ ಚಂದ್ರಯಾನದ-3ರ ಸಾಫ್ಟ್ ಲ್ಯಾಂಡಿಂಗ್ ಆಗಸ್ಟ್ 23, 2023 ರಂದು ಸಂಜೆ 5:27 ರಿಂದ ನೇರ ಪ್ರಸಾರವಾಗಲಿದೆ. ಇಸ್ರೋದ ಅಧಿಕೃತ ವೆಬ್ಸೈಟ್, ಅದರ ಅಧಿಕೃತ ಯೂಟ್ಯೂಬ್ ಚಾನೆಲ್, ಅದರ ಅಧಿಕೃತ ಫೇಸ್‌ಬುಕ್ ಪೇಜ್ ಮತ್ತು ಡಿಡಿ ನ್ಯಾಷನಲ್ ಟಿವಿ ಚಾನೆಲ್ ಸೇರಿದಂತೆ ಅನೇಕ ವೇದಿಕೆಗಳಲ್ಲಿ ನೇರ ಪ್ರಸಾರವಾಗಲಿದೆ. ಆಗಸ್ಟ್ 23, 2023 ರಂದು ಸಂಜೆ 6:04 ರ ಸುಮಾರಿಗೆ ಚಂದ್ರಯಾನ -3 ಚಂದ್ರನ ಮೇಲೆ ಇಳಿಯಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತಿಳಿಸಿದೆ.
ಇದನ್ನೂ ಓದಿ: Chandrayaan 3: ಚಂದ್ರನಲ್ಲಿ ಸೇಫ್ ಲ್ಯಾಂಡಿಂಗ್‌ಗೆ ಅಂಗಳ ಹುಡುಕುತ್ತ ಹೊರಟ ವಿಕ್ರಮ್ ಲ್ಯಾಂಡರ್; ಫೋಟೊ ಹಂಚಿಕೊಂಡ ಇಸ್ರೋ
ಚಂದ್ರನ ಅಂಗಳದಲ್ಲಿ ನೌಕೆಯ ಸಾಫ್ಟ್ ಲ್ಯಾಂಡಿಂಗ್ ಸವಾಲು ಕುರಿತು ಈಗಾಗಲೇ ತಜ್ಞರು ಮಾಹಿತಿ ನೀಡಿದ್ದಾರೆ. “ಚಂದ್ರನ ಮೇಲ್ಮೈನಲ್ಲಿ ಲ್ಯಾಂಡರ್ (ನೌಕೆ)ಯನ್ನು ಅಡ್ಡವಾಗಿರುವ (Horizontal Position) ಭಂಗಿಯಿಂದ ಲಂಬವಾದ (Vertical Position) ಭಂಗಿಗೆ ತರುವುದು ತುಂಬ ಕಷ್ಟದ ಕೆಲಸ. ಈ ಅಡ್ಡವಾಗಿರುವ ನೌಕೆಯನ್ನು ಲಂಬವಾದ ಭಂಗಿಗೆ ತರುವಾಗಲೇ ಚಂದ್ರಯಾನದ ಯಶಸ್ಸು ನಿರ್ಧಾರವಾಗುತ್ತದೆ. ಇದರ ಮೇಲೆಯೇ ವಿಜ್ಞಾನಿಗಳು ಹೆಚ್ಚು ಗಮನ ಹರಿಸುತ್ತಾರೆ” ಎಂದು ಬಾಹ್ಯಾಕಾಶ ತಂತ್ರಜ್ಞ ಪಿ.ಕೆ.ಘೋಷ್ ತಿಳಿಸಿದ್ದಾರೆ.