Site icon Vistara News

Chandru Death | ಮಹಿಳೆಯರಿಂದ ಕೈ ತುತ್ತು ತಿಂದ ರೇಣುಕಾಚಾರ್ಯ; ಸೋಷಿಯಲ್‌ ಮೀಡಿಯಾದಲ್ಲಿ ನೆಟ್ಟಿಗರ ಕಿಡಿ

renuka meals

ಬೆಂಗಳೂರು: ತಮ್ಮ ಸಹೋದರನ ಪುತ್ರ ಚಂದ್ರಶೇಖರ್‌ (Chandru Death) ಸಾವಿನ ಹಿನ್ನೆಲೆಯಲ್ಲಿ ತೀವ್ರ ದುಃಖದಲ್ಲಿರುವ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ. ರೇಣುಕಾಚಾರ್ಯ ಅವರನ್ನು ಅವರ ಹೊನ್ನಾಳಿಯ ಕುಂದೂರಿನ ನಿವಾಸದಲ್ಲಿ ಶನಿವಾರ (ನ. ೧೧) ಅಕ್ಕಪಕ್ಕದ ಗ್ರಾಮದ ಜನರು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ. ಈ ವೇಳೆ ಮಹಿಳೆಯರು ಅವರಿಗೆ ಕೈ ತುತ್ತು ತಿನ್ನಿಸಿ ಧೈರ್ಯ ತುಂಬಿದ್ದಾರೆ. ಆದರೆ, ಈ ವಿಡಿಯೊವನ್ನು ರೇಣುಕಾಚಾರ್ಯ ಅವರು ಸೋಷಿಯಲ್‌ ಮೀಡಿಯಾದಲ್ಲಿ ಅಪ್ಲೋಡ್‌ ಮಾಡಿದ್ದು, ನೆಟ್ಟಿಗರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಬಗ್ಗೆ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡಿರುವ ಶಾಸಕ ರೇಣುಕಾಚಾರ್ಯ, “ಹೊನ್ನಾಳಿಯ ಹಿರೇಕಲ್ಮಠ ನಿವಾಸಕ್ಕೆ ವಿವಿಧ ಗ್ರಾಮಗಳಿಂದ ಆಗಮಿಸಿದ ಮುಖಂಡರು ಸಾಂತ್ವನ ಹೇಳಿದರು. ಅಷ್ಟೇ ಅಲ್ಲದೆ ಮಾದೇನಹಳ್ಳಿ ಗ್ರಾಮಸ್ಥರು ಊಟ-ಉಪಾಹಾರ ಮಾಡಿಕೊಂಡು ಬಂದು ಆತ್ಮಸ್ಥೈರ್ಯ ತುಂಬಿದರು” ಎಂದು ಬರೆದುಕೊಂಡು ವಿಡಿಯೊವನ್ನು ಅಪ್ಲೋಡ್‌ ಮಾಡಿದ್ದಾರೆ.

ಗ್ರಾಮದವರು ಭೇಟಿ ನೀಡಿ ಸಾಂತ್ವನ ಹೇಳುತ್ತಿದ್ದು, ರೇಣುಕಾಚಾರ್ಯ ಅವರು ತಮ್ಮ ಪಾದದಲ್ಲಿ ಗಾಯಗಳಾಗಿವೆ ಎಂಬ ಬಗ್ಗೆ ತೋರಿಸಿದ್ದಾರೆ. ಅಲ್ಲದೆ, ಎಲ್ಲರೂ ತಾವು ಮಾಡಿಕೊಂಡು ತಂದಿದ್ದ ರೊಟ್ಟಿ, ಪಡ್ಡು, ಇಡ್ಲಿ, ಉಪ್ಪಿಟ್ಟು ಸೇರಿದಂತೆ ಹಲವು ತಿಂಡಿ ತಿನಿಸುಗಳನ್ನು ಅವರಿಗೆ ತಿನ್ನಿಸಿದ್ದಾರೆ. ಈ ದೃಶ್ಯವು ಒಂದು ವಿಡಿಯೊದಲ್ಲಿದ್ದು, ರೇಣುಕಾಚಾರ್ಯ ಅವರ ಫೇಸ್‌ಬುಕ್‌ ಖಾತೆಯಲ್ಲಿ ಕಾಣಬಹುದಾಗಿದೆ.

ಇನ್ನೊಂದು ವಿಡಿಯೊದಲ್ಲೇನಿದೆ?
“ನಿಮ್ಮ ಈ ಪ್ರೀತಿಗೆ ನಾನು ಸದಾ ಚಿರಋಣಿ. ಇಂದು ಬೆಳಗ್ಗೆ ಮಾದೇನಹಳ್ಳಿ ಗ್ರಾಮದ ಮಾತೆಯರು ಬೆಳಗಿನ ಉಪಾಹಾರವನ್ನು ಸಿದ್ಧಪಡಿಸಿಕೊಂಡು ನನ್ನ ನಿವಾಸಕ್ಕೆ ಆಗಮಿಸಿ ತುತ್ತು ಮಾಡಿ ತಿನಿಸಿದ್ದು, ನಿಮ್ಮ ಪ್ರೀತಿಗೆ ನಾನು ಸದಾ ಚಿರಋಣಿ. ಉಪಾಹಾರವಾಗಿ ಇಡ್ಲಿ, ಪಡ್ಡು, ಚಟ್ನಿ, ರೊಟ್ಟಿ, ಪಲ್ಯ, ಗಿಣ್ಣ, ಉಪ್ಪಿಟ್ಟು ಸೇರಿದಂತೆ ವಿವಿಧ ಬಗೆಯ ಆಹಾರವನ್ನು ಸಿದ್ಧಪಡಿಸಿಕೊಂಡಿದ್ದರು” ಎಂದು ರೇಣುಕಾಚಾರ್ಯ ಬರೆದುಕೊಂಡಿದ್ದಾರೆ.

ಕಿಡಿಕಾರಿದ ನೆಟ್ಟಿಗರು
ಈ ಎರಡೂ ವಿಡಿಯೊವನ್ನು ಸುಮಾರು ೧೨ ಸಾವಿರಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದು, ಸಾಕಷ್ಟು ಕಮೆಂಟ್‌ಗಳು ಬಂದಿವೆ. “ಸಾವಿನಲ್ಲೂ ರಾಜಕೀಯ ನಿಮಗೆ ಬೇಕೇ?” ಎಂದು ಒಬ್ಬರು ಕಮೆಂಟ್‌ ಮಾಡಿದ್ದರೆ, “ಇಂಥ ವಿಡಿಯೊಗಳನ್ನು ಹಾಕುವ ಅವಶ್ಯಕತೆ ಇಲ್ಲ. ನೀವು ಪ್ರಚಾರಕ್ಕಾಗಿ ನಿಮ್ಮ ತಮ್ಮನ ಮಗನ ಸಾವನ್ನು ಉಪಯೋಗಿಸುತ್ತಿರುವಿರಿ” ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ. “ಇದನ್ನೆಲ್ಲ ನೋಡುತ್ತಿದ್ದರೆ ಪಬ್ಲಿಸಿಟಿ ಹುಚ್ಚು ಜಾಸ್ತಿಯಾಗಿದೆ. ನೀವು ಹಾಕುವ ವಿಡಿಯೊಗಳು ಓವರ್‌ ಆ್ಯಕ್ಷನ್‌ ಆಗಿದೆ, ಇದು ತುಂಬಾ ಜಾಸ್ತಿ ಆಯ್ತು, ನಾಟಕದ ಜೀವನ…” ಹೀಗೆ ತರಹೇವಾರಿಯಾಗಿ ಕಮೆಂಟ್‌ಗಳನ್ನು ಮಾಡಿ ಸಾರ್ವಜನಿಕರು ಆಕ್ರೋಶವನ್ನು ಹೊರಹಾಕಿದ್ದಾರೆ.

ಇದನ್ನೂ ಓದಿ | Chandru Death | ಚಂದ್ರು ಸಾಯುವ ಮುನ್ನ 10ಕ್ಕೂ ಹೆಚ್ಚು ಬಾರಿ ಕರೆ ಮಾಡಿದ್ದು ಯಾರು?

Exit mobile version