ಬೆಂಗಳೂರು: ಕೆಎಸ್‌ಡಿಎಲ್ ಲಂಚ ಪ್ರಕರಣದಲ್ಲಿ (Lokayukta Raid) ಬಂಧನವಾಗಿದ್ದ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದು, ಅವರನ್ನು ಶನಿವಾರ ರಾತ್ರಿ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಿಂದ ಬಿಡುಗಡೆ ಮಾಡಲಾಗಿದೆ.
ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿತರಾಗಿ ಕಳೆದ 15 ದಿನದಿಂದ ಜೈಲಿನಲ್ಲಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಕಾಲ ಕಳೆದಿದ್ದರು. ಆದರೆ ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾ. ಜಯಂತ್ ಕುಮಾರ್ ಅವರು, 5 ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿದ್ದಾರೆ. ಹೀಗಾಗಿ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ.
ಜೈಲಿನಿಂದ ಬಿಡುಗಡೆಯಾದ ಬಳಿಕ ಮಾತನಾಡಿದ ಮಾಡಾಳ್ ವಿರೂಪಾಕ್ಷಪ್ಪ, ಭಾರತದ ನ್ಯಾಯಾಂಗದ ಬಗ್ಗೆ ನನಗೆ ವಿಶ್ವಾಸವಿದೆ. ಭ್ರಷ್ಟಾಚಾರ ಆರೋಪದಿಂದ ನಾನು ಮುಕ್ತನಾಗುತ್ತೇನೆ ಎಂಬ ನಂಬಿಕೆ ಇದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | Karnataka Election: ತರೀಕೆರೆ ಕಾಂಗ್ರೆಸ್ ಟಿಕೆಟ್ ತಪ್ಪಿದ್ದಕ್ಕೆ ಗಳಗಳನೆ ಕಣ್ಣೀರಿಟ್ಟ ಆಕಾಂಕ್ಷಿ ಗೋಪಿಕೃಷ್ಣ
ಚನ್ನಗಿರಿ ಕ್ಷೇತ್ರದ ಟಿಕೆಟ್ ಕೈತಪ್ಪಿರುವ ಬಗ್ಗೆ ಪ್ರತಿಕ್ರಿಯಿಸಿ, ಕಳೆದ 15 ದಿನಗಳಿಂದ ನಾಲ್ಕು ಗೋಡೆಗಳ ಮಧ್ಯೆ ಇದ್ದೆ, ಯಾವುದೇ ಟಿವಿ ಮಾಧ್ಯಮಗಳು ಅಲ್ಲಿಲ್ಲ. ಮನೆಗೆ ಹೋದ ಮೇಲೆ ರಾಜಕೀಯ ಬಗ್ಗೆ ಚರ್ಚೆ ಮಾಡುತ್ತೇನೆ. ಈಗ ನಾನು ಏನನ್ನೂ ಹೇಳುವ ಪರಿಸ್ಥಿತಿಯಲ್ಲಿಲ್ಲ. ಹೊರಗಡೆ ಏನು ನಡೆದಿದೆ ಎಂಬುದರ ಅರಿವಿಲ್ಲ. ಮನೆಗೆ ಹೋಗಿ ಮುಂದಿನ ರಾಜಕೀಯ ನಡೆಯ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ಕೆಎಸ್‌ಡಿಎಲ್‌ಗೆ ಕಚ್ಚಾ ವಸ್ತುಗಳನ್ನು ಪೂರೈಸುವ ಗುತ್ತಿಗೆ ನೀಡಲು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಮಾಡಾಳ್ 40 ಲಕ್ಷ ರೂಪಾಯಿ ಲಂಚ ಪಡೆಯುವ ವೇಳೆ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದರು. ನಂತರ ಪ್ರಕರಣದಲ್ಲಿ ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಪುತ್ರ ಪ್ರಶಾಂತ್ ಮಾಡಾಳ್ ಸೇರಿ 6 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಇದೀಗ ಜಾಮೀನು ಮಂಜೂರು ಆದ ಹಿನ್ನೆಲೆಯಲ್ಲಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಬಿಡುಗಡೆಯಾಗಿದ್ದಾರೆ.