Site icon Vistara News

Channapatna By Election: ಚನ್ನಪಟ್ಟಣದಲ್ಲಿ ನನ್ನ ಪತ್ನಿ ಸ್ಪರ್ಧಿಸಲ್ಲ: ಸಂಸದ ಡಾ.ಸಿ.ಎನ್. ಮಂಜುನಾಥ್‌ ಸ್ಪಷ್ಟನೆ

Channapatna By Election

ಬೆಂಗಳೂರು: ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆಗೆ (Channapatna By Election) ಅನುಸೂಯ ಸ್ಪರ್ಧೆ ಮಾಡುತ್ತಾರೆ ಎಂಬ ವದಂತಿ ಇದೆ. ಆದರೆ, ಯಾವುದೇ ಕಾರಣಕ್ಕೂ ಅನುಸೂಯ ಸ್ಪರ್ಧೆ ಮಾಡಲ್ಲ ಎಂದು ಬಿಜೆಪಿ ಸಂಸದ ಡಾ.ಸಿ.ಎನ್‌. ಮಂಜುನಾಥ್‌ ಸ್ಪಷ್ಟನೆ ನೀಡಿದ್ದಾರೆ.

ಚನ್ನಪಟ್ಟಣದಲ್ಲಿ ಪತ್ನಿ ಸ್ಪರ್ಧೆ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ನೂರಕ್ಕೆ ನೂರು ಪರ್ಸೆಂಟ್ ನನ್ನ ಪತ್ನಿ ನಿಲ್ಲಲ್ಲ. ಕೆಲವು ಪತ್ರಿಕೆ, ಮಾಧ್ಯಮದಲ್ಲಿ ಅನಸೂಯ ಸ್ಪರ್ಧಿಸುತ್ತಾರೆ ಎಂದು ಬಂದಿದೆ. ಇದು ನಮಗೆ ಬಹಳಷ್ಟು ಮುಜುಗರ ತರಿಸಿದೆ. ಅನುಸೂಯ ಯಾವುದೇ ಕಾರಣಕ್ಕೂ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ ಎಂದು ತಿಳಿಸಿದ್ದಾರೆ.

ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಡಿ.ಕೆ.ಶಿವಕುಮಾರ್ ಅವರು ಸ್ಪರ್ಧಿಸುವ ಸಾಧ್ಯತೆ ಇರುವುದರಿಂದ ಡಿ.ಕೆ. ಸಹೋದರರನ್ನು ಕಟ್ಟಿ ಹಾಕುವ ನಿಟ್ಟಿನಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷಗಳು, ಸಂಸದ ಡಾ.ಸಿ.ಎನ್.ಮಂಜುನಾಥ್ ಪತ್ನಿಯನ್ನು ಕಣಕ್ಕಿಳಿಸಲಿವೆ ಎಂದು ಚರ್ಚೆಯಾಗುತ್ತಿತ್ತು. ಮಹಿಳಾ ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಅನಸೂಯ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲು ಚಿಂತನೆ ನಡೆದಿದೆ ಎಂದು ಹೇಳಲಾಗಿತ್ತು. ಇದಕ್ಕೆ ಡಾ.ಮಂಜುನಾಥ್‌ ಅವರು ಸ್ಪಷ್ಟನೆ ನೀಡಿದ್ದಾರೆ.

ಡೆಂಗ್ಯುಗೆ ಕೋವಿಡ್‌ ಮಾದರಿ ಉಚಿತ ಚಿಕಿತ್ಸೆ ಕೊಡಿ, ಮೆಡಿಕಲ್‌ ಎಮರ್ಜೆನ್ಸಿ ಘೋಷಿಸಿ

ಡೆಂಗ್ಯು ಜ್ವರಕ್ಕೆ (Dengue Fever) ಅಡ್ಮಿಟ್ ಆದವರಿಗೆ, ಕೋವಿಡ್ (Covid 19) ಸಂದರ್ಭದಲ್ಲಿ ಯಾವ ರೀತಿ ಉಚಿತ ಚಿಕಿತ್ಸೆ ನೀಡಲಾಯಿತೋ ಅದೇ ರೀತಿ ಕನಿಷ್ಠ ಮಾನದಂಡದಲ್ಲಿ ಉಚಿತ ಚಿಕಿತ್ಸೆ ನೀಡಬೇಕು ಎಂದು ಬೆಂಗಳೂರು ಗ್ರಾಮಾಂತರ (Bangalore Rural) ಸಂಸದ ಡಾ. ಸಿಎನ್‌ ಮಂಜುನಾಥ್‌ (Dr CN Manjunath) ಹೇಳಿದ್ದಾರೆ.

ಇದು ಸರ್ಕಾರಕ್ಕೆ ನನ್ನ ಸಲಹೆ. ಡೆಂಗ್ಯೂ ಫಿವರ್‌ ನಿಯಂತ್ರಣ ಅಂದರೆ ಸೊಳ್ಳೆ ನಿಯಂತ್ರಣ. ಸೊಳ್ಳೆ ನಿಯಂತ್ರಣ ಆದರೆ ಮಾತ್ರ ಡೆಂಗ್ಯು ನಿಯಂತ್ರಣ ಆಗಲಿದೆ. ಮಳೆಗಾಲ ಪ್ರಾರಂಭದಲ್ಲಿ ಸೊಳ್ಳೆಯಿಂದ ಹರಡುವ ಕಾಯಿಲೆ ಬರುತ್ತದೆ. ಡೆಂಗ್ಯು ತಡೆಗಟ್ಟದಿದ್ರೆ ಚಿಕನ್ ಗುನ್ಯ, ಜೀಕಾ ವೈರಸ್ ಬರಬಹುದು. ಕೋವಿಡ್ ಪ್ಯಾಂಡಮಿಕ್ ಅಂದೆವು. ಡೆಂಗ್ಯು ಎಂಡಮಿಕ್ ಆಗಿದೆ. ಎಂಡೆಮಿಕ್ ಅಂದರೆ ರಾಜ್ಯಾದ್ಯಂತ ಹರಡಿರೋದು. ಇದಕ್ಕೆ ತುರ್ತು ಚಿಕಿತ್ಸೆ ಅಗತ್ಯವಿದೆ. ಮೆಡಿಕಲ್ ಎಮರ್ಜೆನ್ಸಿ ಘೋಷಣೆ ಮಾಡಬೇಕು ಎಂದು ಮಂಜುನಾಥ್‌ ಹೇಳಿದ್ದಾರೆ.

ಇದನ್ನೂ ಓದಿ | Dengue Fever: ಸಿಲಿಕಾನ್‌ ಸಿಟಿಯಲ್ಲಿ ಡೆಂಗ್ಯು ಜ್ವರಕ್ಕೆ ಬಾಲಕ ಬಲಿ, ರಾಜಧಾನಿಯಲ್ಲಿ 2ನೇ ಸಾವು

ಸರಕಾರ ಡೆಂಗ್ಯುಗೆ ದರ ನಿಗದಿ ಮಾಡಿದೆ. ಡಯೋಗ್ನಾಸಿಸ್‌ಗಳು ಹೆಚ್ಚು ವಸೂಲಿ ಮಾಡಿದರೆ,‌ ಅವುಗಳ ಬಾಗಿಲು ಮುಚ್ಚಿಸಬೇಕು. ಡೆಂಗ್ಯು ಹರಡಲು ಕಾರಣ ಮಳೆಗಾಲದಲ್ಲಿ ನೀರು ನಿಲ್ಲೋದರಿಂದ. ಹಲವೆಡೆ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಅಲ್ಲಿ ಸೊಳ್ಳೆಗಳು ಉತ್ಪತ್ತಿ ಆಗುತ್ತಿವೆ. ಈಡಿಸ್ ಈಜಿಪ್ಟೈ ಸೊಳ್ಳೆಯಿಂದ ಕಾಯಿಲೆ‌ ಹರಡುತ್ತಿದೆ. ರಾಜ್ಯದಲ್ಲಿ ಮೆಡಿಕಲ್ ಎಮರ್ಜೆನ್ಸಿ ಘೋಷಣೆ ಆಗಬೇಕು. ಪ್ರತ್ಯೇಕ ಟಾಸ್ಕ್ ಫೋರ್ಸ್ ರಚನೆ ಮಾಡಬೇಕು. ಮಳೆಗಾಲ ಆರಂಭವಾದ ಮೇಲೆ ಎಚ್ಚೆತ್ತುಕೊಂಡಿದ್ದಾರೆ. ಈಗ ಯುದ್ಧೋಪಾದಿಯಲ್ಲಿ ಕೆಲಸ ಮಾಡಬೇಕಿದೆ. ಸರ್ಕಾರ ಮತ್ತು ಸಾರ್ವಜನಿಕರು ಇಬ್ಬರದ್ದೂ ಜವಾಬ್ದಾರಿ ಇದೆ ಎಂದು ಡಾ. ಮಂಜುನಾಥ್‌ ಎಚ್ಚರಿಸಿದ್ದಾರೆ.

ಡೆಂಗ್ಯು ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರ್ತಿದೆ. ಶಾಲೆಗಳಿಗೆ ಸರ್ಕ್ಯೂಲರ್ ಹೊರಡಿಸಬೇಕು. ಮಕ್ಕಳಲ್ಲಿ ಆರೋಗ್ಯ ಹದಗೆಟ್ಟಿದ್ದರೆ ಕ್ರಮ ತೆಗೆದುಕೊಳ್ಳಬೇಕು. ಈಗಾಗಲೇ ಏಳೆಂಟು ಜನ ಸಾವನ್ನಪ್ಪಿದ್ದಾರೆ. ಸೊಳ್ಳೆ ನಿಯಂತ್ರಣ ಮಾಡೋದ್ರಲ್ಲಿ ಸರ್ಕಾರ ಎಡವಿದೆ. ಏನೇನೋ ಫ್ರೀ ಕೊಡ್ತೀವಿ, ಯಾವುದನ್ನೋ ಉಚಿತ ಕೊಡ್ತಿದ್ದಾರೆ. ಅದರ ಜೊತೆಗೆ ಸ್ಲಂಗಳಲ್ಲಿ, ವಠಾರದಲ್ಲಿ ವಾಸವಾಗಿದ್ದವರ ಮನೆಗೆ ಸೊಳ್ಳೆಪರದೆಯನ್ನು ಉಚಿತವಾಗಿ ನೀಡಬೇಕು. ಇದರಿಂದ ಬಹಳಷ್ಟು ರೋಗ ನಿಯಂತ್ರಣ ಆಗಲಿದೆ ಎಂದು ಮಂಜುನಾಥ್ ಸೂಚಿಸಿದ್ದಾರೆ. ‌

ಡೆಂಗ್ಯು ಬಂದು ಮತ್ತೆ ಹುಷಾರಾಗುವಾಗ ಪ್ಲೇಟ್ ಲೆಟ್ಸ್ ಕಡಿಮೆ ಆಗುತ್ತೆ. ಜೊತೆಗೆ ದೇಹದಲ್ಲಿ ನೀರು ತುಂಬಿಕೊಳ್ಳುತ್ತದೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವರ‌ ಗಮನಕ್ಕೂ ನಾನು ತರಲಿದ್ದೇನೆ. ಅವಶ್ಯಕತೆ ಇರುವವರಿಗೆ ಮೊದಲೇ ಚಿಕಿತ್ಸೆ ನೀಡಬೇಕು. ಡೆಂಗ್ಯೂ ಕಾಯಿಲೆಗೆ ಬೇಕಾದ ಮಾತ್ರೆಗಳ ಕೊರತೆ ಕೂಡ ಎದುರಾಗಿದೆ. ವಾರ್ ರೂಮ್ ಮೂಲಕ ಮಾನಿಟರ್ ಮಾಡಬೇಕು. ಮುಂದುವರೆದ ದೇಶಗಳಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಕಾಯಿಲೆ ತಡೆದಿದ್ದಾರೆ. ಮಸ್ಕ್ಯೂಟೋ ರೆಪೆಲೆಂಟ್ಸ್ ಅಂತ ಸ್ಟಿಕರ್ ಬರುತ್ತಿದ್ದು. ಅದನ್ನ ಇಲ್ಲೂ ಹಾಕಬೇಕು. ಇದರಿಂದ ಮಕ್ಕಳಿಗೆ ಸೊಳ್ಳೆ ಕಡಿತ ತಪ್ಪಿಸಬಹುದು ಎಂದು ಅವರು ಹೇಳಿದರು.

ಇದನ್ನೂ ಓದಿ | Zika Virus : ಡೆಂಗ್ಯೂ ಬೆನ್ನಲ್ಲೇ ಶಿವಮೊಗ್ಗದಲ್ಲಿ ಝಿಕಾ ವೈರಸ್‌ಗೆ ವೃದ್ಧ ಬಲಿ

ಜಪಾನ್, ಸಿಂಗಾಪುರ್, ಅಮೇರಿಕಾದಲ್ಲಿ ಡೆಂಗ್ಯೂ ಕಾಯಿಲೆಗೆ ಬೇಕಾದ ಮೆಡಿಸಿನ್ ಇದೆ. ಅವುಗಳನ್ನು ರಾಜ್ಯ ಸರ್ಕಾರ ತರಿಸಿಕೊಳ್ಳಬೇಕು. ಇಲ್ಲ ಅಲ್ಲಿ ನೀರು ನಿಲ್ಲೋದನ್ನ ತಡೆಗಟ್ಟಬೇಕು. ಸೊಳ್ಳೆ ನಿಯಂತ್ರಣ ಮಾಡಲು ಸ್ಪ್ರೇ ಮಾಡುವವರು ಕಾಣುತ್ತಿಲ್ಲ. ಬಿಬಿಎಂಪಿ ಎಚ್ಚೆತ್ತುಕೊಳ್ಳಬೇಕು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

Exit mobile version