ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ಈಗ ಮಳೆ ಸುರಿದು ಹಸಿರು ತುಂಬಿಕೊಂಡು ನಳನಳಿಸುತ್ತಿದೆ. ಆದರೆ ಕೆಲವು ಪ್ರವಾಸಿಗರ ಹುಚ್ಚಾಟದಿಂದಾಗಿ ಇಲ್ಲಿ ಪ್ರಯಾಣಿಸುವುದು ಆತಂಕದ ವಿಷಯವಾಗಿದೆ.
ಇಂದು ರಸ್ತೆ ಬದಿ ಅಡ್ಡಾದಿಡ್ಡಿಯಾಗಿ ವಾಹನ ನಿಲ್ಲಿಸಿ, ಎಲ್ಲೆಂದರಲ್ಲಿ ಓಡಾಡುತ್ತಿದ್ದ ಪ್ರವಾಸಿಗರ ಹುಚ್ಚಾಟದಿಂದಾಗಿ ಟ್ರಾಫಿಕ್ ಸೃಷ್ಟಿಯಾಗಿದ್ದು, ಆಂಬ್ಯುಲೆನ್ಸ್ ಸಿಲುಕಿ ರೋಗಿ ಪರದಾಡಬೇಕಾಯಿತು. ಆಂಬ್ಯುಲೆನ್ಸ್ ಸೈರನ್ ಕೇಳಿಯೂ ಕೇಳದಂತೆ ವರ್ತಿಸಿದ ಪ್ರವಾಸಿಗರಿಂದಾಗಿ ಮೂಡಿಗೆರೆಯಿಂದ ಮಂಗಳೂರಿಗೆ ತೆರಳುತ್ತಿದ್ದ ಆಂಬ್ಯುಲೆನ್ಸ್ ಸಿಲುಕಿಹಾಕಿಕೊಂಡಿತು.
ಚಾರ್ಮಾಡಿ ಘಾಟಿಯಲ್ಲಿ ಈಗ ಮಳೆ ಹಾಗೂ ಮಂಜು ತುಂಬಿ ಮನೋಹರವಾದ ಪ್ರಯಾಣದ ಸುಖವನ್ನು ಕೊಡುತ್ತಿದೆ. ಆದರೆ ಅನೇಕ ಪ್ರಯಾಣಿಕರು ಕಾರು ನಿಲ್ಲಿಸಿ ರಸ್ತೆ ಪಕ್ಕದ ಅಪಾಯಕಾರಿ ಬಂಡೆಗಳ ಹುಚ್ಚಾಟ ಮಾಡುತ್ತಿರುವುದು ಕಂಡುಬರುತ್ತಿದೆ. ರಸ್ತೆ ಬದಿ ಎಲ್ಲೆಂದರಲ್ಲಿ ವಾಹನಗಳನ್ನ ಪಾರ್ಕ್ ಮಾಡುವ ಕೆಲ ಪ್ರವಾಸಿಗರು ಕಲ್ಲು ಬಂಡೆಗಳ ಮೇಲೆ ನಿಂತು ಫೋಟೋ ತೆಗೆಸಿಕೊಳ್ಳುವ ಕ್ರೇಜಿಗೆ ಬಿದ್ದಿದ್ದಾರೆ.
ಕಲ್ಲುಗಳ ಮೇಲೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡು ಮೋಜುಮಸ್ತಿ ಮಾಡುತ್ತಿರುವ ಇವರಿಗೆ ಜಾರುವ ಬಂಡೆಗಳ ರಿಸ್ಕ್‌ನ ಅರಿವಿಲ್ಲ. ಚಿಕ್ಕ ಮಕ್ಕಳನ್ನೂ ಬಂಡೆ ಮೇಲೆ ಕೆಲ ಪೋಷಕರು ಹತ್ತಿಸುತ್ತಿದ್ದಾರೆ. ಇಲ್ಲಿ ಸ್ವಲ್ಪ ಜಾರಿದರೂ ದೊಡ್ಡ ಮಟ್ಟದ ಅಪಾಯ ಸಂಭವಿಸುವುದು ಖಚಿತ. ಈಗಾಗಲೇ ಬಿದ್ದು ಕೈ-ಕಾಲು ಮುರಿದುಕೊಂಡವರು, ಪ್ರಾಣ ಕಳೆದುಕೊಂಡವರು ಇದ್ದಾರೆ.
ಚಾರ್ಮಾಡಿ ಘಾಟಿ ಮನೋಹರ, ಆದರೆ ಅಷ್ಟೇ ಹಾಗೂ ಅಪಾಯದ ಸ್ಥಳ. ಇಲ್ಲಿನ ತಿರುವುಗಳು ಸಂಜೆ ಹಾಗೂ ಮುಂಜಾನೆಯ ಹೊತ್ತಿನಲ್ಲಿ ಮಂಜು ತುಂಬಿಕೊಂಡು ವಾಹನ ಚಾಲನೆ ಮಾಡುವವರಿಗೆ ಸಂಕಷ್ಟ ತಂದೊಡ್ಡುತ್ತವೆ. ಇಂಥ ಕಿರಿದಾದ ದಾರಿಯಲ್ಲಿ ಎಲ್ಲೂ ವಾಹನ ಪಾರ್ಕ್ ಮಾಡಲು ಅನುಮತಿಯಿಲ್ಲ. ಆದರೆ ಇದನ್ನು ಲೆಕ್ಕಿಸದ ಪ್ರವಾಸಿಗರು ಅಡ್ಡಾದಿಡ್ಡಿ ವಾಹನ ಪಾರ್ಕ್ ಮಾಡಿ ಇತರರಿಗೆ ತೊಂದರೆ ಕೊಡುತ್ತಾರೆ. ಇಲ್ಲಿ ಅಪಘಾತ ಸಂಭವಿಸಿದರೆ ತುರ್ತು ಪ್ರಾಣರಕ್ಷಣೆ ಕಷ್ಟವೇ. ಯಾಕೆಂದರೆ ಆಸ್ಪತ್ರೆಗಳು ದೂರದಲ್ಲಿವೆ.
ಚಾರ್ಮಾಡಿ ಘಾಟಿಯಲ್ಲಿ ಇತ್ತೀಚೆಗೆ ಕೆಲವು ಶವಗಳು ಪತ್ತೆಯಾಗಿದ್ದವು. ಬೆಂಗಳೂರಿನಲ್ಲಿ ಕೊಲೆ ಮಾಡಿದವರು ಶವವನ್ನು ಇಲ್ಲಿಗೆ ತಂದು ಕಣಿವೆಗೆ ಎಸೆದು ಹೋಗುವುದು ಸಾಮಾನ್ಯವಾಗಿದೆ. ಇನ್ನು ಇತ್ತೀಚೆಗೆ ಕಾಡಾನೆಯೊಂದು ರಸ್ತೆಯಲ್ಲಿ ನಿಂತು ಹಲವು ವಾಹನಗಳನ್ನು ಅಟ್ಟಾಡಿಸಿತ್ತು. ಇವ್ಯಾವುದರ ಅರಿವೂ ಇಲ್ಲದ ಪ್ರವಾಸಿಗರು ವಾಹನ ಇಲ್ಲಿ ನಿಲ್ಲಿಸಿ ರಿಸ್ಕ್ ಮೈಮೇಲೆಳೆದುಕೊಳ್ಳುವುದು ಸೂಕ್ತವಲ್ಲ. ಪೊಲೀಸರು ಇಲ್ಲಿ ಬೀಟ್ ಹಾಕುವಂತೆ ಸ್ಥಳಿಯರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: Belthangady News: ಚಾರಣಕ್ಕೆಂದು ಹೋಗಿ ಚಾರ್ಮಾಡಿ ಅರಣ್ಯದಲ್ಲಿ ನಾಪತ್ತೆಯಾಗಿದ್ದ ಟೆಕ್ಕಿಯ ರಕ್ಷಣೆ