Site icon Vistara News

ಜೂ.17ರಂದು ಪ್ರೊ.ಕೆ.ಇ. ರಾಧಾಕೃಷ್ಣಗೆ ಚಾವುಂಡರಾಯ ದತ್ತಿ ಪ್ರಶಸ್ತಿ ಪ್ರದಾನ

Senior Writer K E Radhakrishna

#image_title

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಜೂನ್‌ 17 ರಂದು ಬೆಳಗ್ಗೆ 11 ಗಂಟೆಗೆ ನಗರದ ಚಾಮರಾಜಪೇಟೆ ಪಂಪ ಮಹಾಕವಿ ರಸ್ತೆಯ ಶ್ರೀ ಕೃಷ್ಣರಾಜ ಪರಿಷತ್‌ ಮಂದಿರದಲ್ಲಿ 2022ನೇ ಸಾಲಿನ ಚಾವುಂಡರಾಯ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಹಿರಿಯ ಬರಹಗಾರ ಪ್ರೊ.ಕೆ. ಇ. ರಾಧಾಕೃಷ್ಣ ಅವರು ದತ್ತಿ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಅವರಿಗೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಅವರು ಸಮಾರಂಭ ಉದ್ಘಾಟಿಸಲಿದ್ದು, ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹೈಕೋರ್ಟ್‌ ನ್ಯಾಯಮೂರ್ತಿ ಎಂ.ಐ.ಅರುಣ್, ಎಸ್. ಜಿತೇಂದ್ರ ಕುಮಾರ್ ಭಾಗವಹಿಸಲಿದ್ದಾರೆ.

ಚಾವುಂಡರಾಯ ಪ್ರಶಸ್ತಿ

ಶ್ರವಣಬೆಳಗೊಳ ಶ್ರೀಮಠದ ಪರಮಪೂಜ್ಯ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮಿಗಳು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಗಂಗರಸರ ಮಹಾಮಂತ್ರಿಯಾದ ಚಾವುಂಡರಾಯನ ಹೆಸರಿನಲ್ಲಿ 7 ಲಕ್ಷ ರೂ.ಗಳ ದತ್ತಿಯನ್ನು ಸ್ಥಾಪಿಸಿದ್ದಾರೆ. ಬಾಹುಬಲಿಯ ಏಕಶಿಲಾ ಮೂರ್ತಿಯನ್ನು ನಿರ್ಮಿಸಿರುವ ಚಾವುಂಡರಾಯನ ಹೆಸರಿನಲ್ಲಿ ಸ್ಥಾಪಿಸಲಾಗಿರುವ ಈ ದತ್ತಿ ಪ್ರಶಸ್ತಿಯು ರೂ. 30 ಸಾವಿರ ನಗದು, ಪ್ರಶಸ್ತಿ ಪತ್ರ ಮತ್ತು ಫಲಕಗಳನ್ನು ಒಳಗೊಂಡಿದೆ.

ಇದನ್ನೂ ಓದಿ | ಜೂ.24ರಂದು ಕನ್ನಡ ಬರಹಗಾರರ, ಪ್ರಕಾಶಕರ ಸಂಘದ ವಾರ್ಷಿಕೋತ್ಸವ, ಪ್ರಶಸ್ತಿ ಪ್ರದಾನ

ಪ್ರಾಚೀನ ಜೈನ ಸಾಹಿತ್ಯವನ್ನು ಆಧರಿಸಿ ಆಧುನಿಕ ಕನ್ನಡದಲ್ಲಿ ಕೃತಿ ರಚನೆ ಮಾಡಿರುವ ಲೇಖಕರನ್ನು, ಪ್ರಾಚೀನ ಜೈನ ಗ್ರಂಥಗಳನ್ನು ಸಂಪಾದನೆ ಮಾಡಿರುವ ಸಂಪಾದಕರು, ಅನುವಾದಕರು, ಅಹಿಂಸೆ, ಸದಾಚಾರ, ನೈತಿಕ ಉತ್ಥಾನಗಳನ್ನು ಪ್ರೇರೇಪಿಸುವ ಸೃಜನಾತ್ಮಕ ಕೃತಿಗಳನ್ನು ರಚಿಸಿರುವ ಸಾಹಿತಿಗಳನ್ನು ಹಾಗೂ ಜೈನ ಸಾಹಿತ್ಯ ಪರಿಚಾರಿಕೆ, ಪ್ರಚಾರ ಹಾಗೂ ಪೋಷಣೆ ಮಾಡಿದ ಗಣ್ಯರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ.

ಪ್ರೊ. ಕೆ.ಇ. ರಾಧಾಕೃಷ್ಣ, ಡಿ.ಲಿಟ್‌

ಬಹುಶ್ರುತ ವಿದ್ವಾಂಸರಾದ ಪ್ರೊ. ಕೆ.ಇ. ರಾಧಾಕೃಷ್ಣ ಅವರು, ಸಾಹಿತ್ಯ ಸಂಸ್ಕೃತಿ, ಮತ್ತು ಕಲಾ ಪ್ರಾಕಾರಗಳಲ್ಲಿ ತೊಡಗಿಸಿ ಕೊಂಡವರು. ಇಂಗ್ಲಿಷ್, ತುಳು, ಕನ್ನಡ ಭಾಷೆಗಳಲ್ಲಿ 45 ಕೃತಿಗಳನ್ನು ರಚಿಸಿದ ಇವರು ಒಳ್ಳೆಯ ಅನುವಾದಕರು. “ಪ್ರೇತಂಭಟ್ಟರ ನಿಂತಿಲ್ಲರು” ಇವರ ಹೆಸರಾಂತ ಕಾದಂಬರಿ, ‘ಸತ್ಯಮ್ಮನ ಮಕ್ಕಳು’ ‘ಒಂದು ಮತ್ತು ನೂರು ಕತೆಗಳು’ ಕಥಾ ಸಂಕಲನ. ʼಕಣ್ಣ ಕಾಡು’ ವಿಶಿಷ್ಟವಾದ ಕಾವ್ಯ ಪ್ರಬಂಧ. ಸಂಸ್ಕೃತದಿಂದ ಕನ್ನಡಕ್ಕೆ ರೂಪಾಂತರಿಸಿದ ‘ಗೋಪಿಕೋನ್ಮಾದ’ ಧ್ವನಿಸುರುಳಿಯಾಗಿ, ನೃತ್ಯರೂಪಕವಾಗಿ ಜನಪ್ರಿಯವಾದುದು. ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದಿಸಿದ ‘ಇಂದಿರಾಗಾಂಧಿ ಪ್ರಕೃತಿ ಸಾಂಗತ್ಯ’ [ಮೂಲ ಜೈರಾಮ್ ರಮೇಶ್] ‘ಭಾರತೆ ಮಾತೆ ಯಾರು?[ಜವಹರಲಾಲ್ ನೆಹರು ಅವರ ಕುರಿತಾದ ಪುರುಷೋತ್ತಮ ಅಗರವಾಲರ ಕೃತಿ] ‘ಬಿಂಬ ಭಾರತ’ [ನಂದನ ನೀಲಕಣಿ] ಗ್ರಂಥಗಳು ವಿಮರ್ಷಕರ ಮನ್ನಣೆ ಪಡೆದವು.

‘ಭಾಗೀರಥಿ ಸಮುದ್ರ’ ಕವನ ಸಂಕಲನ. ‘ನವಿಲು ಪುರಾಣ’ ಉರ್ದು ಕತೆಗಳ ಅನುವಾದ. ನಾಟಕ, ಯಕ್ಷಗಾನ, ಕಿರುಚಿತ್ರ ನಿರ್ಮಾಣಗಳಲ್ಲೂ ಇವರು ಪರಿಣತರು. ಇಂಗ್ಲಿಷ್ ಪ್ರಾಧ್ಯಾಪಕರಾದ ಪ್ರೊ. ಕೆ.ಇ. ರಾಧಾಕೃಷ್ಣ ನಾಡಿನ ಮತ್ತು ದೇಶದ ಶಿಕ್ಷಣ ತಜ್ಞರಲ್ಲಿ ಹೆಸರಾಂತರಾದವರು. ವಿಶ್ವವಿದ್ಯಾಲಯಗಳ ಸಿಂಡಿಕೇಟ್ ನ್ಯಾಕ್ ಸಂಸ್ಥೆ ಮತ್ತು ದೇಶ/ರಾಜ್ಯದ ಅನೇಕ ಉನ್ನತ ಶಿಕ್ಷಣ ಸಮಿತಿಗಳ ಸದಸ್ಯರಾಗಿದ್ದವರು. ಅಧ್ಯಾಪಕರ ಸಂಘಟನೆಗಳಲ್ಲಿ ಮುಂಚೂಣಿಯಲ್ಲಿದ್ದವರು. ರಾಜಕೀಯದಲ್ಲೂ ಸಕ್ರೀಯರು. ಇವರಿಗೆ ಮೈಸೂರು ಮುಕ್ತ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಪ್ರತಿಷ್ಠಿತ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಡಿ.ವಿ.ಜಿ. ಪುರಸ್ಕಾರ, ಗೋರಖನಾಥ ಪ್ರಶಸ್ತಿ, ಕರಾವಳಿ ರತ್ನ ಹೀಗೆ ಅನೇಕ ಪ್ರಶಸ್ತಿಗಳು ಬಂದಿವೆ. “ವಾಲ್ಮೀಕಿ ರಾಮಾಯಣದಲ್ಲಿ ಪ್ರಭುತ್ವ ಕಥನ ಲೋಕಗಳು” ಎನ್ನುವ ಬೃಹತ್ ಸಂಶೋಧನಾತ್ಮಕ ಗ್ರಂಥಕ್ಕೆ ತುಮಕೂರು ವಿಶ್ವವಿದ್ಯಾಲಯ ಡಿ.ಲಿಟ್ ಪದವಿ ನೀಡಿದೆ.

ಇದನ್ನೂ ಓದಿ | Rashtrotthana Parishat: ಜೂ.17ರಂದು ʼಹೊಟ್ಟೆಯಲ್ಲೊಂದು ಮೆದುಳುʼ ವಿಶೇಷ ಉಪನ್ಯಾಸ

20,000 ಸಂಸ್ಕೃತ ಶ್ಲೋಕಗಳುಳ್ಳ, ಪೂಜ್ಯ ಶ್ರೀ ಶಾಂತಿರಾಜಶಾಸ್ತ್ರಿಗಳಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ, ಭಗವಾನ್ ಜಿನಸೇನಾಚಾರ್ಯ ಮತ್ತು ಗುಣಭದ್ರಾಚಾರ್ಯರು ವಿರಚಿತ ‘ಮಹಾಪುರಾಣ’ ವನ್ನು ಇವರು ಇಂಗ್ಲಿಷ್‌ಗೆ ಅನುವಾದಿಸಿದ ಪ್ರಧಾನ ಸಂಪಾದಕರು. 6000 ಪುಟಗಳುಳ್ಳ 6 ಸಂಪುಟಗಳ ಬೃಹತ್ ಕಾರ್ಯ ಕನ್ನಡ ಸಾರಸ್ವತಲೋಕದ ಸೃಜನಶೀಲ ಸಾಹಿತ್ಯದ ಸಾಹಸ ಗಾಥೆಗಳಲ್ಲಿ ಒಂದು. ಇದಕ್ಕಾಗಿ ಇವರಿಗೆ 2022ನೇ ಸಾಲಿನ ಪ್ರತಿಷ್ಠಿತ ‘ಚಾವುಂಡರಾಯ’ ಪ್ರಶಸ್ತಿ ನೀಡಲಾಗುತ್ತಿದೆ.

ಶೇಷಾದ್ರಿಪುರಂ ಮತ್ತು ಸುರಾನಾ ಪದವಿ ಕಾಲೇಜುಗಳಲ್ಲಿ ಯಶಸ್ವೀ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದ ಪ್ರೊ. ಕೆ.ಇ. ರಾಧಾಕೃಷ್ಣ ಅವರು ದೀರ್ಘಕಾಲ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದವರಲ್ಲಿ ಪ್ರಮುಖರಾಗಿದ್ದಾರೆ.

Exit mobile version