ಬೆಳಗಾವಿ: ಬೆಳಗಾವಿ ನಗರ ಭಾಗಕ್ಕೇ ಚಿರತೆಯೊಂದು ಲಗ್ಗೆ ಇಟ್ಟು ಭಾರಿ ಆತಂಕ ಸೃಷ್ಟಿಸಿದೆ. ಇಲ್ಲಿನ ಜಾಧವ್ ನಗರದಲ್ಲಿ ಶುಕ್ರವಾರ ಮಧ್ಯಾಹ್ನ ಕಟ್ಟಡ ಕಾರ್ಮಿಕ, ಖನಗಾವಿ ನಿವಾಸಿ ಸಿದರಾಯಿ ಲಕ್ಷ್ಮಣ್ ಮಿರಾಜ್‌ಕರ್ (೩೮) ಅವರ ಮೇಲೆ ಚಿರತೆ ದಾಳಿ ನಡೆಸಿದ್ದು, ಆವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಈ ಚಿರತೆ ಇದೀಗ ಇದೇ ಪ್ರದೇಶದಲ್ಲಿ ಅಡಗಿಕೊಂಡಿದ್ದು, ಎಲ್ಲಿದೆ ಎನ್ನುವುದನ್ನು ಪತ್ತೆ ಹಚ್ಚಲಾಗದೆ ಈ ಪ್ರದೇಶದ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ.
ಮಧ್ಯಾಹ್ನ 12.25ರ ಸುಮಾರಿಗೆ ಕಟ್ಟಡವೊಂದರ ಕಾಂಪೌಂಡ್‌ನಿಂದ ಹಾರಿ ಬಂದ ಚಿರತೆ ಕಟ್ಟಡ ನಿರ್ಮಾಣ ಕಾಮಗಾರಿ ಮಾಡುತ್ತಿದ್ದ ಖನಗಾವಿ ಕೆ.ಹೆಚ್. ಗ್ರಾಮದ ನಿವಾಸಿ 38 ವರ್ಷದ ಸಿದರಾಯಿ ಲಕ್ಷ್ಮಣ ಮಿರಜಕರ್ ಮೇಲೆ ದಾಳಿ ಮಾಡಿದೆ. ಸಿದರಾಯಿ ಭುಜಕ್ಕೆ ಪರಚಿ ಮತ್ತೋರ್ವ ಕಾರ್ಮಿಕನ ಬೆನ್ನಟ್ಟಿದೆ. ಆತ ತಪ್ಪಿಸಿಕೊಂಡು ಹೋಗುವಷ್ಟರಲ್ಲಿ ಪಕ್ಕದಲ್ಲೇ ಇದ್ದ ಪೊದೆಯಲ್ಲಿ ಅವಿತುಕೊಂಡಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಜಾಧವ ನಗರ ನಿವಾಸಿ ಯಶೋಧನ್ ಜಾಧವ್ ಎಂಬುವರ ಮನೆಯ ಸಿಸಿ ಕ್ಯಾಮರಾದಲ್ಲಿ ಚಿರತೆಯ ಚಲನವಲನಗಳು ಪತ್ತೆಯಾಗಿದ್ದು ಸ್ಥಳೀಯ ನಿವಾಸಿಗಳು ಬೆಚ್ಚಿ ಬಿದ್ದಿದ್ದಾರೆ. ಇನ್ನು ಚಿರತೆ ದಾಳಿಯಿಂದ ಗಾಯಗೊಂಡಿದ್ದ ಕಾರ್ಮಿಕ ಸಿದರಾಯಿ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವಾಪಸ್ ಆಗಿದ್ದಾರೆ.
ಜನನಿಬಿಡ ಪ್ರದೇಶದಲ್ಲೇ ಚಿರತೆ ಓಡಾಡಿರುವ ಬಗ್ಗೆ ಸಿಸಿ ಟಿವಿ ದೃಶ್ಯಗಳು ಲಭ್ಯವಾಗಿವೆ. ಇದು ಪ್ರದೇಶದಲ್ಲಿ ಜನರು ಮನೆಯಿಂದ ಹೊರ ಬರಲಾಗದ ಸ್ಥಿತಿಯನ್ನು ನಿರ್ಮಿಸಿದೆ. ಸ್ಥಳಕ್ಕೆ ಎಪಿಎಂಸಿ ಠಾಣೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿದ್ದಾರೆ. ಅರಣ್ಯ ಇಲಾಖೆ, ಎಸ್‌ಡಿಆರ್‌ಎಫ್ ನಿಂದ ಚಿರತೆಗೆ ಶೋಧ ನಡೆಯುತ್ತಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು, ಎಪಿಎಂಸಿ ಠಾಣೆ ಪೊಲೀಸರು, ಅಗ್ನಿಶಾಮಕ ಹಾಗೂ ಎಸ್‌ಡಿಆರ್‌ಎಫ್ ಸಿಬ್ಬಂದಿ ಆಗಮಿಸಿ ಚಿರತೆಗಾಗಿ ಶೋಧ ಕಾರ್ಯ ನಡೆಸಿದ್ದಾರೆ. ಎಪಿಎಂಸಿ ಠಾಣೆ ಪೊಲೀಸರು ಚಿರತೆ ಸಿಗುವವರೆಗೂ ಎಚ್ಚರಿಕೆಯಿಂದ ಇರುವಂತೆ ಧ್ವನಿವರ್ಧಕ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. ಚಿರತೆ ಪ್ರತ್ಯಕ್ಷವಾದ ಸ್ಥಳದ ಸುತ್ತಮುತ್ತ ಬ್ಯಾರಿಕೇಡ್ ಹಾಕಿ ಪೊಲೀಸರು ಭದ್ರತೆ ಒದಗಿಸಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ರವೀಂದ್ರ ಗಡಾದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿ ಚಿರತೆ ಪ್ರತ್ಯಕ್ಷ ಆಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಆರ್‌ಎಫ್ಐ ರಾಕೇಶ ಅರ್ಜುನವಾಡ, ‘ಕಾರ್ಮಿಕನ ಮೇಲೆ ದಾಳಿ ಮಾಡಿದ್ದು ನೋಡಿದ್ರೆ ಅದು ಚಿರತೆ ರೀತಿ ಅನಿಸಲ್ಲ. ಆದರೆ ಸಿಸಿ ಕ್ಯಾಮೆರಾದಲ್ಲಿ ನೋಡಿದರೆ ಸೈಜ್ ದೊಡ್ಡದಿದೆ. ಚಿರತೆ ಹಾಗೂ ಚಿರತೆ ಬೆಕ್ಕು ಗಾತ್ರದಲ್ಲಿ ಮಾತ್ರ ವ್ಯತ್ಯಾಸ ಇರುತ್ತೆ. ಉಳಿದಿದ್ದೆಲ್ಲ ಸೇಮ್ ಇರುತ್ತೆ. ಆದ್ರೆ ಕಾರ್ಮಿಕನ ಮೇಲೆ ದಾಳಿ ಮಾಡಿದ್ದು ಚಿರತೆ ಅನ್ನೋದು ಕನ್ಫರ್ಮ್ ಆಗಿಲ್ಲ. ಸಿಸಿ ಕ್ಯಾಮರಾದಲ್ಲಿ ದೃಶ್ಯ ಸ್ಪಷ್ಟವಾಗಿಲ್ಲ. ಜನಸಂದಣಿ ನಿಯಂತ್ರಿಸಲು ಪೊಲೀಸರಿಗೆ ಮನವಿ ಮಾಡಿದ್ದೇವೆ. ಜನರು ಹೊರಗೆ ಬರದಂತೆ ನಾವು ಮನವಿ ಮಾಡ್ತಿದ್ದೇವೆ. ಚಿರತೆ ಸೆರೆಗೆ ಗದಗದಿಂದ ತಜ್ಞ ಸಿಬ್ಬಂದಿಯನ್ನು ಕರೆಸುತ್ತಿದ್ದೇವೆ. ಚಿರತೆ ಹೆಜ್ಜೆ ಗುರುತು ಕಂಡು ಬಂದಿಲ್ಲ’ ಎಂದು ತಿಳಿಸಿದ್ದಾರೆ.
ಈ ನಡುವೆ ಚಿರತೆಯನ್ನು ಹುಡುಕುವ ನಿಟ್ಟಿನಲ್ಲಿ ಈ ಭಾಗದಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಜಾಧವ್ ನಗರ ಸಂಪರ್ಕಿಸುವ ಎಲ್ಲ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿ ರಸ್ತೆಗಳನ್ನು ಬಂದ್ ಮಾಡಿದ್ದಾರೆ.