ಬೆಂಗಳೂರು: ನನ್ನ ಗಂಡ ಕಸ್ಟಮ್ಸ್‌ನಲ್ಲಿ ಕೆಲಸ ಮಾಡೋದು. ಕಸ್ಟಮ್ಸ್‌ನಲ್ಲಿ ವಶಪಡಿಸಿಕೊಳ್ಳೋ ಚಿನ್ನದಲ್ಲಿ ಒಂದು ಭಾಗ ಇವರಿಗೆ ಸಿಗುತ್ತದೆ. ಅದನ್ನು ನಿಮಗೆ ಕಡಿಮೆ ರೇಟಿಗೆ ಕೊಡಿಸ್ತೇನೆ ಎಂದು ಹೇಳಿ ಮಹಿಳೆಯೊಬ್ಬರು ಇನ್ನೊಬ್ಬರು ಮಹಿಳೆಯನ್ನು (cheating couple) ವಂಚಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಧನುಷ್ಯ ಅಲಿಯಾಸ್ ರಾಟೆಲ್ ಹಾಗೂ ಆಕೆಯ ಪತಿ ದಾರ್ಬಿನ್ ದಾಸ್ ಅಲಿಯಾಸ್ ಮೋಹನ್ ದಾಸ್ ದಂಪತಿ ಸೇರಿ ಈ ವಂಚನೆ ಮಾಡಿದವರು. ಅವರು ಚಿನ್ನ ಮಾತ್ರ ಅಲ್ಲ, ಸೀಜ್ ಮಾಡಿದ ಲ್ಯಾಪ್‌ಟಾಪ್, ಐಫೋನ್‌ಗಳನ್ನು ಕಡಿಮೆ ಬೆಲೆಗೆ ಕೊಡಿಸುತ್ತೇವೆ ಎಂದು ಹೇಳಿ ಹಲವರಿಗೆ ನಾಮ ಹಾಕಿದ್ದು ಈಗ ಬೆಳಕಿಗೆ ಬಂದಿದೆ. ದಂಪತಿಯನ್ನು ಕೊಡಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ದಂಪತಿ ಇಂದಿರಾ ನಗರದಲ್ಲಿ ವಾಸವಾಗಿದ್ದರು. ಐಷಾರಾಮಿ ಜೀವನ. ಧನುಷ್ಯನಿಗೆ ಪಕ್ಕದ ಮನೆಯ ಸ್ನೇಹ ಭಾಗವತ್ ಅವರ ಪರಿಚಯ ಆಗಿತ್ತು. ಸ್ನೇಹ ಅವರು ಇಂದಿರಾ ನಗರದ ನೈಲ್ಸ್ ಬಾಕ್ಸ್ ಅಕಾಡೆಮಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅದೊಂದು ಧನುಷ್ಯ ಸ್ನೇಹ ಭಾಗವತ್ ಅವರ ಜತೆ ಮಾತನಾಡುತ್ತಾ, ನನ್ನ ಗಂಡ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲಿ ಸೀಜ್ ಮಾಡಿರೋ ಬಂಗಾರ ಸಿಗ್ತದೆ. ಬೇಕಿದ್ದರೆ ನಿಮಗೆ ಕೊಡಿಸುತ್ತೇನೆ ಎಂದು ಹೇಳಿದ್ದಳು. ಸ್ನೇಹ ಅವರು ಕಡಿಮೆ ಬೆಲೆಗೆ ಸಿಕ್ಕಿದರೆ ಸಿಕ್ಕಲಿ ಎಂದು ಹಣ ಕೊಟ್ಟರು. ಪ್ರತಿ ಬಾರಿಯೂ ಬೇರೆ ಬೇರೆ ರೀತಿಯಲ್ಲಿ ಹಣ ಕೇಳುತ್ತಾ ಅಂತಿಮವಾಗಿ ಅದು ೬೮ ಲಕ್ಷ ರೂ. ತಲುಪಿತ್ತು! ಆಗ ಸ್ನೇಹ ಭಾಗವತ್ ಅವರಿಗೆ ತಾನು ವಂಚನೆಯ ಸುಳಿಗೆ ಸಿಕ್ಕಿದ್ದಾಗಿ ಗೊತ್ತಾಗಿದೆ. ಅವರು ಬಳಿಕ ಕೊಡಿಗೆಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈಗ ಈ ದಂಪತಿ ಪೊಲೀಸರ ಅತಿಥಿಗಳಾಗಿದ್ದಾರೆ.
ಇದಕ್ಕಿಂತ ಮೊದಲು ಈ ದಂಪತಿ ದೇವನಹಳ್ಳಿಯ ಯೂರೋ ಕಿಡ್ಸ್ ಶಿಕ್ಷಕಿ ಶ್ವೇತಾ ಎಂಬುವರಿಗೆ ವಂಚನೆ ಮಾಡಿದ್ದರು. ಡಾರ್ಬಿನ್ ದಾಸ್ ನಾನು ಕಸ್ಟಮ್ಸ್ ಅಧಿಕಾರಿ ಎಂದೇಳಿ 96 ಸಾವಿರ ಹಣ ಪಡೆದಿದ್ದ. ಜತೆಗೆ ತಾವು ವಾಸವಾಗಿದ್ದ ಅಪಾರ್ಟ್‌ಮೆಂಟ್‌ನಲ್ಲೂ ಹಲವರಿಗೆ ಕಡಿಮೆ ಬೆಲೆಗೆ ಲ್ಯಾಪ್ ಟಾಪ್, ಐಫೋನ್ ಕೊಡಿಸುವುದಾಗಿ ಹೇಳಿ ವಂಚಿಸಿದ್ದ.
ಇತ್ತ ಸ್ನೇಹ ಭಾಗವತ್ ಅವರು ಕೇಸು ದಾಖಲಿಸುತ್ತಿದ್ದಂತೆಯೇ ವಂಚಕ ದಂಪತಿ ನಾಪತ್ತೆಯಾಗಿದ್ದರು. ತನಿಖೆ ಕೈಗೊಂಡ ಕೊಡಿಗೆಹಳ್ಳಿ ಪೊಲೀಸರು ಆರೋಪಿಗಳನ್ನು ಮಂಗಳೂರಿನಲ್ಲಿ ಬಂಧಿಸಿದ್ದಾರೆ. ಬಂಧಿತರಿಂದ 34 ಲಕ್ಷ ರೂಪಾಯಿ ನಗದು, 106 ಗ್ರಾಂ ತೂಕದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ | Fraud Case | ಗಂಡಸರು ಇಲ್ಲದಿದ್ದಾಗ ಬರುವ ಬುಡುಬುಡಿಕೆ ವೇಷಧಾರಿಗಳು; ಮಹಿಳೆಯರಿಂದ ಹಣ ಕೀಳುತ್ತಿದ್ದವರಿಗೆ ಬಿತ್ತು ಗೂಸಾ