Site icon Vistara News

Dinesh Gundu Rao: ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಕಿಮೋಥೆರಪಿ ಕೇರ್ ಸೆಂಟರ್: ಸಚಿವ ದಿನೇಶ್ ಗುಂಡೂರಾವ್

Dinesh Gundurao

ಬೆಂಗಳೂರು: ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಕಿಮೋಥೆರಪಿ ಡೇ ಕೇರ್ ಸೆಂಟರ್‌ಗಳನ್ನು ಮುಂಬರುವ ಒಂದು ತಿಂಗಳ ಒಳಗಾಗಿ ಪ್ರಾರಂಭಿಸುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu rao) ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಂಗಳವಾರ ಕೆ.ಸಿ ಜನರಲ್ ಆಸ್ಪತ್ರೆಯ ಆವರಣದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ನಿರ್ಮಾಣದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕೆ.ಸಿ.ಜನರಲ್ ಆಸ್ಪತ್ರೆಯ ಆವರಣದಲ್ಲಿ ಸುಮಾರು 150 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೂಮಿ‌ಪೂಜೆ ನೆರವೇರಿಸಿದರು.‌

ಇದನ್ನೂ ಓದಿ: Kannada New Movie: ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅಭಿನಯದ ‘ಭೈರತಿ ರಣಗಲ್‍’ ಚಿತ್ರ ನ.15ಕ್ಕೆ ರಿಲೀಸ್‌

ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಕೆ.ಸಿ ಜನರಲ್ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಎಂ.ಸಿ.ಎಚ್ ಆಸ್ಪತ್ರೆ, ಭೋದಕ ಕೊಠಡಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 150 ಕೋಟಿಯ ಅನುದಾನವನ್ನು ಕೇಳಿದ್ದೆವು. ಸಿಎಂ ಸಿದ್ದರಾಮಯ್ಯ ಅವರು ನಮ್ಮ ಮನವಿಗೆ ಸ್ಪಂದಿಸಿ, ಅತಿ ಕಡಿಮೆ ಅವಧಿಯಲ್ಲೇ ಅನುದಾನ ಮಂಜೂರು ಮಾಡಿಕೊಟ್ಟಿದ್ದಾರೆ. ಭೂಮಿ ಪೂಜೆ ಕೂಡಾ ನೆರವೇರಿಸಲಾಗಿದೆ. ಇದರ ಸಂಪೂರ್ಣ ಸದುಪಯೋಗ ನಮ್ಮ ಜನಸಾಮಾನ್ಯರಿಗೆ ದೊರೆಯಲಿದೆ ಎಂದರು.‌

ರಾಜ್ಯದಲ್ಲಿ ನಮ್ಮ ಸರ್ಕಾರ ಬಂದ ಬಳಿಕ ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆ ತರಲಾಗಿದೆ. ಡಯಾಲಿಸಿಸ್ ವ್ಯವಸ್ಥೆಯಲ್ಲಿ ಸುಧಾರಣೆ ತರಲಾಗಿದ್ದು, 750 ಕ್ಕೂ ಹೆಚ್ಚು ಏಕಬಳಕೆಯ ಡಯಾಲಿಸಿಸ್ ಹೊಸ ಯಂತ್ರಗಳನ್ನು ಅಳವಡಿಸಿದ್ದೇವೆ. ಸರ್ಕಾರಿ ಆಸ್ಪತ್ರೆಗಳಿಗೆ ಈ ಹಿಂದೆ ಶೇ. 30 ರಷ್ಟು ಮಾತ್ರ ಔಷಧಿ ನಿಗಮದಿಂದ ಔಷಧಿಗಳು ಸರಬರಾಜು ಆಗುತ್ತಿದ್ದವು. ಇದೀಗ ಶೇ. 70 ರಷ್ಟು ಔಷಧಿಗಳನ್ನು ನಿಗಮದಿಂದ ಖರೀದಿಸಿ, ಸರ್ಕಾರಿ ಆಸ್ಪತ್ರೆಗಳಿಗೆ ಪೂರೈಸಲಾಗುತ್ತಿದೆ. ಮುಂಬರುವ ಕೆಲವೇ ದಿನಗಳಲ್ಲಿ ಶೇ. 90 ರಷ್ಟು ಔಷಧಿಗಳು ದೊರಕಿಸುವತ್ತ ಆರೋಗ್ಯ ಇಲಾಖೆ ಹೆಜ್ಜೆಯಿಟ್ಟಿದೆ ಎಂದರು.

ಕ್ಯಾನ್ಸರ್ ರೋಗಿಗಳು ಕಿಮೋಥೆರಪಿಗಾಗಿ ಇಂದು ದೂರದ ನಗರಪ್ರದೇಶದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ಬರುವ ಪರಿಸ್ಥಿತಿಯಿದೆ. ಜನರಿಗೆ ಅವರ ಜಿಲ್ಲೆಗಳಲ್ಲಿಯೇ ಕಿಮೋಥೆರಪಿ ಸೇವೆ ಒದಗಿಸುವ ನಿಟ್ಟಿನಲ್ಲಿ ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಕಿಮೋಥೆರಪಿ ಡೇ ಕೇರ್ ಸೆಂಟರ್‌ಗಳನ್ನು ತೆರೆಯಲಾಗುವುದು. ಮುಂಬರುವ ಒಂದು ತಿಂಗಳ ಒಳಗಾಗಿ ಈ ಸೇವೆ ಲಭ್ಯವಾಗಲಿದೆ ಎಂದು ಇದೇ ವೇಳೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಅಪಘಾತ ಸಂಭವಿಸುವ ಹಾಟ್‌ಸ್ಪಾಟ್‌ಗಳಲ್ಲಿ ಪ್ರತ್ಯೇಕ ಅಂಬ್ಯುಲೆನ್ಸ್

ಅಪಘಾತಕ್ಕೆ ಒಳಗಾಗುವವರಿಗೆ ತುರ್ತು ಆರೋಗ್ಯ ಸೇವೆಗಾಗಿ ಪ್ರತ್ಯೇಕ ಅಂಬ್ಯುಲೆನ್ಸ್ ಸೇವೆ ಶೀಘ್ರದಲ್ಲಿಯೇ ಪ್ರಾರಂಭಿಸುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.‌ 65 ನೂತನ ಪ್ರತ್ಯೇಕ ಅಂಬ್ಯುಲೆನ್ಸ್ ಸೇವೆಯನ್ನು ಅಪಘಾತಕ್ಕಿಡಾದವರ ನೆರವಿಗಾಗಿಯೇ ಒದಗಿಸಲಾಗುತ್ತಿದೆ. ಇದು ರಾಜ್ಯ ಸರ್ಕಾರದ ನೂತನ ಯೋಜನೆಯಾಗಿದ್ದು, ಶೀಘ್ರದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಅಂಬ್ಯುಲೆನ್ಸ್‌ಗಳಿಗೆ ಚಾಲನೆ ನೀಡಲಿದ್ದಾರೆ ಎಂದರು.

ಇದನ್ನೂ ಓದಿ: Bengaluru Power Cut: ಆ.28 ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ

ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ಆರೋಗ್ಯ ಸಚಿವರಾಗಿ ದಿನೇಶ್ ಗುಂಡೂರಾವ್ ಇಲಾಖೆಯಲ್ಲಿ ಹಲವು ಸುಧಾರಣೆಗಳನ್ನು ತರುತ್ತಿದ್ದು, ನಮ್ಮ ಸರ್ಕಾರ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸುತ್ತಿದೆ. ಜನಸಾಮಾನ್ಯರ ಆರೋಗ್ಯ ಸೇವೆಗಳನ್ನು ಒದಗಿಸುವ ವಿಚಾರದಲ್ಲಿ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದರು.

Exit mobile version