ಬೆಂಗಳೂರು: ಚೆನ್ನೈ-ಬೆಂಗಳೂರು-ಮೈಸೂರು ವಂದೇ ಭಾರತ್ (Vande Bharat) ಎಕ್ಸ್‌ಪ್ರೆಸ್ ರೈಲಿನ ವೇಗವನ್ನು ಮತ್ತಷ್ಟು ಹೆಚ್ಚಿಸಲು ತೀರ್ಮಾನಿಸಲಾಗಿದ್ದು, ಇದರಿಂದ ಚೆನ್ನೈನಿಂದ ಬೆಂಗಳೂರಿಗೆ ಕೇವಲ ನಾಲ್ಕು ಗಂಟೆಗಳಲ್ಲಿ ಪ್ರಯಾಣಿಸಬಹುದಾಗಿದೆ. ಚೆನ್ನೈನಿಂದ ಬೆಂಗಳೂರಿಗೆ (Chennai To Bengaluru) ಆಗಮಿಸುವ ಪ್ರಯಾಣಿಕರಿಗೆ ಇದರಿಂದ ಅರ್ಧ ಗಂಟೆ ಸಮಯ ಉಳಿತಾಯವಾಗಲಿದೆ ಎಂದು ತಿಳಿದುಬಂದಿದೆ.
ಅರಕ್ಕೋಣಂ ಹಾಗೂ ಜೋಳಾರ್‌ಪೆಟ್ಟೈ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಗಂಟೆಗೆ 110ರಿಂದ 130 ಕಿಲೋಮೀಟರ್ ವೇಗದಲ್ಲಿ ಓಡಿಸಲು ರೈಲ್ವೆ ಅಧಿಕಾರಿಗಳು ಸಮ್ಮತಿ ಸೂಚಿಸಿದ್ದಾರೆ. ಇದರಿಂದಾಗಿ ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರಯಾಣಿಕರು ಕೇವಲ ನಾಲ್ಕು ಗಂಟೆಗಳಲ್ಲಿ ಬೆಂಗಳೂರು ತಲುಪಬಹುದಾಗಿದೆ. ಸುಮಾರು 25 ನಿಮಿಷ ಪ್ರಯಾಣಿಕರಿಗೆ ಉಳಿತಾಯವಾಗಲಿದೆ.
ಅರಕ್ಕೋಣಂ ಹಾಗೂ ಜೋಳಾರ್‌ಪೆಟ್ಟೈ ಲೇನ್‌ಗಳ ಮರು ಅಭಿವೃದ್ಧಿ ಕಾರ್ಯ ಮುಗಿದಿದೆ. ಇದರಿಂದಾಗಿ ಎರಡೂ ರೈಲು ನಿಲ್ದಾಣಗಳ ಮಧ್ಯೆ ವಂದೇ ಭಾರತ್, ಶತಾಬ್ದಿ ಅಥವಾ ಬೃಂದಾವನ್ ಎಕ್ಸ್‌ಪ್ರೆಸ್ ಸೇರಿ ಹಲವು ರೈಲುಗಳು ಗರಿಷ್ಠ 130 ಕಿಲೋಮೀಟರ್ ವೇಗದಲ್ಲಿ ಚಲಿಸಲು ರೈಲ್ವೆ ಇಲಾಖೆಯು ಅನುಮತಿ ನೀಡಿದೆ. ಮುಂದಿನ ವಾರದಿಂದಲೇ ಹೊಸ ಆದೇಶ ಜಾರಿಗೆ ಬರಲಿದ್ದು, ಪ್ರಯಾಣಿಕರ ಸಮಯವು ಉಳಿತಾಯವಾಗಲಿದೆ.
ಇದನ್ನೂ ಓದಿ: Vande Bharat: ಧಾರವಾಡ-ಬೆಂಗಳೂರು ಹೊಸ ವಂದೇ ಭಾರತ್ ರೈಲಿಗೆ ಕಲ್ಲು ಹೊಡೆದ ಕಿಡಿಗೇಡಿಗಳು; ಕಿಟಕಿ ಗಾಜು ಪುಡಿ
ಯಾವ ಊರಿಗೆ ಸಮಯ ಉಳಿತಾಯ?
ವಂದೇ ಭಾರತ್ ಹಾಗೂ ಲೋಕೊಮೋಟಿವ್ ಎಂಜಿನ್‌ಗಳುಳ್ಳ ರೈಲುಗಳ ವೇಗ ಹೆಚ್ಚಳದಿಂದ ಬೆಂಗಳೂರು, ಕೊಯಮತ್ತೂರು, ಕಲ್ಲಿಕೋಟೆ, ಮಂಗಳೂರು, ಮುಂಬೈ ಸೇರಿ ಹಲವು ನಗರಗಳಿಗೆ ಸಂಚರಿಸುವವರಿಗೆ ಸಮಯದ ಉಳಿತಾಯವಾಗಲಿದೆ. ಮುಂದಿನ ವಾರದಿಂದಲೇ ವೇಗದ ಮಿತಿ ಹೆಚ್ಚಾಗಲಿದೆ ಎಂದು ರೈಲ್ವೆ ಇಲಾಖೆಯು ಸುತ್ತೋಲೆ ಹೊರಡಿಸಿದೆ.