ಉಡುಪಿ: ಅತಿವೃಷ್ಟಿಯಿಂದ ಹಾನಿಗೊಳಗಾದ ಕಾರವಾರ, ಉತ್ತರ ಕನ್ನಡ ಮತ್ತು ಬೆಳಗಾವಿ ಜಿಲ್ಲೆಗಳಿಗೆ ಮುಂದಿನ ವಾರ ಪ್ರವಾಸ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ನಗರದಲ್ಲಿ ಮಳೆ ಹಾನಿ ಪರಿಶೀಲನೆ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವರ್ಷ ಜುಲೈ ತಿಂಗಳಲ್ಲಿ ವಾಡಿಕೆಗಿಂತ ಕರಾವಳಿ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಹೆಚ್ಚಾಗಿ ಪ್ರವಾಹ ಪರಿಸ್ಥಿತಿ ಬಂದಿದೆ. ಇದುವರೆಗೂ ಸುಮಾರು 300 ಜನರನ್ನು ಪ್ರವಾಹ ಸ್ಥಳದಿಂದ ಸ್ಥಳಾಂತರ ಮಾಡಿ ರಕ್ಷಣೆ ಮಾಡಲಾಗಿದೆ. ಇದುವರೆಗೆ 32 ಜೀವ ಹಾನಿಯಾಗಿದ್ದು, 5 ಜನ ನಾಪತ್ತೆಯಾಗಿದ್ದಾರೆ. ಮಳೆ ಆಗಿರುವ ಜಿಲ್ಲೆಗಳಲ್ಲಿ 14 ಕಾಳಜಿ ಕೇಂದ್ರವನ್ನು ತೆರೆಯಲಾಗಿದೆ. 4 ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ತಂಡಗಳು ಕೆಲಸ ಮಾಡುತ್ತಿವೆ ಎಂದರು.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಸೇರಿ ಮೂರು ಜಿಲ್ಲೆಗಳಲ್ಲಿ ಕೃಷಿ ಮತ್ತು ತೋಟಗಾರಿಕೆಯ 355 ಹೇಕ್ಟರ್ ಪ್ರದೇಶ ಬೆಳೆ ಹಾನಿಗೊಳಗಾಗಿದೆ. 1062 ಮನೆಗಳಿಗೆ ಹಾನಿಯಾಗಿದೆ. ಲೋಕೋಪಯೋಗಿ ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ (ಪಿಡಬ್ಲ್ಯುಡಿ ಮತ್ತು ಆರ್.ಡಿ.ಪಿ.ಆರ್) ಸೇರಿ 2,187 ಕಿ.ಮೀ. ರಸ್ತೆ ಹಾನಿಗೊಳಗಾಗಿದೆ. ಪ್ರವಾಹದಿಂದ ಹಾನಿಗೊಳಗಾದ ಮನೆ ಮತ್ತು ಬೆಳೆ ಹಾನಿಗೆ ಪರಿಹಾರವನ್ನು ನೀಡಲು ಕೆಲವು ಹೊಸ ನಿಯಮಗಳನ್ನು ರೂಪಿಸಲಾಗಿದೆ. ಈ ಮೂಲಕ ತುರ್ತಾಗಿ ಪರಿಹಾರ ಧನವನ್ನು ಹೆಚ್ಚಿಸಿ ನೀಡುವ ಕೆಲಸ ಆಗುತ್ತಿದೆ ಎಂದು ತಿಳಿಸಿದರು.
ಇದನ್ನೂ ಓದಿ | Chief Minister Tour | ಭೂಕಂಪನದಿಂದ ಹಾನಿಗೊಳಗಾದ ಮನೆ ವೀಕ್ಷಿಸಿದ ಸಿಎಂ ಬೊಮ್ಮಾಯಿ
ಮೂಲಸೌಕರ್ಯ ದುರಸ್ತಿಗೆ 500 ರೂಪಾಯಿ ಬಿಡುಗಡೆ
ರಾಜ್ಯದಲ್ಲಿ ಸುರಿಯುತ್ತಿರುವ ಮಳೆಯಿಂದ ಹಾನಿಗೊಳಗಾದ ರಸ್ತೆಗಳ ಅಭಿವೃದ್ಧಿ, ವಿದ್ಯುತ್ ಸಂಪರ್ಕ, ಸಣ್ಣ ಸೇತುವೆಗಳು ಪುನಃಸ್ಥಾಪನೆ ಸೇರಿದಂತೆ ತುರ್ತು ಕೆಲಸಕ್ಕೆ ಕೂಡಲೇ 500 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗುವುದು. ಮಳೆಯಿಂದಾಗಿ ಬಹಳಷ್ಟು ರಸ್ತೆಗಳು ಹದಗೆಟ್ಟಿವೆ, ಮೂಲಸೌಕರ್ಯ ಹಾಳಾಗಿವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇದನ್ನೂ ಓದಿ | National Emblem Controversy | ಕಾಂಗ್ರೆಸ್ ನಿದ್ದೆ ಮಾಡುವ ಸಿಂಹವನ್ನು ನಂಬಿಕೊಂಡಿದೆ: ಸಿಎಂ ಬೊಮ್ಮಾಯಿ