ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರ್ಕಾರ ಸಮ್ಮತಿಸಿದ ಹಿನ್ನೆಲೆಯಲ್ಲಿ ಪೌರಕಾರ್ಮಿಕರ ವಿವಿಧ ಸಂಘಟನೆಗಳ ಮುಖಂಡರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ನಗರದಲ್ಲಿ ಮಂಗಳವಾರ ಭೇಟಿಯಾಗಿ ಧನ್ಯವಾದ ತಿಳಿಸಿದರು.
ಕಳೆದ ಐದು ದಿನಗಳಿಂದ ಕೆಲಸ ಕಾಯಂಗೊಳಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿದ್ದಕ್ಕೆ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಸರ್ಕಾರ ಭರವಸೆ ನೀಡಿದ್ದರಿಂದ ಸಂತಸಗೊಂಡ ಪೌರ ಕಾರ್ಮಿಕರು, ಸಿಎಂಗೆ ಅಭಿನಂದನೆ ಸಲ್ಲಿಸಿದ್ದಾರೆ.
ನಗರದ ನಿವಾಸದ ಬಳಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ಪೌರಕಾರ್ಮಿಕರ ನೇಮಕಾತಿಯು ಐತಿಹಾಸಿಕ ತೀರ್ಮಾನವಾಗಿದ್ದು, ಬೇರೆ ಯಾವ ರಾಜ್ಯದಲ್ಲಿಯೂ ಈ ರೀತಿಯ ನಿರ್ಧಾರವಾಗಿಲ್ಲ. ಸರ್ಕಾರದ ನಿರ್ಣಯವನ್ನು ಪೌರಕಾರ್ಮಿಕರು ಹೃದಯಪೂರ್ವಕವಾಗಿ ಸ್ವಾಗತಿಸಿದ್ದು, ಕೆಲಸಕ್ಕೆ ಹಾಜರಾಗುತ್ತಿದ್ದಾರೆ ಎಂದು ತಿಳಿಸಿದರು.
ಪೌರಕಾರ್ಮಿಕರ ವಿಶೇಷ ನೇಮಕಾತಿ ಸಲುವಾಗಿ ಸಮಿತಿ ರಚಿಸಲಾಗುತ್ತಿದ್ದು, ಸಮಿತಿಯಲ್ಲಿ ಕಾರ್ಮಿಕ ಮುಖಂಡರು, ನಿಗಮದ ಅಧ್ಯಕ್ಷರು, ಪದಾಧಿಕಾರಿಗಳು, ಕಾನೂನು ಇಲಾಖೆ ಅಧಿಕಾರಿಗಳು ಇರುತ್ತಾರೆ. ಪೌರ ಕಾರ್ಮಿಕರಿಗೆ ನೇರವಾಗಿ ವೇತನ ಪಾವತಿ ಆಗುತ್ತಿದ್ದರೂ, ಕೆಲಸ ಕಾಯಂ ಆಗದೆ ಸರ್ಕಾರಿ ಸವಲತ್ತುಗಳು ದೊರೆಯುತ್ತಿರಲಿಲ್ಲ. ಈಗ ಸರ್ಕಾರದ ಕೆಲಸ ಕಾಯಂ ಮಾಡುವ ತೀರ್ಮಾನದಿಂದ ಪೌರ ಕಾರ್ಮಿಕರು ಸಂತಸಗೊಂಡಿದ್ದಾರೆ ಎಂದು ಮುಖ್ಯಮಂತ್ರಿಯವರು ಹೇಳಿದರು.
ಅತ್ಯಂತ ಕೆಟ್ಟ ಸ್ಥಿತಿಯಲ್ಲಿ ಪೌರ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಅವರ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಆಯವ್ಯಯದಲ್ಲಿ ಎರಡು ಸಾವಿರ ರೂ.ಗಳ ಸಂಕಷ್ಟ ಪರಿಹಾರ ನೀಡಲಾಗಿದೆ. ಕೆಲಸ ಕಾಯಂ ಆದರೆ ಅವರ ಬದುಕು ಉತ್ತಮ ಸ್ಥಿತಿಗೆ ಬರುತ್ತದೆ ಎನ್ನುವ ನಂಬಿಕೆ ಅವರ ಮನಸ್ಸಿನಲ್ಲಿ ಇತ್ತು. ಹಾಗಾಗಿ ಅವರ ಬಹುದಿನಗಳ ಬೇಡಿಕೆಯನ್ನು ಈಡೇರಿಸಲಾಗಿದೆ. ಕಾಯಂಗೊಳಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ಸಿಎಂ ತಿಳಿಸಿದರು.
ಇದನ್ನೂ ಓದಿ | ಮುಖ್ಯಮಂತ್ರಿ ಚಂದ್ರುಗೆ ಆಮ್ ಆದ್ಮಿ ಪಕ್ಷದ ರಾಜ್ಯಮಟ್ಟದ ಹೊಣೆಗಾರಿಕೆ
ಕರ್ನಾಟಕ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ. ಶಿವಣ್ಣ, ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ್ ಹಿರೇಮನಿ, ಕರ್ನಾಟಕ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಚ್.ಹನುಮಂತಪ್ಪ ಮತ್ತಿತರರು ಇದ್ದರು.
ಭಾರಿ ಮಳೆಯಿಂದ ಹಾನಿ ; ಪರಿಹಾರ ಕಾರ್ಯಕ್ಕೆ ಸಿಎಂ ಸೂಚನೆ
ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿಯೇ ಸಂಬಂಧಪಟ್ಟ ಪ್ರಕೃತಿ ವಿಕೋಪ ತಂಡದ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಉಸ್ತುವಾರಿ ಕಾರ್ಯದರ್ಶಿಗಳಿಗೆ ಸ್ಥಳಕ್ಕೆ ಭೇಟಿ ನೀಡಲು ಸೂಚಿಸಲಾಗಿದೆ. ಕರಾವಳಿ ಭಾಗದಲ್ಲಿ ಕಡಲು ಕೊರೆತ ಉಂಟಾಗಿದ್ದು, ಕೆಲವು ಮನೆಗಳಿಗೆ ಹಾನಿಯಾಗಿದೆ. ಪರಿಶೀಲನೆ ಮಾಡಿ ಕೂಡಲೇ ಪರಿಹಾರ ನೀಡಬೇಕೆಂದು ಸೂಚನೆ ನೀಡಲಾಗಿದೆ. ಮಂಗಳವಾರ ಕೂಡ ಕೊಡಗು ಸೇರಿ ಮಳೆ ಹಾನಿಗೆ ಒಳ್ಳಪಟ್ಟ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಪರಿಹಾರ ನೀಡಲು ಸೂಕ್ತ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಇದನ್ನೂ ಓದಿ | ಕೊನೆಗೂ ಪ್ರತಿಭಟನೆ ಕೈ ಬಿಟ್ಟ ಪೌರಕಾರ್ಮಿಕರು: ಮಂಗಳವಾರದಿಂದ ಕೆಲಸಕ್ಕೆ ಹಾಜರ್