Site icon Vistara News

Moral policing | ಮುಖ್ಯಮಂತ್ರಿಯಿಂದಲೇ ನೈತಿಕ ಪೊಲೀಸ್‌ಗಿರಿಗೆ ಕುಮ್ಮಕ್ಕು: ಸಿದ್ದರಾಮಯ್ಯ ಆರೋಪ

siddaramaiah in Mangalore

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ನೈತಿಕ ಪೊಲೀಸ್‌ಗಿರಿ (Moral policing) ನಡೆಯುತ್ತಿದೆ. ಇದಕ್ಕೆ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.

ಬೆಳ್ತಂಗಡಿಯಲ್ಲಿ ನಡೆಯುವ ಮಾಜಿ ಶಾಸಕ ವಸಂತ ಬಂಗೇರ ಅಭಿನಂದನಾ ಕಾರ್ಯಕ್ರಮ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕಾಗಿ ತೆರಳುವ ದಾರಿಯಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಅವರು ಮಾತನಾಡಿದರು.

ʻʻಕಳೆದ ಎರಡು ತಿಂಗಳಲ್ಲಿ ಏಳೆಂಟು ನೈತಿಕ ಪೊಲೀಸ್‌ ಗಿರಿ ಪ್ರಕರಣಗಳು ನಡೆದಿದೆ ಎಂದು ನನಗೆ ಹೇಳಿದರು. ನಾನು ಇದನ್ನು ಖಂಡಿಸುತ್ತೇನೆ. ಹಾಗೂ ಅವರ ಮೇಲೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಆಗ್ರಹಿಸುತ್ತೇನೆʼʼ ಎಂದ ಸಿದ್ದರಾಮಯ್ಯ, ʻʻನೈತಿಕ ಪೊಲೀಸ್ ಗಿರಿ ನಡೆಸಲು ಕಾನೂನಿನಲ್ಲಿ ಅವಕಾಶ ಇಲ್ಲ. ಮುಖ್ಯಮಂತ್ರಿಯೇ ನೈತಿಕ ಪೊಲೀಸ್ ಗಿರಿ ಪ್ರೇರೇಪಿಸುವ ಕೆಲಸ ಮಾಡ್ತಿದಾರೆ. ಆಕ್ಷನ್ ಗೆ ರಿಯಾಕ್ಷನ್ ಇದ್ದೇ ಇರುತ್ತದೆ ಅಂದರೆ ಏನರ್ಥ? ಕೊಲೆ ಮಾಡಿದ್ರೆ ಮತ್ತೊಂದು ಕೊಲೆ ಮಾಡಬೇಕು ಅಂತ ಅರ್ಥನಾ?ʼʼ ಎಂದು ಪ್ರಶ್ನಿಸಿದರು.

ʻʻಮುಖ್ಯಮಂತ್ರಿಗೆ ಕಾನೂನು ಗೊತ್ತಿದ್ಯಾ ಗೊತ್ತಿಲ್ಲ. ಸಂವಿಧಾನ ಮತ್ತು ಐಪಿಸಿಯಲ್ಲಿ ನೈತಿಕ ಪೊಲೀಸ್ ಗಿರಿಗೆ ಅವಕಾಶ ಇದ್ಯಾ? ಪೊಲೀಸ್ ಇರೋದು ಕಾನೂನು ಸುವ್ಯವಸ್ಥೆ ಕಾಪಾಡಲು. ಅನಗತ್ಯವಾಗಿ ಕಾನೂನು ಸುವ್ಯವಸ್ಥೆ ಹಾಳು ಮಾಡೋದು ಖಂಡನೀಯ. ಸರ್ಕಾರ ಇದಕ್ಕೆ ಯಾವುದೇ ಕಾರಣಕ್ಕೆ ಅವಕಾಶ ಕೊಡಬಾರದು. ಮುಖ್ಯಮಂತ್ರಿಯೇ ಪ್ರೇರಣೆ ನೀಡುವ ಕೆಲಸ ಮಾಡಿದ್ರೆ ಏನಾಗುತ್ತದೆʼʼ ಎಂದು ಕೇಳಿದರು.

ಕುಕ್ಕರ್‌ ಬ್ಲಾಸ್ಟ್‌ ಹೇಳಿಕೆಗೆ ಪ್ರತಿಕ್ರಿಯೆ
ಕುಕ್ಕರ್‌ ಬ್ಲಾಸ್ಟ್‌ ಸಂಬಂಧ ಡಿ.ಕೆ. ಶಿವಕುಮಾರ್‌ ನೀಡಿದ ಹೇಳಿಕೆಯನ್ನು ಸಮರ್ಥಿಸಿದ ಅವರು ಅವರು, ʻʻಕುಕ್ಕರ್ ಬ್ಲಾಸ್ಟ್ ರಾಜಕೀಯಕ್ಕೆ ಬಳಸಿದ್ದಾರೆ ಅಂತ ಕೆಪಿಸಿಸಿ ಅಧ್ಯಕ್ಷರು ಹೇಳಿದ್ದಾರೆ ಅಷ್ಟೇ. ಅವರು ಟೆರರಿಸಂ ಸಪೋರ್ಟ್ ಮಾಡ್ತೀನಿ ಅಂತ ಹೇಳಿದರಾ? ಬಿಜೆಪಿಯವರು ತಿರುಚಿ ಜನರಿಗೆ ತಪ್ಪು ಮಾಹಿತಿ ನೀಡ್ತಾ ಇದಾರೆʼʼ ಎಂದರು.

ʻʻಬಿಜೆಪಿಯ ಡಬಲ್ ಎಂಜಿನ್ ಸರ್ಕಾರ ಭಯೋತ್ಪಾದನೆ ಹತ್ತಿಕ್ಕಿದೆಯಾ? ದೇಶದಲ್ಲಿ ಉಗ್ರಗಾಮಿ ಚಟುವಟಿಕೆ ಹತ್ತಿಕ್ಕಲಿ ಮೊದಲು. ಈ ಬಿಜೆಪಿ ಬರೀ ಜನರನ್ನು ಪ್ರಚೋದನೆ ಮಾಡಿ, ಭಾವನಾತ್ಮಕ ವಿಚಾರ ಮಾತನಾಡುವುದರಲ್ಲೇ ಕಾಲ ಕಳೆಯುತ್ತಿದೆʼʼ ಎಂದು ಹೇಳಿದರು.

ಇದನ್ನೂ ಓದಿ | Moral policing | ಬಸ್‌ನಲ್ಲಿ ಹೋಗುತ್ತಿದ್ದ ಹಿಂದು-ಮುಸ್ಲಿಂ ವಕೀಲ ಜೋಡಿಗೆ ತಡೆ: ಕಾರ್ಯಕರ್ತರ ಬೆವರಿಳಿಸಿದ ಯುವತಿ

Exit mobile version