ಚಿಕ್ಕಬಳ್ಳಾಪುರ: ಸಚಿವ ಕೆ.ಎಚ್ ಮುನಿಯಪ್ಪ ಅವರ ತವರೂರು ಕಂಬದಹಳ್ಳಿ ಗ್ರಾಮದ (Chikkaballapura News) ತೋಟದಲ್ಲಿ ಕಾರ್ಮಿಕನೊಬ್ಬ ಮೃತಪಟ್ಟಿದ್ದಾನೆ. ನಾಗರಾಜು (45) ಮೃತ ದುರ್ದೈವಿ.
ಶಿಡ್ಲಘಟ್ಟ ತಾಲೂಕಿನ ಮಳ್ಳೂರು ಗ್ರಾಮದ ನಿವಾಸಿಯಾಗಿರುವ ನಾಗರಾಜು 4 ತಿಂಗಳಿಂದ ಸಚಿವ ಕೆ.ಎಚ್.ಮುನಿಯಪ್ಪ ಅವರ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದ. ಮೃತ ನಾಗರಾಜು ಪತ್ನಿ ವಿಷ ಸೇವಿಸಿ ಮೃತಪಟ್ಟಿದ್ದಾಗಿ ಮಾಹಿತಿ ನೀಡಿದ್ದಾರೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದು ತಿಳಿದುಬಂದಿಲ್ಲ.
ಅನುಮಾನಾಸ್ಪದವಾಗಿ ಮೃತಪಟ್ಟಿರುವ ಬಗ್ಗೆ ಹಲವು ಅನುಮಾನಗಳು ಮೂಡಿವೆ. ನಿಜಕ್ಕೂ ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದರ ಕುರಿತು ಸಂಶಯ ಎದ್ದಿವೆ. ಸ್ಥಳಕ್ಕೆ ಶಿಡ್ಲಘಟ್ಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.
ಈ ಸಂಬಂಧ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಪೊಲೀಸರು ತನಿಖೆಯನ್ನು ಮುಂದುವರೆಸಲಿದ್ದಾರೆ.
ಇದನ್ನೂ ಓದಿ: Murder Case : ಬಡ್ಡಿ ಹಣ ಕೊಡಲು ತಡವಾಗಿದ್ದಕ್ಕೆ ಕೋಳಿ ಕಟ್ ಮಾಡುವ ಮಚ್ಚಿನಿಂದ ಕೊಚ್ಚಿದ!
ಮನೆಯಲ್ಲಿ ನೇತಾಡುತ್ತಿದ್ದ ದಂಪತಿ ಶವ! ಕೈ ಹಿಡಿದವಳ ವೇಲೇ ಕುಣಿಕೆ
ಅವರಿಬ್ಬರು ಮೂರು ವರ್ಷದ ಹಿಂದಷ್ಟೇ ಮದುವೆ ಆಗಿದ್ದರು. ಆದರೆ ಅದೇನಾಯಿತೋ ಏನೋ ಪತಿ-ಪತ್ನಿ ಇಬ್ಬರು ಒಂದೇ ವೇಲಿನಲ್ಲಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ. ತುಮಕೂರು ಜಿಲ್ಲೆ (Tumkur News) ಪಾವಗಡ ತಾಲೂಕಿನ ರೊಪ್ಪ ಗ್ರಾಮದಲ್ಲಿ ಘಟನೆ ನಡೆದಿದೆ.
ರೊಪ್ಪ ಗ್ರಾಮದಲ್ಲಿ ವಾಸವಿದ್ದ ಮನು (26) ಹಾಗೂ ಪವಿತ್ರ (24) ಮೃತ ದುರ್ದೈವಿಗಳು. ಮನು, ಪವಿತ್ರ ತಾವು ವಾಸವಿದ್ದ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಪವಿತ್ರಾಳ ವೇಲಿನಲ್ಲೇ ಬಿಗಿದುಕೊಂಡು ಪತಿ-ಪತ್ನಿ ಅಸುನೀಗಿದ್ದಾರೆ. ದಂಪತಿ ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದು ತಿಳಿದು ಬಂದಿಲ್ಲ.
ಮೂರು ವರ್ಷದ ಹಿಂದೆ ಮನು ಹಾಗೂ ಪವಿತ್ರ ಮದುವೆಯಾಗಿದ್ದರು. ಎಂದಿನಂತೆ ಮನೆಯಿಂದ ಹೊರಬಾರದೆ ಇದ್ದಾಗ ಸ್ಥಳೀಯ ಅನುಮಾನಿಸಿ ನೋಡಿದಾಗ ವಿಷಯ ಗೊತ್ತಾಗಿದೆ. ಸ್ಥಳೀಯರು ಮಾಹಿತಿ ನೀಡಿದ ಮೇರೆಗೆ ಪಾವಗಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇಬ್ಬರ ಮೃತದೇಹವನ್ನು ಕೆಳಗಿಸಿದ್ದು, ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪಾವಗಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ