ಚಿಕ್ಕಬಳ್ಳಾಪುರ: ಜಿಲ್ಲೆಯ ಬಾಗೇಪಲ್ಲಿಯ ಪ್ರಸಿದ್ಧ ಫಾರೂಕ್ ಮಸೀದಿಗೆ ಕಾಂಗ್ರೆಸ್ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಭೇಟಿ ನೀಡಿದ್ದರು. ʼಮಸೀದಿ ದರ್ಶನʼ ಕಾರ್ಯಕ್ರಮ ಹಿನ್ನೆಲೆಯಲ್ಲಿ ಎಲ್ಲ ಧರ್ಮಗಳ ಪುರುಷರು, ಮಹಿಳೆಯರು ಹಾಗೂ ಮಕ್ಕಳು, ಮಸೀದಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುವ ಮೂಲಕ ಸೌಹಾರ್ದ ಹಾಗೂ ಸಮಾನತೆಯ ಸಂದೇಶ ಸಾರಿದರು.
ಈ ವೇಳೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮಾತನಾಡಿ, ದೇಶದಲ್ಲಿರುವ ನಾವೆಲ್ಲರೂ ಒಂದೇ ಭಾವನೆ ಮೂಡಿಸಲು ಫಾರೂಕ್ ಮಸೀದಿ ವತಿಯಿಂದ ʼಮಸೀದಿ ದರ್ಶನʼ ಎಂಬ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ. ಜಾತಿ-ಧರ್ಮದ ವಿಚಾರದಲ್ಲಿ ಬಾಗೇಪಲ್ಲಿ ಇಡೀ ಭಾರತಕ್ಕೆ ಮಾದರಿಯಾಗಿದೆ. ಮಸೀದಿ ಬಗ್ಗೆ ಅಪನಂಬಿಕೆ ಇರುವವರಿಗೆ ಪಾಠ ಕಲಿಸಲು ಮಸೀದಿ ದರ್ಶನ ಮಾಡಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ | HD Devegowda: ಈ ವಾರದಲ್ಲಿ ಲೋಕಸಭೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಸೀಟು ಅಂತಿಮ: ಎಚ್.ಡಿ. ದೇವೇಗೌಡ
ಎಲ್ಲಾ ಧರ್ಮಗಳಲ್ಲಿ ಎಲ್ಲರೂ ಒಳ್ಳೆಯವರು ಇರಲ್ಲ, ಎಲ್ಲರೂ ಕೆಟ್ಟವರು ಇರಲ್ಲ. ಯಾವುದೋ ಒಬ್ಬ ವ್ಯಕ್ತಿ ಕೆಟ್ಟ ಕೆಲಸ ಮಾಡಿದರೆ ಆ ಸಮುದಾಯವನ್ನು ನಿಂದನೆ ಮಾಡುವುದು ತಪ್ಪು. ಎಲ್ಲೋ ಒಂದು ಘಟನೆಯಾದಾಗ ಅದರ ಬಗ್ಗೆ ಅಪಪ್ರಚಾರ ಮಾಡುವುದು ತಪ್ಪು. ನಾನು ಮಂದಿರಕ್ಕೂ ಹೋಗುವೆ, ಮಸೀದಿಗೂ ಹೋಗುವೆ, ಚರ್ಚ್‌ಗೂ ಹೋಗುವೆ ಎಂದು ಹೇಳಿದರು.