Site icon Vistara News

Cylinder Blast : ಗ್ಯಾಸ್‌ ಸೋರಿಕೆಯಾಗಿ ಬೆಂಕಿ ಅವಘಡ; ಮನೆ ಧ್ವಂಸ; ಮೂವರ ಸ್ಥಿತಿ ಗಂಭೀರ

Cylinder blast in chikkamagaluru

ಚಿಕ್ಕಬಳ್ಳಾಪುರ: ಮನೆಯಲ್ಲಿ ಅಡುಗೆ ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ (Gas Cylinder) ಸಂಭವಿಸಿದ ಅಗ್ನಿ ಅವಘಡದಲ್ಲಿ (fire incident) ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಚಿಕ್ಕಬಳ್ಳಾಪುರ ನಗರ (Chikkaballapura news) ಪೊಲೀಸ್ ಠಾಣೆ ಹಿಂಭಾಗದಲ್ಲಿರುವ ಮನೆಯಲ್ಲಿ ಘಟನೆ ನಡೆದಿದ್ದು, ಮನೆಯೂ ಧ್ವಂಸಗೊಂಡಿದೆ.

ಹರ್ಷಿಯಾ (16), ಹೇಮಾವತಿ (18) ಹಾಗೂ ರಫೀಕ್ (4) ಎಂಬವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ.

ಮನೆಯಲ್ಲಿ ತಂದೆ ತಾಯಿ ಇಲ್ಲದ ವೇಳೆ ಮಕ್ಕಳು ಸ್ಟೌ ಆನ್‌ ಮಾಡಲು ಮುಂದಾಗಿದ್ದು, ಈ ವೇಳೆ ದುರಂತ ಸಂಭವಿಸಿದೆ. ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿತ್ತು. ಗ್ಯಾಸ್ ಸೋರಿಕೆಯಾಗಿರುವುದರ ಅರಿವಿಲ್ಲದೆ ಮಕ್ಕಳು ಸ್ಟೌ ಹಚ್ಚಿದ್ದಾರೆ. ಆಗ ಏಕಾಏಕಿ ಬೆಂಕಿ ಹೊತ್ತಿಕೊಂಡು ಉರಿದಿದೆ.

ಬೆಂಕಿಯ ಕೆನ್ನಾಲಿಗೆಗೆ ಇಬ್ಬರು ಮಕ್ಕಳು ಹಾಗೂ ಓರ್ವ ಯುವತಿಗೆ ಸುಟ್ಟ ಗಾಯಗಳಾಗಿವೆ. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕುರ್ಚಿಯ ಕೆಳಗಿಟ್ಟಿದ್ದ ಆಟಂ ಬಾಂಬ್‌ ಸ್ಫೋಟ, ಯುವಕ ದಾರುಣ ಸಾವು

ಚಿಕ್ಕಮಗಳೂರು: ದೀಪಾವಳಿ ಹಬ್ಬದ (Deepavali Festival) ಸಂದರ್ಭದಲ್ಲಿ ಮನೆಯಲ್ಲಿ ತಂದಿರುವ ಪಟಾಕಿ ವಿಚಾರದಲ್ಲಿ (Cracker Danger) ಎಷ್ಟು ನಿಗಾ ವಹಿಸಿದರೂ ಸಾಲದು. ಒಂದು ಸ್ವಲ್ಪ ಎಚ್ಚರ ತಪ್ಪಿದರೂ ಪ್ರಾಣಕ್ಕೆ ಎರವಾಗುತ್ತದೆ. ಈ ಮಾತಿಗೆ ಪೂರಕವಾಗಿ ಚಿಕ್ಕಮಗಳೂರಿನ ತರೀಕೆರೆ ಗ್ರಾಮದಲ್ಲಿ ಭೀಕರ ಘಟನೆಯೊಂದು ಸಂಭವಿಸಿದೆ.

ಕುರ್ಚಿಯ ಅಡಿಯಲ್ಲಿ ಇಟ್ಟಿದ್ದ ಆಟಂ ಬಾಂಬ್‌ ಪಟಾಕಿ (Cracker Danger) ಒಮ್ಮೆಗೇ ಸಿಡಿದು ಪ್ರದೀಪ್‌ ಎಂಬ 30 ವರ್ಷದ ಯುವಕ ದಾರುಣವಾಗಿ ಪ್ರಾಣ ಕಳೆದುಕೊಂಡಿದ್ದಾನೆ. ಪಟಾಕಿ ಸಿಡಿತದ ರಭಸ ಎಷ್ಟಿತ್ತೆಂದರೆ ಆ ಯುವಕ ಸುಮಾರು ಐದು ಅಡಿ ಎತ್ತರಕ್ಕೆ ಹಾರಿ ಬಿದ್ದಿದ್ದಾರೆ. ತರೀಕೆರೆ ತಾಲೂಕಿನ ಸುಣ್ಣದಹಳ್ಳಿಯಲ್ಲಿ ಈ ಘಟನೆ ನಡೆದಿದೆ.

ಅಡಕೆ ಗೋಟು ಎಂದು ಮಲೆನಾಡಿನಲ್ಲಿ ಕರೆಯಲಾಗುವ ಕಲ್ಲು ಆಟಂ ಬಾಂಬ್ ಪಟಾಕಿಯನ್ನು ಪ್ರದೀಪ್‌ ಮನೆಗೆ ಕರೆತಂದಿದ್ದರು. ಅದು ಮಕ್ಕಳಿಗೆ ಗೊತ್ತಾಗಬಾರದು ಎಂಬ ಕಾರಣಕ್ಕಾಗಿ ಒಂದು ಕುರ್ಚಿಯ ಅಡಿ ಭಾಗದಲ್ಲಿ ಅದನ್ನು ಇಟ್ಟಿದ್ದರು.

ಇತ್ತ ಮಕ್ಕಳು ಬೇರೆ ಬೇರೆ ಪಟಾಕಿಗಳನ್ನು ಹಿಡಿದುಕೊಂಡು ಆಟವಾಡುತ್ತಿದ್ದರು. ಪ್ರದೀಪ್‌ ಅವರು ಆಟಂ ಬಾಂಬ್‌ ಅನ್ನು ಇಟ್ಟಿರುವ ಕುರ್ಚಿಯ ಮೇಲೆಯೇ ಕುಳಿತಿದ್ದರು.

ಈ ನಡುವೆ, ಮಕ್ಕಳು ಪಟಾಕಿ ಬಿಡುವಾಗ ಅದರ ಒಂದು ಕಿಡಿ ಅದು ಹೇಗೋ ಆಟಂ ಬಾಂಬ್‌ ಇದ್ದ ಚೀಲದೊಳಗೆ ಸೇರಿಬಿಟ್ಟಿದೆ. ಇದು ಯಾರಿಗೂ ಗೊತ್ತಾಗಿರಲಿಲ್ಲ. ಕೆಲವೇ ಕ್ಷಣದಲ್ಲಿ ಈ ಕಿಡಿ ಆಟಂ ಬಾಂಬ್‌ಗೆ ತಗುಲಿ ಒಮ್ಮೆಗೇ ಪಟಾಕಿಗಳು ಸಿಡಿದವು.

ಸುಮಾರು 10ರಿಂದ 15 ಆಟಂ ಬಾಂಬ್‌ಗಳು ಅದರಲ್ಲಿದ್ದವು ಎಂದು ಹೇಳಲಾಗಿದೆ. ಅವೆಲ್ಲವೂ ಏಕಕಾಲದಲ್ಲಿ ಸಿಡಿದ ಪರಿಣಾಮವಾಗಿ ಪ್ರದೀಪ್‌ ಅವರು ಕುರ್ಚಿ ಸಹಿತ ಮೇಲಕ್ಕೆ ಎಸೆಯಲ್ಪಟ್ಟರು. ಅವರ ಜತೆಗೆ ಇದ್ದ ಇನ್ನೊಬ್ಬ ಗೆಳೆಯ ಕೂಡಾ ಎಸೆಯಲ್ಪಟ್ಟರು.

ಬೆಂಕಿಯ ಝಳ, ಸ್ಫೋಟ ಮತ್ತು ಎಸೆತದಿಂದಾಗಿ ತೊಡೆಯ ಭಾಗಕ್ಕೆ ತೀವ್ರವಾದ ಹೊಡೆತ ಬಿತ್ತು. ಹೀಗಾಗಿ ಅವರು ಗಂಭೀರವಾಗಿ ಗಾಯಗೊಂಡರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅವರನ್ನು ಬದುಕಿಸಲು ಸಾಧ್ಯವಾಗಲಿಲ್ಲ. ಕಲ್ಲು ಆಟಂಬಾಂಬ್ ಸಿಡಿದ ರಭಸಕ್ಕೆ ಮನೆಯ ಗ್ಲಾಸ್ ಗಳು ಪುಡಿ-ಪುಡಿಯಾಗಿವೆ. ಮನೆಯಲ್ಲಿದ್ದ ಮೂವರು ಮಕ್ಕಳಿಗೂ ಗಾಯಗಳಾಗಿವೆ.

Exit mobile version