ಚಿಕ್ಕಬಳ್ಳಾಪುರ: ಎಲ್ಲದರಲ್ಲೂ ಆರೋಗ್ಯ ಸಚಿವರು ವ್ಯಾಪಾರ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಅಕ್ರಮ ಕಲ್ಲುಗಣಿಗಾರಿಕೆ, ಕ್ರಷರ್ ನಡೆಸುವವರಿಗೆ ಆವರ ಬೆಂಬಲವಿದೆ. ಚಿಕ್ಕಬಳ್ಳಾಪುರದಲ್ಲಿ ಮೆಡಿಕಲ್ ಕಾಲೇಜು ಕಟ್ಟಿ ಎಂದರೆ ಅದನ್ನು ಸ್ವಗ್ರಾಮ ಪೆರೇಸಂದ್ರಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಮೆಡಿಕಲ್ ಕಾಲೇಜು ನಿರ್ಮಾಣದಲ್ಲಿ ಎಲ್ಲ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಆ ಪುಣ್ಯಾತ್ಮ ಸುಧಾಕರ್ ಅಕ್ರಮಗಳಲ್ಲಿ ಮುಳುಗಿ ತೇಲುತ್ತಿದ್ದಾನೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
ತಾಲೂಕಿನಲ್ಲಿ ಭಾನುವಾರ ನಡೆದ ಜೆಡಿಎಸ್ ಪಂಚರತ್ನ ಯಾತ್ರೆಯಲ್ಲಿ ಮಾತನಾಡಿ, ರಾಜ್ಯದಲ್ಲಿ ಆರೋಗ್ಯ ಮೂಲಸೌಕರ್ಯ ಉತ್ತಮಪಡಿಸಲು ನಾನು ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ 30 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಕಟ್ಟಲು ಪ್ಲಾನ್ ಮಾಡಿದ್ದೇನೆ. ಎಲ್ಲೆಡೆ ಪಂಚರತ್ನ ಯಾತ್ರೆಗೆ ಉತ್ತಮ ಸ್ಪಂದನೆ ಸಿಗುತ್ತಿದೆ. ಆದರೆ, ಯಾತ್ರೆಯ ಬಗ್ಗೆ ಯಾರೋ ಜೋತಿಷ್ಯರು ಹೇಳಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅತ್ಯಂತ ಲಘುವಾಗಿ ಮಾತನಾಡಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.
ಇದನ್ನೂ ಓದಿ | Sharavathi Submergence | ಶರಾವತಿ ಮುಳುಗಡೆ ಸಂತ್ರಸ್ತರಿಗೆ ಬದುಕು ಕಟ್ಟಿಕೊಡಲು ನಮ್ಮ ಸರ್ಕಾರ ಬದ್ಧ: ಸಿಎಂ
ಈ ಸಚಿವರಿಗೆ ಒಂದು ಸವಾಲು ಹಾಕುತ್ತೇನೆ. 1999ರಲ್ಲಿ ಅಂದಿನ ಕಾಂಗ್ರೆಸ್ ನಾಯಕರು ಪಾಂಚಜನ್ಯ ಊದಿ ರಥಯಾತ್ರೆ ಹೊರಟಿದ್ದು ನನಗೂ ಗೊತ್ತಿದೆ. ನಾನು ಈ ರಾಜ್ಯದ ಸಮಸ್ಯೆ ಬಗೆಹರಿಸಲು ಪಂಚರತ್ನ ಯಾತ್ರೆ ಹೊರಟಿದ್ದೇನೆ. ನಿಮ್ಮ ಥರ ರಾಜ್ಯವನ್ನು ಲೂಟಿ ಮಾಡಲು ಮಾಡುತ್ತಿಲ್ಲ. ನಿನ್ನೆ ಗೌರಿಬಿದನೂರಿಗೆ ಹೋಗುವಾಗ ಬಸ್ ಸೌಲಭ್ಯವಿಲ್ಲದೆ ಶಾಲಾ-ಕಾಲೇಜು ಮಕ್ಕಳು ನನಗೆ ಮನವಿ ಮಾಡಿದರು. ಬಸ್ ವ್ಯವಸ್ಥೆ ಮಾಡಲು ನಿಮಗೆ ಯೋಗ್ಯತೆ ಇಲ್ಲ. ಜಿಲೆಟಿನ್ ಬ್ಲಾಸ್ಟ್ ಪ್ರಕರಣದಲ್ಲಿ ಮೃತರ ಕುಟುಂಬದವರು ಇವತ್ತು ಯಾವ ಪರಿಸ್ಥಿತಿಯಲ್ಲಿ ಇದ್ದಾರೆ. ನನ್ನ ಪಕ್ಷವನ್ನು ಟೀಕಿಸುವ ಯಾವ ನೈತಿಕತೆ ನಿಮಗೆ ಇಲ್ಲ ಎಂದು ಟೀಕಿಸಿದರು.
ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಬಾಣಂತಿ, ಅವಳಿ ಮಕ್ಕಳು ಮೃತಪಟ್ಟರು. ಅಮಾಯಕರ ಸಾವಿಗೆ ಕಾರಣರಾದ ನಿಮ್ಮ ಪಾಪದ ಕೊಡ ತುಂಬಿದೆ. ಚಿಕ್ಕಬಳ್ಳಾಪುರ ತಾಲೂಕಿನ ಜನರನ್ನು ಹಣ, ಕುಕ್ಕರ್ ಕೊಟ್ಟು ಕೊಂಡುಕೊಳ್ಳಲು ಈ ಬಾರಿ ಆಗಲ್ಲ. ಕೋವಿಡ್ ಸಂದರ್ಭದಲ್ಲಿ ಹಣವನ್ನು ಲೂಟಿ ಮಾಡಿದ್ದೀರಿ. ಆರೋಗ್ಯ ಇಲಾಖೆಯಲ್ಲಿ ಸರಿಯಾದ ರೀತಿಯಲ್ಲಿ ವೈದ್ಯರಿಲ್ಲ. ಆಸ್ಪತ್ರೆಗೆ ಉಪಕರಣ, ಔಷಧ ಖರೀದಿ ಹಾಗೂ ವೈದ್ಯರನ್ನು ನೇಮಕ ಮಾಡಬೇಕಾದರೆ ಹಣ ನೀಡಬೇಕಂತೆ. ಗಣಿಗಾರಿಕೆಗೆ ಅನುಕೂಲವಾಗಲು ಗುಡಿಬಂಡೆ ತಾಲೂಕಿನಲ್ಲಿದ್ದ ಪೊಲೀಸ್ ಠಾಣೆಯನ್ನು ಪೆರೇಸಂದ್ರಕ್ಕೆ ವರ್ಗಾಯಿಸಲಾಗಿದೆ ಎಂದು ಆರೋಪಿಸಿದರು.
ಇದನ್ನೂ ಓದಿ | SCST ಐಕ್ಯತಾ ಸಮಾವೇಶ | ಬಿಜೆಪಿಯ ಮೀಸಲಾತಿ ತಂತ್ರಕ್ಕೆ ಕಾಂಗ್ರೆಸ್ ಪ್ರತಿತಂತ್ರ; ದಿನಾಂಕ, ಸ್ಥಳ ಫಿಕ್ಸ್