Site icon Vistara News

ಜನಸ್ಪಂದನ | ವ್ಯಕ್ತಿ ಪೂಜೆಗೆ ಸಮಾವೇಶವಲ್ಲ ಎಂದ ಸುಧಾಕರ್‌: ಸಿದ್ದರಾಮೋತ್ಸವಕ್ಕೆ ಟೀಕೆ

ದೊಡ್ಡಬಳ್ಳಾಪುರ: ಜನರಿಗೋಸ್ಕರ ಜನಸ್ಪಂದನ ಕಾರ್ಯಕ್ರಮ ನಡೆಸಲಾಗುತ್ತಿದೆಯೇ ವಿನಃ ಇದು ಯಾವುದೇ ವ್ಯಕ್ತಿಪೂಜೆಯ ಕಾರ್ಯಕ್ರಮ ಅಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ನಡೆದ ಸಿದ್ದರಾಮೋತ್ಸವವನ್ನು ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ಟೀಕಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ರಘುನಾಥಪುರ ಬಳಿ‌ ಶನಿವಾರ ಬೆಳಗ್ಗೆ ನಡೆಯುವ ಜನಸ್ಪಂದನ ಕಾರ್ಯಕ್ರಮಕ್ಕೂ ಮುನ್ನ ಸ್ಥಳದಲ್ಲಿ ಪೂಜೆ, ಹೋಮ ನೆರವೇರಿಸಿ ನಂತರ ಸುದ್ದಿಗಾರರೊಂದಿಗೆ ಸುಧಾಕರ್‌ ಮಾತನಾಡಿದರು.

ಬಿಜೆಪಿ ಸರ್ಕಾರ ರಚನೆಯಾಗಿ ಮೂರು ವರ್ಷವಾದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಮಾಡಲಾಗುತ್ತಿದೆ. ಸಾರ್ಥಕ ಸೇವೆ, ‌ಸಬಲೀಕರಣಕ್ಕಾಗಿ ಜನಸ್ವಂದನಾ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಮತ್ತು ತುಮಕೂರಿನ ಹಲವು ಭಾಗಗಳ ದೊಡ್ಡ ಜನಸಭೆಯನ್ನು ಮಾಡುತ್ತಿದ್ದೇವೆ ಎಂದರು.

ಮೂರು ವರ್ಷ ಜನರಿಗೆ ಯಾವ ರೀತಿ ಸರ್ಕಾರ ಸ್ವಂದಿಸಿದೆ ಎನ್ನುವುದನ್ನು ತಿಳಿಸಲು ಕಾರ್ಯಕ್ರಮ ನಡೆಯುತ್ತಿದೆ ಎಂದ ಸುಧಾಕರ್‌, ರಾಜ್ಯಾದ್ಯಂತ ಇಂತಹದೇ ಆರು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತದೆ. ಕೊನೆಯದಾಗಿ ಬೆಂಗಳೂರು ಮಧ್ಯ ಭಾಗದಲ್ಲಿ ರಾಜ್ಯ ಮಟ್ಟದ ಸಮಾವೇಶ ನಡೆಯುತ್ತದೆ ಎಂದರು.

ಕಾರ್ಯಕ್ರಮಕ್ಕೆ ಸುಮಾರು 40 ಎಕರೆ ಪ್ರದೇಶವನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ತಾತ್ಕಾಲಿಕ ಅಡುಗೆ ಮನೆ ಮಾಡಿ ಉಪಹಾರ ಊಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಡುಗೆ ತಯಾರಿಸಲು ಎರಡು‌ ದೊಡ್ಡ ಕಂಪನಿಗಳಿಗೆ ಗುತ್ತಿಗೆ ನೀಡಲಾಗಿದೆ. ಸುಮಾರು 3 ಲಕ್ಷ ಜನರಿಗೆ ಪಲಾವ್, ಮೊಸರು ಬಚ್ಚಿ, ಮೊಸರನ್ನ ಮತ್ತು ಸಿಹಿ ತಿಂಡಿ ಇರಲಿದೆ.

ಜನಸ್ಪಂದನ ಎಂದರೆ ವ್ಯಕ್ತಿ ಪೂಜೆ, ವ್ಯಕ್ತಿ ಉತ್ಸವ ಅಲ್ಲ ಎಂದು ಸಿದ್ದರಾಮೋತ್ಸವವನ್ನು ಪರೋಕ್ಷವಾಗಿ ಟೀಕೆ ಮಾಡಿದ ಸುಧಾಕರ್‌, ಜನರಿಗಾಗಿ ಜನರಿಗೋಸ್ಕರ‌ ಕೆಲಸ ಮಾಡಲು ಜನಸ್ಪಂದನ ಮಾಡುತ್ತಿದ್ದೇವೆ. ಫಲಾನುಭವಿಗಳು ಬಂದು ಅವರ ಅನುಭವವನ್ನು ಹೇಳಲಿದ್ದಾರೆ ಎಂದರು.

ಜನಸ್ಪಂದನಕ್ಕೆ ನಾಲ್ಕು ಜಿಲ್ಲೆಗಳ ಪೊಲೀಸ್‌

ಜನಸ್ಪಂದನಕ್ಕೆ ಸುಮಾರು ಮೂರು ಲಕ್ಷ ಜನರನ್ನು ಸೇರಿಸುವ ನಿರೀಕ್ಷೆಯಿದ್ದು, ನಾಲ್ಕು ಜಿಲ್ಲೆಗಳ ಪೊಲೀಸರ ನಿಯೋಜನೆ ಮಾಡಲಾಗುತ್ತಿದೆ. ಬೆಂಗಳೂರು ಗ್ರಾಮಾಂತರ ಎಸ್‌ಪಿ ಮಲ್ಲಿಕಾರ್ಜುನ್ ಬಾಲದಂಡಿ ನೇತೃತ್ವದಲ್ಲಿ ಭದ್ರತೆ ಕಲ್ಪಿಸಲಾಗುತ್ತಿದೆ. ಭದ್ರತೆಗಾಗಿ ಇಬ್ಬರು ಎಎಸ್‌ಪಿ, 11 ಡಿವೈಎಸ್‌ಪಿ, 35 ಇನ್‌ಸ್ಪೆಕ್ಟರ್‌ಗಳ ನಿಯೋಜನೆ ಮಾಡಲಾಗಿದೆ. ಜತೆಗೆ 100 ಪಿಎಸ್‌ಐ, 150 ಎಎಸ್‌ಐ, 1200 ಕಾನ್‌ಸ್ಟೇಬಲ್‌ಗಳನ್ನು ನಿಯೋಜಿಸಲಾಗುತ್ತಿದೆ. ಹೆಚ್ಚುವರಿಯಾಗಿ 400 ಗೃಹ ರಕ್ಷಕ ದಳ ಸಿಬ್ಬಂದಿ, 4 ಕೆಎಸ್‌ಆರ್‌ಪಿ ತುಕಡಿ, 6 ಡಿಆರ್ ತುಕಡಿಗಳಿಂದ ಭದ್ರತೆ ಕಲ್ಪಿಸಲು ನಿರ್ಧರಿಸಲಾಗಿದೆ.

ಸಮಾವೇಶಕ್ಕೆ ಆಗಮಿಸುವವರಿಗಾಗಿ 13 ಕಡೆ ಪಾರ್ಕಿಂಗ್ ಸ್ಥಳ‌ ನಿಗದಿ ಮಾಡಲಾಗಿದ್ದು, ವೇದಿಕೆಯ ಎರಡು ಬದಿಯ ಜಮೀನುಗಳಲ್ಲಿ ವಾಹನ ನಿಲ್ಲಿಸಬಹುದು.

ಇದನ್ನೂ ಓದಿ | ಜನ ಸ್ಪಂದನ | ವಿಘ್ನ ನಿವಾರಣೆಗೆ ಗಣಪತಿ ಹೋಮ: ನಡ್ಡಾ ಬದಲಿಗೆ ಬರಲಿದ್ದಾರೆ ಪ್ರಭಾವಿ ಕೇಂದ್ರ ಸಚಿವೆ

Exit mobile version