ಚಿಕ್ಕಬಳ್ಳಾಪುರ: KSRTC ಬಸ್ ಹಾಗೂ ಮಿನಿ ಬಸ್ ನಡುವೆ ಭೀಕರ ಅಪಘಾತ (Road accident) ಸಂಭವಿಸಿದ್ದು, ಒಬ್ಬ ಸಾವಿಗೀಡಾಗಿದ್ದಾನೆ. ಮೂವರ ಸ್ಥಿತಿ ಚಿಂತಾಜನಕವಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕು ಚಿನ್ನಸಂದ್ರ ಗೇಟ್ ಬಳಿ ಘಟನೆ ನಡೆದಿದೆ. ಮಿನಿ ಬಸ್‌ನಲ್ಲಿದ್ದ ಒಬ್ಬ ಮೃತಪಟ್ಟಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು ಚಿಂತಾಮಣಿಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಅಪಘಾತದ ರಭಸಕ್ಕೆ ಮಿನಿ ಬಸ್ ನಜ್ಜುಗುಜ್ಜಾಗಿ ಛಿದ್ರ ಛಿದ್ರವಾಗಿದೆ. ಕೈವಾರ ಮೂಲದ ಇಲ್ಲು (40) ಮೃತ ವ್ಯಕ್ತಿ. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತದಿಂದಾಗಿ ಚಿಂತಾಮಣಿ – ಬೆಂಗಳೂರು ಮಾರ್ಗದಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು.
ಟ್ಯಾಂಕರ್- ಟ್ರ್ಯಾಕ್ಟರ್ ಡಿಕ್ಕಿ , ಟ್ರಾಫಿಕ್ ಜಾಮ್
ವಿಜಯಪುರ: ಟ್ಯಾಂಕರ್ ಹಾಗೂ ಕಬ್ಬು ತುಂಬಿದ ಟ್ರ್ಯಾಕ್ಟರ್ ಮಧ್ಯೆ ಅಪಘಾತ ಸಂಭವಿಸಿದ ಪರಿಣಾಮ ಹತ್ತಾರು ಕಿಲೋಮೀಟರ್ ಟ್ರಾಫಿಕ್ ಜಾಮ್ ಉಂಟಾಗಿದೆ.
ವಿಜಯಪುರ ಜಿಲ್ಲೆಯ ಕೊಲ್ಹಾರ ಸೇತುವೆ ಮೇಲೆ ಅಪಘಾತ ಸಂಭವಿಸಿದ್ದು, ಎರಡೂ ಕಡೆಗೆ ದಾಟಲು ಬೇರೆ ಮಾರ್ಗವಿಲ್ಲದೆ ಸಾವಿರಾರು ವಾಹನಗಳು ಸಾಲುಗಟ್ಟಿ ನಿಂತದ್ದು ಕಂಡುಬಂತು. ಹುಬ್ಬಳ್ಳಿ ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ -218 ಸಂಪರ್ಕಿಸುವ ಸೇತುವೆ ಇದಾಗಿದ್ದು, ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ 3 ಕಿಲೋ ಮೀಟರ್ ಉದ್ದದ ಬೃಹತ್ ಸೇತುವೆಯುದ್ದಕ್ಕೂ ಟ್ರಾಫಿಕ್ ಜಾಮ್, ಸವಾರರ ಪರದಾಟ ಕಂಡುಬಂತು.
ಅಪಘಾತದಲ್ಲಿ ಯಾರಿಗೂ ಪ್ರಾಣ ಹಾನಿ ಆಗಿಲ್ಲ. ಅಪಘಾತಕ್ಕೀಡಾದ ಟ್ಯಾಂಕರ್, ಟ್ರ್ಯಾಕ್ಟರ್ ತೆರವುಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸಲು ಪೊಲೀಸರು ಮುಂದಾಗಿದ್ದಾರೆ.
ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ, ಹಲವರು ಅಸ್ವಸ್ಥ
ವಿಜಯನಗರ: ಹೆಜ್ಜೇನು ದಾಳಿ ನಡೆದ ಪರಿಣಾಮ ಹಲವು ವಿದ್ಯಾರ್ಥಿಗಳು ಅಸ್ವಸ್ಥರಾದ ಘಟನೆ ಹಡಗಲಿ ತಾಲೂಕಿನ SR ಹಾಗೂ MP ಪ್ರಥಮ ದರ್ಜೆ ಕಾಲೇಜು ಬಳಿ ನಡೆದಿದೆ.
ಹರಪನಹಳ್ಳಿ ಮುಖ್ಯ ರಸ್ತೆ ಗಿಡದಲ್ಲಿ ಗೂಡು ಕಟ್ಟಿರುವ ಹೆಜ್ಜೇನು, ಇದ್ದಕ್ಕಿದ್ದಂತೆ ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಿದೆ. ಕಿಡಗೇಡಿಗಳು ಕಲ್ಲು ಎಸೆದಿದ್ದರಿಂದ ರೊಚ್ಚಿಗೆದ್ದು ರಸ್ತೆಯಲ್ಲಿ ಹೊರಟಿದ್ದವರ ಮೇಲೆ ದಾಳಿ ಎಸಗಿದೆ. ಇದರಿಂದ ಆರು ಮೆಡಿಕಲ್ ವಿದ್ಯಾರ್ಥಿಗಳು, 10 ಜನ ಪದವಿ ವಿದ್ಯಾರ್ಥಿಗಳಿಗೆ ಹೆಜ್ಜೇನುಗಳು ಕಚ್ಚಿವೆ.
ಇದೇ ವೇಳೆ ಪ್ಯಾರಾಮೆಡಿಕಲ್ ಪರೀಕ್ಷೆಗೆ ಹೊರಟಿದ್ದ ವಿದ್ಯಾರ್ಥಿಗಳ ಮೇಲೂ ಹೆಜ್ಜೇನು ಅಟ್ಯಾಕ್ ಮಾಡಿದೆ. ಪ್ಯಾರಾಮೆಡಿಕಲ್ ಪರೀಕ್ಷೆಗೆ ಕೂಡ್ಲಿಗಿಯ ರಾಘವೇಂದ್ರ ನರ್ಸಿಂಗ್ ಕೇಂದ್ರಕ್ಕೆ ಹೊರಟಿದ್ದ ಸ್ಟೂಡೆಂಟ್‌ಗಳು ಹಾಗೂ ಅದೇ ರೀತಿ ನಾಲ್ಕು ಜನ ಬೈಕ್ ಸವಾರರ ಮೇಲೂ ದಾಳಿ ನಡೆದಿದೆ.
ಹೆಜ್ಜೇನು ಕಡಿತದಿಂದ ಪದವಿ ವಿದ್ಯಾರ್ಥಿ ಭವಾನಿ ಎಂಬವರು ಅಸ್ವಸ್ಥಗೊಂಡು ಚಿಕಿತ್ಸೆಗೆ ದಾಖಲಾಗಿದ್ದಾರೆ. ಭವಾನಿ ಸೇರಿ ಇತರ ವಿದ್ಯಾರ್ಥಿಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. 15 ಜನ ಹೆಜ್ಜೇನು ದಾಳಿಗೆ ಒಳಗಾಗಿದ್ದು, ವಿದ್ಯಾರ್ಥಿಗಳು ವಿಪರೀತ ಉರಿ ಅನುಭವಿಸಿದರು. ಶಾಸಕ ಕೃಷ್ಣ ನಾಯ್ಕ್, ಪ್ರಾಚಾರ್ಯ ವಿಜಯ್ ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿಗಳನ್ನು ವಿಚಾರಿಸಿಕೊಂಡರು.
ಇದನ್ನೂ ಓದಿ: Road Accident: ರಾತ್ರಿ ಬೈಕ್ ಅಪಘಾತ, ಇಬ್ಬರ ಸಾವು; ಬೆಳಗ್ಗೆವರೆಗೂ ಗೊತ್ತೇ ಆಗಲಿಲ್ಲ