Site icon Vistara News

Theft Case : ಚಿನ್ನ ಕದಿಯಲು ಬಂದು ಮದುವೆ ಮನೆಯವರಿಂದ ಧರ್ಮದೇಟು ತಿಂದ ಕಳ್ಳ

theft Case

ಚಿಕ್ಕಬಳ್ಳಾಪುರ: ಮದುವೆ ಮನೆಗೆ ಬಂದ ಕಳ್ಳನಿಗೆ (Theft Case ) ವರ ಹಾಗೂ ವಧುವಿನ ಕಡೆಯವರು ಭರಪೂರ ಉಡುಗೊರೆ ಕೊಟ್ಟಿದ್ದಾರೆ. ಮದುವೆ ಮನೆಯೊಳಗೆ ನುಗ್ಗಿದ ಕಳ್ಳನೊಬ್ಬ ಮಹಿಳೆ ಬಳಿ ಚಿನ್ನದ ಸರ ಕದಿಯುವಾಗಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ.

ಕಳ್ಳನನ್ನು ಹಿಡಿದ ಮದುವೆ ಮನೆಯವರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರ ಹೊರವಲಯದ ಬೈಪಾಸ್ ರಸ್ತೆಯಲ್ಲಿರುವ ಸಾಯಿಕೃಷ್ಣ ಫಂಕ್ಷನ್ ಹಾಲ್‌ನಲ್ಲಿ ಘಟನೆ ನಡೆದಿದೆ.

ಸರ ಕದ್ದ ಆರೋಪಿಯನ್ನು ಆಂದ್ರಪ್ರದೇಶದ ಮುಲ್ಲಮೋತುಕಪಲ್ಲಿ ಗ್ರಾಮದ ಪಿ. ನರೇಶ್ ಎಂದು ತಿಳಿದು ಬಂದಿದೆ. ಮದುವೆ ಮನೆಯಲ್ಲಿ ಮಹಿಳೆ ಬಟ್ಟೆ ಬದಲಿಸುವ ವೇಳೆ ನರೇಶ್ ಚಿನ್ನದ ಸರ ಕದಿಯಲು ಯತ್ನಿಸಿದ್ದ. ಆದರೆ ಇದನ್ನೂ ಗಮನಿಸಿದ ಮಹಿಳೆ ಕೂಡಲೇ ಕಿರುಚಾಡಿದ್ದು, ತಪ್ಪಿಸಿಕೊಂಡು ಓಡಾಡುತ್ತಿದ್ದ ನರೇಶ್‌ನನ್ನು ಹಿಡಿದು ಥಳಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಗೌರಿಬಿದನೂರು ನಗರದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: Tiger Attack : ಮೈಸೂರಲ್ಲಿ ಹುಲಿ ದಾಳಿ; ಮಹಿಳೆಯನ್ನು ಹೊತ್ತೊಯ್ದು ಕೊಂದ ವ್ಯಾಘ್ರ

ಬೆಳಗ್ಗೆ ಕೋಳಿ ಕುಯ್ಯುತ್ತಾರೆ, ರಾತ್ರಿಯಾದರೆ ಸುಲಿಗೆಗೆ ಇಳಿಯುತ್ತಾರೆ!

ಬೆಂಗಳೂರು: ಸಾರಾಯಿಪಾಳ್ಯದ ಕೋಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಖರ್ತನಾಕ್‌ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ರಿಯಾಝ್ ಖಾನ್ ಹಾಗು ವಸೀಂ ಫಿರೋಝ್ ಬಂಧಿತ ಆರೋಪಿಗಳು.

ಬೆಳಗಿನಿಂದ ಸಂಜೆ ತನಕ ಕೋಳಿ ಅಂಗಡಿಯಲ್ಲಿ ಕೋಳಿ ಕುಯ್ಯುವ ಕೆಲಸ ಮಾಡಿದರೆ, ರಾತ್ರಿಯಾದರೆ ಸಾಕು ಸುಲಿಗೆಗೆ ಇಳಿಯುತ್ತಿದ್ದರು. ಇತ್ತೀಚಿಗೆ ಸ್ಕೂಟರ್‌ನಲ್ಲಿ ಬಂದಿದ್ದ ಇವರಿಬ್ಬರು, ಅಮ್ಮೇಜಾನ್ ಎಂಬುವವರ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದರು.

ಈ ಸಂಬಂಧ ಅಮ್ಮೇಜಾನ್‌ ಅವರು ದೂರು ದಾಖಲಿಸಿದ್ದರು. ದೂರು ಬಂದ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಸದ್ಯ ಆರೋಪಿಗಳನ್ನು ಹೆಚ್ಚಿನ ತನಿಖೆಗೆ ಒಳಪಡಿಸಿರುವ ಬಾಣಸವಾಡಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: Road Accident : ಕಾರು ಡ್ರೈವಿಂಗ್‌ ಕಲಿಯುವಾಗ ಬ್ರೇಕ್‌ ಬದಲು ಎಕ್ಸಿಲೇಟರ್‌ ತುಳಿದಳು; ಡೆಡ್ಲಿ ಆಕ್ಸಿಡೆಂಟ್‌ಗೆ ಬಾಲಕಿ ಬಲಿ

ಬೆಂಗಳೂರಲ್ಲಿ ಶುರುವಾಗಿದೆ ನಕಲಿ ಪೊಲೀಸರ ಹಾವಳಿ

ರಾಜಧಾನಿ ಬೆಂಗಳೂರಲ್ಲಿ ನಕಲಿ ಪೊಲೀಸರ ಹಾವಳಿ ಹೆಚ್ಚಾಗಿದೆ. ನಕಲಿ ಐಡಿ ತೋರಿಸಿ ಕೇಸ್ ರಿಜಿಸ್ಟರ್ ಆಗಿದೆ ಎಂದು ಬ್ಲಾಕ್‌ ಮೇಲ್ ಮಾಡುತ್ತಿರುವ ಆರೋಪ ಕೇಳಿ ಬಂದಿದೆ. ಮಹಿಳೆಯೊಬ್ಬರಿಗೆ ನಿಮ್ಮ ಮೇಲೆ ಕೇಸ್ ದಾಖಲಾಗಿದೆ ಎಂದು ಕರೆ ಮಾಡಿದ್ದ ನಕಲಿ ಪೊಲೀಸ್‌ವೊಬ್ಬ ಹಂತ ಹಂತವಾಗಿ ಹಣ ದೋಚಿದ್ದಾನೆ.

ಮುಂಬೈ ಮತ್ತು ಬೆಂಗಳೂರು ಪೋಲಿಸರ ಹೆಸರಿನಲ್ಲಿ ವಂಚನೆ ಮಾಡಲಾಗುತ್ತಿದೆ. ನಾವು ಲೋಕಲ್ ಪೊಲೀಸರು, ಮುಂಬೈನಲ್ಲಿ ನಿಮ್ಮ ಮೇಲೆ ಕೇಸ್ ರಿಜಿಸ್ಟರ್ ಆಗಿದೆ ಎಂದು ಫೋನ್‌ ಮಾಡುತ್ತಾರೆ. ಅವರು ನಿಮ್ಮನ್ನು ಅರೆಸ್ಟ್ ಮಾಡುತ್ತಾರೆ ಎಂದೇಳಿ ಬೆದರಿಸಿ ದಂಡ ಕಟ್ಟಿ ಎಂದು ಹಂತ ಹಂತವಾಗಿ ಹಣ ದೋಚಿದ್ದಾರೆ. ಸದ್ಯ ಇಂದ್ರನಗರ ಪೊಲೀಸ್‌ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಬೆನ್ನಹತ್ತಿದ್ದಾರೆ.

ಕುಖ್ಯಾತ ಡ್ರಗ್ ಪೆಡ್ಲರ್ ಬಂಧನ

ಬೆಂಗಳೂರಿನ ಚೆನ್ನಮ್ಮನ ಕೆರೆ ಪೊಲೀಸರು ಕುಖ್ಯಾತ ಡ್ರಗ್ ಪೆಡ್ಲರ್‌ನನ್ನು ಬಂಧಿಸಿದ್ದಾರೆ. ಕೋಲಾರ ಮೂಲದ ರೂಪೇಶ್ ಬಂಧಿತ ಡ್ರಗ್ ಪೆಡ್ಲರ್. ನೈಜೀರಿಯಾ ಹಾಗೂ ಕೇರಳದಿಂದ ಡ್ರಗ್ ಆಮದು ಮಾಡಿಕೊಂಡು ಬೆಂಗಳೂರಲ್ಲಿ ಮಾರಾಟ ಮಾಡುತ್ತಿದ್ದ. ವಿದ್ಯಾರ್ಥಿಗಳನ್ನು ಟಾರ್ಗೆಟ್‌ ಮಾಡುತ್ತಿದ್ದ ಈತ ಪ್ರತಿಷ್ಠಿತ ಕಾಲೇಜುಗಳಿರುವ ‌ಏರಿಯಾಗಳಲ್ಲಿ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ.

ಸದ್ಯ ಬಂಧಿತನಿಂದ 120 ಗ್ರಾಂ ಸಿಂಥೆಟಿಕ್ ಡ್ರಗ್, ಎಂಡಿಎಂಎ ಹಾಗೂ ಒಂದೂವರೆ ಕೆ.ಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ. ಈತ ಚೆನ್ನಮ್ಮನಕೆರೆ, ಗಿರಿನಗರ, ಟಿಸಿ ಪಾಳ್ಯ ಪ್ರದೇಶದಲ್ಲಿ ಡ್ರಗ್ಸ್‌ ಮಾರಾಟ ಮಾಡುತ್ತಿದ್ದ. ರೇವ್ ಪಾರ್ಟಿಗೂ ಮಾದಕ ವಸ್ತು ಸಪ್ಲೈ ಮಾಡುತ್ತಿದ್ದ ಎಂಬುದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version