Site icon Vistara News

Toilet Cleaning: ವಿದ್ಯಾರ್ಥಿನಿ ಶಾಲೆ ಶೌಚಾಲಯ ಶುಚಿಗೊಳಿಸಿದ ಪ್ರಕರಣ; ಕ್ರಮ ಕೈಗೊಳ್ಳಲು ಹಿಂದೇಟು?

cleaning

cleaning

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಬೈನಹಳ್ಳಿ ಗ್ರಾಮದ ನಮ್ಮೂರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿನಿ ಶೌಚಾಲಯ ಶುಚಿಗೊಳಿಸುತ್ತಿರುವ (Toilet Cleaning) ವಿಡಿಯೊ ವೈರಲ್‌ ಆಗಿದೆ. ಈ ವಿಚಾರ ವಿವಾದವಾಗುತ್ತಿದ್ದಂತೆ ಶಿಕ್ಷಕ ಆಂಜಿನೇಯ ರೆಡ್ಡಿ ಪ್ರಕರಣ ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ಏನಿದು ವಿವಾದ?

ವಿದ್ಯಾರ್ಥಿನಿ ಶಾಲೆಯ ಶೌಚಾಲಯ ಕ್ಲೀನ್ ಮಾಡುತ್ತಿದ್ದ ವಿಡಿಯೊವನ್ನು ಸ್ಥಳೀಯರು ಸೆರೆ ಹಿಡಿದಿದ್ದರು. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ʼʼಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಶೌಚಗೃಹ ಸ್ವಚ್ಛಗೊಳಿಸಲು ಬಳಸಬಾರದು ಎನ್ನುವ ಶಿಕ್ಷಣ ಇಲಾಖೆಯ ಆದೇಶವಿದೆ. ಅದನ್ನು ಗಾಳಿಗೆ ತೂರಿ ಶಿಕ್ಷಕರು ವಿದ್ಯಾರ್ಥಿನಿಯ ಕೈಯಲ್ಲಿ ಶೌಚಾಲಯ ಸ್ವಚ್ಛಗೊಳಿಸಿದ್ದಾರೆ. ಹೀಗಾಗಿ ಸೂಕ್ತ ಕ್ರಮ ಕೈಗೊಳ್ಳಬೇಕುʼʼ ಎಂದು ಆಗ್ರಹಿಸಿದ್ದರು. ಬಳಿಕ ತಾನೇ ಶೌಚಾಲಯ ಕ್ಲೀನ್ ಮಾಡಿರುವುದಾಗಿ ವಿದ್ಯಾರ್ಥಿನಿ ಹೇಳಿಕೆ ನೀಡಿದ್ದಳು. ವಿದ್ಯಾರ್ಥಿನಿಯನ್ನು ಬೆದರಿಸಿ ಶಿಕ್ಷಕ ಆಂಜಿನೇಯ ರೆಡ್ಡಿ ಈ ರೀತಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.

ಕ್ರಮ ಕೈಗೊಳ್ಳಲು ಹಿಂದೇಟು?

ಈ ಪ್ರಕಣದಲ್ಲಿ ಕ್ರಮ ಕೈಗೊಳ್ಳಲು ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ ಎನ್ನುವ ಆರೋಪವೂ ಕೇಳಿ ಬಂದಿದೆ. ಚಿಕ್ಕಬಳ್ಳಾಪುರ ಶಿಕ್ಷಣ ಇಲಾಖೆ ಶಿಕ್ಷಕನ ಬೆಂಬಲಕ್ಕೆ ನಿಂತಿದೆ. ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಲು ಬಿಇಒ ಉಮಾದೇವಿ ಹಾಗೂ ಡಿಡಿಪಿಐ ಬೈಲಾಂಜಿನಪ್ಪ ನಿರಾಕರಿಸಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಈ ಹಿಂದೆಯೂ ಮಕ್ಕಳಿಂದ ಶಾಲೆಯ ಶೌಚಾಲಯ ಶುಚಿಗೊಳಿಸಿದ ಘಟನೆ ನಡೆದಿತ್ತು. ಕೆಲವು ದಿನಗಳ ಹಿಂದೆ ಸರ್ಕಾರಿ ಶಾಲಾ ಶಿಕ್ಷಕಿಯೊಬ್ಬರು ಮಕ್ಕಳಿಂದ ಶೌಚಾಲಯ ಸ್ವಚ್ಛ ಮಾಡಿಸಿರುವ ವಿಡಿಯೊವೊಂದು ವೈರಲ್ ಆಗಿತ್ತು. ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ತಾಲೂಕಿನ ಕುದಪಕುಂಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿತ್ತು

ದಿಬ್ಬೂರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಶಿಡ್ಲಘಟ್ಟ ತಾಲೂಕಿನ ಕುದಪಕುಂಟೆ ಗ್ರಾಮದಲ್ಲಿ ವಿಡಿಯೊ ವೈರಲ್ ಆಗುತ್ತಿದ್ದಂತೆ ಶಾಲೆಗೆ ಅಧಿಕಾರಿಗಳ ತಂಡ‌ ಭೇಟಿ ನೀಡಿತ್ತು. ತಾಲೂಕಿನ ಬಿಇಒ ನರೇಂದ್ರ ಕುಮಾರ್, ಇಒ ಮುನಿರಾಜು, ಸಮಾಜ ಕಲ್ಯಾಣ ಇಲಾಖೆ ಜಗದೀಶ್ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳಿಂದ ಗೌಪ್ಯ ಹೇಳಿಕೆಯನ್ನು ಪಡೆಕೊಂಡಿತ್ತು. ಶಾಲಾ ಮುಖ್ಯ ಶಿಕ್ಷಕಿಯ ವಿರುದ್ಧ ಶಿಸ್ತು ಕ್ರಮಕ್ಕೆ ಪೋಷಕರು ಒತ್ತಾಯಸಿದ್ದರು. ಅದರಂತೆ ಬಿಇಒ ನರೇಂದ್ರ ಕುಮಾರ್ ಅವರು ಮುಖ್ಯ ಶಿಕ್ಷಕಿಯನ್ನು ಅಮಾನತು ಮಾಡಿ ಹೊರಡಿಸಿದ್ದರು.

ಕೋಲಾರ ಪ್ರಕರಣ

2023ರ ಡಿಸೆಂಬರ್‌ 17ರಂದು ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಯಲವಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ (Morarji Desai Residential School)ಯ ಮಕ್ಕಳನ್ನು ಮಲದ ಗುಂಡಿಗೆ ಇಳಿಸಿ ಸ್ವಚ್ಛ ಮಾಡಿಸಿದ ಪ್ರಕರಣ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿತ್ತು. ಈ ಸಂಬಂಧ ಐವರು ಸಿಬ್ಬಂದಿ ಮೇಲೆ ಎಫ್‌ಐಆರ್‌ ದಾಖಲಾಗಿ ಪೊಲೀಸರು ಇಬ್ಬರನ್ನು ಬಂಧಿಸಿದ್ದರು. ಇದಾದ ಬಳಿಕ ಈ ಮಾದರಿಯ ಪ್ರಕರಣಗಳು ಬೆಳಕಿಗೆ ಬಂದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.

ಇದನ್ನೂ ಓದಿ: Toilet Cleaning: ಬೈನಹಳ್ಳಿ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿನಿಯಿಂದ ಶೌಚಾಲಯ ಸ್ವಚ್ಛತೆ; ವಿಡಿಯೊ ವೈರಲ್‌

Exit mobile version