Site icon Vistara News

Raksha Ramaiah: ಚಿಕ್ಕಬಳ್ಳಾಪುರದಲ್ಲಿ ನಾನಾ ಕಾರಣಗಳಿಂದ ಮತಗಳನ್ನು ಗೆಲುವಾಗಿ ಪರಿವರ್ತಿಸಲು ಸಾಧ್ಯವಾಗಿಲ್ಲ: ರಕ್ಷಾ ರಾಮಯ್ಯ

Youth Congress National General Secretary Raksha Ramaiah latest statement

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಮತಗಳು ಬಂದಿದ್ದರೂ ಸಹ ನಾನಾ ಕಾರಣಗಳಿಂದಾಗಿ ಅದನ್ನು ಗೆಲುವಾಗಿ ಪರಿವರ್ತನೆ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ (Raksha Ramaiah) ತಿಳಿಸಿದರು.

ಚಿಕ್ಕಬಳ್ಳಾಪುರ ಜಿಲ್ಲಾ ಪತ್ರಕರ್ತರ ಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ. ಸುಧಾಕರ್, ಮಾಜಿ ಸಚಿವ, ಎಂಎಲ್‌ಸಿ ಡಾ. ಎಂ.ಆರ್. ಸೀತಾರಾಂ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ಕಾಂಗ್ರೆಸ್‌ಗೆ ಶೇ. 3 ರಷ್ಟು ಮತಗಳು ಹೆಚ್ಚಿನ ಪ್ರಮಾಣದಲ್ಲಿ ಬಂದಿತ್ತು. ಆದರೆ ಅದನ್ನು ಗೆಲುವಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ತಮಗೆ 6.60 ಲಕ್ಷ ಮತಗಳು ದೊರೆತಿದ್ದು, 1.60 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿರುವ ತಮ್ಮ ಪ್ರತಿಸ್ಪರ್ಧಿ ಸುಧಾಕರ್ ಅವರಿಗೆ ಶುಭ ಕೋರುತ್ತೇನೆ. ಜನರ ನಿರೀಕ್ಷೆಯಂತೆ ಅವರು ಕೆಲಸ ಮಾಡುತ್ತಾರೆ. ಕ್ಷೇತ್ರದ ಜನರ ಧ್ವನಿಯಾಗುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ಇದನ್ನೂ ಓದಿ: Toyota Kirloskar Motor: ದೆಹಲಿಯಲ್ಲಿ ಟಿಕೆಎಂನ ʼಟೊಯೊಟಾ ಯೂಸ್ಡ್ ಕಾರ್ʼ ಮಳಿಗೆಗೆ ಚಾಲನೆ

ಕರ್ನಾಟಕದಲ್ಲಿ 11 ಕ್ಷೇತ್ರದಲ್ಲಿ 40ಕ್ಕಿಂತ ಕಡಿಮೆ ವಯಸ್ಸಿನವರಿಗೆ ಸ್ಪರ್ಧಿಸಲು ಅವಕಾಶ ದೊರೆತ್ತಿತ್ತು. ನಾಲ್ವರು ಯುವಕರು ಗೆಲುವು ಸಾಧಿಸಿರುವುದು ಉತ್ತಮ ಬೆಳವಣಿಗೆ. ಜನಪರ ಕಾರ್ಯಕ್ರಮಗಳ ಮೂಲಕ ಚುನಾವಣೆ ಎದುರಿಸಿದೆವು. ಮನೆ ಮನೆಗಳಿಗೆ ನಮ್ಮ ಕಾರ್ಯಕ್ರಮಗಳು ತಲುಪಿವೆ. ಈ ಚುನಾವಣೆಯಲ್ಲಿ ಸ್ಪರ್ಧಿಸಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರು ಯುವ ಜನಾಂಗಕ್ಕೆ ಆದ್ಯತೆ ಕಲ್ಪಿಸಿದ್ದರು. ಅವರಿಗೆ ನಾನು ಆಭಾರಿಯಾಗಿದ್ದೇನೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಜನರಿಗೆ ಧನ್ಯವಾದಗಳು. ಚಿಕ್ಕಬಳ್ಳಾಪುರದಲ್ಲಿ ಕಳೆದ ಐದಾರು ವರ್ಷಗಳಿಂದ ಯುವ ಕಾಂಗ್ರೆಸ್ ಜತೆಗೂಡಿ ಕೆಲಸ ಮಾಡುತ್ತಿದ್ದೆ. ಅತಿ ಹೆಚ್ಚು ಮತಗಳನ್ನು ಪಡೆಯಲು ಪ್ರಯತ್ನಿಸಿದ್ದೇವೆ. ಮುಂಬರುವ ದಿನಗಳಲ್ಲಿ ಚಿಕ್ಕಬಳ್ಳಾಪುರದಲ್ಲಿ ಹೂವಿನ ಮಾರುಕಟ್ಟ ಸ್ಥಾಪಿಸುವುದು ಸೇರಿದಂತೆ ರೈತರು, ಮಹಿಳೆಯರ ಪರವಾಗಿ ಕೆಲಸ ಮಾಡುತ್ತೇವೆ ಎಂದರು.

ಇದನ್ನೂ ಓದಿ: Food Tips Kannada: ಇನ್‌ಸ್ಟಂಟ್‌ ನೂಡಲ್ಸ್‌ ತಿಂದರೆ ಆರೋಗ್ಯಕ್ಕೆ ತೊಂದರೆ ಇದೆಯೆ?

ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಕೇಶವರೆಡ್ಡಿ, ಮಾಜಿ ಶಾಸಕ ಕೆ.ಪಿ. ಬಚ್ಚೇಗೌಡ, ಅನುಸೂಯಮ್ಮ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

Exit mobile version