Site icon Vistara News

ಚಿಕ್ಕಮಗಳೂರು ಪೊಲೀಸ್-ವಕೀಲರ ಸಂಘರ್ಷ; ಪ್ರಕರಣದ ತನಿಖೆ ಸಿಐಡಿ ಹೆಗಲಿಗೆ

Chikkamagaluru police lawyer clash The case is being investigated by the CID

ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ಪೊಲೀಸ್-ವಕೀಲರ ಸಂಘರ್ಷ ಪ್ರಕರಣವನ್ನು (Atrocity on Lawyer) ಸರ್ಕಾರವು ಸಿಐಡಿಗೆ ವರ್ಗಾವಣೆ ಮಾಡಿದೆ. ಚಿಕ್ಕಮಗಳೂರಿನ ಪಶ್ಚಿಮ ವಲಯ ಐಜಿಪಿ ಚಂದ್ರಗುಪ್ತ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ನಿನ್ನೆ ಅಹೋರಾತ್ರಿ ಪೊಲೀಸರ ಹಾಗೂ ಕುಟುಂಬಸ್ಥರ ಪ್ರತಿಭಟನೆ ಹಿನ್ನೆಲೆಯಲ್ಲಿ ನಗರಠಾಣೆಗೆ ಐಜಿಪಿ ಚಂದ್ರಗುಪ್ತ ಭೇಟಿ ನೀಡಿದರು. ನಿನ್ನೆಯ ಪ್ರತಿಭಟನೆಗೆ ಕಾರಣವಾದ ಲೋಪದೋಷಗಳ ಬಗ್ಗೆ, ಸಮಸ್ಯೆಗಳ ಕುರಿತು ಇಂಚಿಂಚೂ ಮಾಹಿತಿ ಪಡೆದರು. ಬಳಿಕ ಈ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಆಗಿರುವುದಾಗಿ ಸ್ಪಷ್ಟ ಪಡಿಸಿದರು.

ಹೆಲ್ಮೆಟ್‌ ಹಾಕದ ಕಾರಣಕ್ಕೆ ಪ್ರೀತಮ್‌ ಎಂಬ ಯುವ ವಕೀಲನ ಮೇಲೆ ನಗರ ಠಾಣೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದರಿಂದ ರೊಚ್ಚಿಗೆದ್ದ ವಕೀಲರು ಕಳೆದ ಶುಕ್ರವಾರ ಜಿಲ್ಲಾ ನ್ಯಾಯಾಲಯದ ಮುಂದೆ ಕೋರ್ಟ್ ಕಲಾಪಗಳನ್ನು ಬಹಿಷ್ಕರಿಸಿ ಚಿಕ್ಕಮಗಳೂರು ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದ್ದರು.

ವಕೀಲರ ಪ್ರತಿಭಟನೆಗೆ ಮಣಿದ ಎಸ್‌ಪಿ ವಿಕ್ರಂ, ಓರ್ವ ಪಿಎಸ್ಐ, ಎಎಸ್‌ಐ ಸೇರಿ ಆರು ಮಂದಿ ಸಿಬ್ಬಂದಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದರು. ಈ ಪ್ರಕರಣವು ಹೈಕೋರ್ಟ್‌ ಮೆಟ್ಟಿಲೇರಿದಾಗ ಪೊಲೀಸರ ದೌರ್ಜನ್ಯ (Atrocity on Lawyer) ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ (Karnataka High court) ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತುರ್ತು ವಿಚಾರಣೆ ನಡೆಸಿತು. ಇತ್ತ ಪೊಲೀಸರಿಗೆ ರಕ್ಷಣೆ ಇಲ್ಲ, ಪೊಲೀಸ್ ಕುಟುಂಬಗಳಿಗೆ ಅನ್ಯಾಯ ಆಗಿದೆ ಎಂದು ಪೊಲೀಸ್‌ ಸಿಬ್ಬಂದಿ ಹಾಗೂ ಕುಟುಂಬಸ್ಥರು ಶನಿವಾರ ಅಹೋರಾತ್ರಿ ಧರಣಿಯನ್ನು ನಡೆಸಿದ್ದರು. ಪೊಲೀಸ್‌ ಸಿಬ್ಬಂದಿಯನ್ನು ಬಂಧಿಸಿದರೆ ಸಾಮೂಹಿಕ ರಾಜೀನಾಮೆ ನೀಡುವುದಾಗಿ ಎಸ್‌ಪಿಗೆ ಎಚ್ಚರಿಕೆ ನೀಡಿದ್ದರು. ನಗರದ 6 ಠಾಣೆಗಳ 300ಕ್ಕೂ ಹೆಚ್ಚು ಪೊಲೀಸರು ಕೆಲಸ ನಿಲ್ಲಿಸಿ ಪ್ರತಿಭಟನೆಗೆ ಆಗಮಿಸಿ, ನಾವ್ಯಾರು ಕೆಲಸ ಮಾಡಲ್ಲ ಎಂದು ಪಟ್ಟು ಹಿಡಿದಿದ್ದರು.

ಏನಿದು ಪ್ರಕರಣ?

ಹೆಲ್ಮೆಟ್ ಹಾಕದಿರುವ ವಿಚಾರಕ್ಕೆ ವಕೀಲರನ್ನು ಠಾಣೆಗೆ ಕರೆದೊಯ್ದು ಹಿಗ್ಗಾಮುಗ್ಗಾ ಹಲ್ಲೆ ನಡೆಸಿರುವ ಪ್ರಕರಣ ರಾಜ್ಯಾದ್ಯಂತ ಸದ್ದು ಮಾಡಿತ್ತು. ಪೊಲೀಸರ ವಿರುದ್ಧ ಸಿಡಿದೆದ್ದ ರಾಜ್ಯ ವಕೀಲರ ಸಂಘ ಬೀದಿಗಿಳಿದು ಪ್ರತಿಭಟನೆ ನಡೆಸಿ ಖಾಕಿ ವಿರುದ್ಧ ಕೆಂಡ ಕಾರಿದ್ದರು. ಕಾಫಿನಾಡಲ್ಲಿ ವಕೀಲರ ಪ್ರತಿಭಟನೆ ಕ್ಷಣ ಕ್ಷಣಕ್ಕೂ ಕಾವು ಪಡೆಯುತ್ತಿದ್ದು, ಹಲ್ಲೆ ನಡೆಸಿದ ಪೊಲೀಸರನ್ನು ಬಂಧಿಸದಿದ್ದರೆ ಮುಂದೆ ಏನಾದರೂ ನಮಗೆ ಗೊತ್ತಿಲ್ಲ ಎಂದು ವಕೀಲರ ಪಡೆ ಖಡಕ್ ವಾರ್ನಿಂಗ್ ಕೊಟ್ಟಿತ್ತು.

ಅಂದಹಾಗೇ ಕಳೆದ ನವೆಂಬರ್‌ 30ರ ರಾತ್ರಿ 7 ಗಂಟೆ ಸುಮಾರಿಗೆ ಹೆಲ್ಮೆಟ್ ಧರಿಸಿದೆ ಹೋಗುತ್ತಿದ್ದ ವಕೀಲ ಪ್ರೀತಮ್‌ನನ್ನು ತಡೆದ ಪೊಲೀಸರು ಬೈಕ್‌ನಿಂದ ಕೆಳಗಿಳಿಸಿ ಕೀ ಕಿತ್ತುಕೊಂಡಿದ್ದರು. ಈ ವಿಚಾರ ದೊಡ್ಡದಾಗಿ ಬೈಕ್ ಸವಾರನನ್ನು ಠಾಣೆಗೆ ಕರೆದು ಕರೆದೊಯ್ದು ಹಿಗ್ಗಾ ಮುಗ್ಗ ಹಲ್ಲೆ ನಡೆಸಿರುವ ವಿಚಾರ ಇತರೆ ವಕೀಲರು ಸಿಟ್ಟಿಗೆಳುವಂತೆ ಮಾಡಿತ್ತು.

ದಂಡ ಹಾಕುವ ಬದಲು ಠಾಣೆಯಲ್ಲಿ ವಕೀಲ ಪ್ರೀತಮ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದರು. ಚಿಕ್ಕಮಗಳೂರು ನಗರ ಠಾಣೆಯ ಮುಂದೆ ರಾತ್ರಿ ಇಡೀ ಪ್ರತಿಭಟನೆ ನಡೆಸಿ ಸುಖಾ ಸುಮ್ಮನೆ ಹಲ್ಲೆ ನಡೆಸಿದ ಪೊಲೀಸರನ್ನು ಬಂಧಿಸುವಂತೆ ವಕೀಲರು ಪಟ್ಟು ಹಿಡಿದಿದ್ದರು. ಚಿಕ್ಕಮಗಳೂರು ಎಸ್‌ಪಿ ವಿಕ್ರಂ ಅಮಟೆ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ ಎಂದರು ಪಟ್ಟು ಬಿಡದ ನೂರಾರು ವಕೀಲರು ಪೊಲೀಸರನ್ನು ಬಂಧಿಸಿಲೇ ಬೇಕೆಂದು ಒತ್ತಾಯ ಮಾಡಿದರು. ಬಳಿಕ ವಕೀಲರ ಪ್ರತಿಭಟನೆಗೆ ಮಣಿದ ಎಸ್‌ಪಿ ವಿಕ್ರಂ, ಓರ್ವ ಪಿಎಸ್ಐ, ಎಎಸ್‌ಐ ಸೇರಿ ಆರು ಮಂದಿ ಸಿಬ್ಬಂದಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದರು.

ಕಪ್ಪಾಳಕ್ಕೆ ಹೊಡೆದಿದ್ದ ಪ್ರೀತಮ್‌!

ಪೊಲೀಸ್‌ ಸಿಬ್ಬಂದಿ ಹೋರಾಟಕ್ಕೆ ಮಣಿದ ಹಿರಿಯ ಅಧಿಕಾರಿಗಳು ವಕೀಲರ ವಿರುದ್ಧ ಎಫ್‌ಐಆರ್‌ ದಾಖಲು ಮಾಡಿದರು. ಪೇದೆ ಗುರುಪ್ರಸಾದ್ ನೀಡಿದ ದೂರಿನ ಮೇಲೆ ವಕೀಲ ಪ್ರೀತಮ್ ಮೇಲೂ ಎಫ್‌ಐಆರ್ ದಾಖಲಾಗಿದೆ. ವಕೀಲ ಪ್ರೀತಮ್ ಗುರುಪ್ರಸಾದ್‌ ಕಪ್ಪಾಳಕ್ಕೆ ಹೊಡಿದಿದ್ದಾರೆ ಎಂದು ಆರೋಪಿಸಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶದ ಕುತೂಹಲಕರ ಸುದ್ದಿಗಳಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version