ಚಿಕ್ಕಮಗಳೂರು: ಚಿಕ್ಕಮಗಳೂರು, ಹಾಸನ, ಚಾಮರಾಜ ನಗರ, ಕೊಡಗು ಸೇರಿದಂತೆ ನಾನಾ ಭಾಗಗಳಲ್ಲಿ ಕಾಡಾನೆಗಳು ಹಿಂಡು ಹಿಂಡಾಗಿ ಬಂದು ಜನರನ್ನು ಕಾಡುತ್ತಿರುವ, ಬಲಿ ಪಡೆಯುತ್ತಿರುವ ವಿದ್ಯಮಾನಗಳು ಹೆಚ್ಚುತ್ತಿವೆ. ಇದರ ನಡುವೆ ಈಗ ಕಾಡುಕೋಣಗಳ ಹಾವಳಿ (Bison Menace) ಕಂಡುಬಂದಿದೆ! ಸುಮಾರು 15ಕ್ಕೂ ಅಧಿಕ ಕಾಡುಕೋಣಗಳು ರಸ್ತೆಯ ಪಕ್ಕದಲ್ಲಿ (Bison at Road Side) ನಿಂತು ಆತಂಕ ಮೂಡಿಸಿವೆ.
ಅಂದ ಹಾಗೆ ಈ ಘಟನೆ ನಡೆದಿರುವುದು ಚಿಕ್ಕಮಗಳೂರು ತಾಲೂಕಿನ (Chikkamagaluru News) ಬೆಟ್ಟದ ಮರಡಿ ಗ್ರಾಮದಲ್ಲಿ. ಕಾಡು ಕೋಣಗಳ ಹಿಂಡು ಇಲ್ಲಿನ ರಸ್ತೆ ಪಕ್ಕದಲ್ಲಿ ಬಂದು ನಿಂತಿದ್ದು, ಇದನ್ನು ಕಂಡು ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.
ಒಂದು ಕಡೆ ಕಾಡಾನೆಗಳ ಕಾಟದ ನಡುವೆ ಕಾಡೆಮ್ಮೆಗಳ ಕಾಟದಿಂದ ಜನರು ಕಂಗೆಡುವಂತಾಗಿದೆ. ಕಾಡಿನ ಭಾಗದಿಂದ ಇಳಿದು ಬಂದಿರುವ ಈ ಕಾಡುಕೋಣಗಳು ನಗರ ಪ್ರದೇಶದತ್ತ ಬರುತ್ತಿರುವುದರಿಂದ ಜನರಿಗೆ ಆತಂಕ ಜೋರಾಗಿದೆ.
ಇದನ್ನೂ ಓದಿ : Elephant Attack : ಟಾಟಾ ಎಸ್ಟೇಟ್ ಬಳಿ ಮತ್ತೆ ಒಂಟಿ ಸಲಗ ದಾಂಧಲೆ, ಹುಷಾರ್ ಎಂದ ಅರಣ್ಯ ಇಲಾಖೆ
ಇದು ರಸ್ತೆಯಲ್ಲೇ ಸಾಗುವ ಅಪಾಯವಿರುವುದರಿಂದ ಯಾವ ಸಮಯದಲ್ಲಿ ಯಾರ ಮೇಲೆ ದಾಳಿ ಮಾಡುತ್ತೋ ಎಂಬ ಭಯದಲ್ಲಿ ಜನ ಇದ್ದಾರೆ. ಈ ಭಾಗದಲ್ಲಿ ಪದೇಪದೆ ಕಾಡು ಕೋಣಗಳ ದಂಡು ಪ್ರತ್ಯಕ್ಷವಾಗುತ್ತಿದೆ.
ಹೀಗಾಗಿ ತೋಟದ ಕೆಲಸ ಹಾಗೂ ಇತರ ಕೆಲಸಗಳಿಗೂ ಹೋಗಲು ಜನರು ಭಯ ಪಡುವಂತಾಗಿದೆ.
ಹಿಂಡು ಹಿಂಡಾಗಿ ಬರುತ್ತಿರುವ ಕಾಡುಕೋಣಗಳನ್ನು ಓಡಿಸಲು ಪ್ರಯತ್ನ ಮಾಡಿದ ಸ್ಥಳೀಯರು ಅದರಲ್ಲಿ ಸಣ್ಣ ಪ್ರಮಾಣದಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನಲಾಗಿದೆ.
ಕಾಡು ಪ್ರಾಣಿಗಳ ಹಾವಳಿಗೆ ಬೇಸತ್ತಿರುವ ಮಲೆನಾಡು ಭಾಗದ ಜನರು ಈಗ ಕಾಡುಕೋಣಗಳು ಬಂದರೆ ಮೊಬೈಲ್ನಲ್ಲಿ ಸೆರೆ ಹಿಡಿದು ಅರಣ್ಯ ಇಲಾಖೆಗೆ ಕಳುಹಿಸುವುದಕ್ಕೆ ಸೀಮಿತವಾಗಿದ್ದಾರೆ.