Site icon Vistara News

Chikkamagaluru News : ತುಡಕೂರು ಮಂಜುಗೆ ಗಡಿಪಾರು ನೋಟಿಸ್! ವೈಯಕ್ತಿಕವಾಗಿ ಟಾರ್ಗೆಟ್ ಎಂದು ಕಿಡಿ

Tudakur Manju

ಚಿಕ್ಕಮಗಳೂರು: ಚುನಾವಣೆ ಸಮಯದಲ್ಲಿ ನನ್ನನ್ನು ವೈಯಕ್ತಿಕವಾಗಿ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ತುಡಕೂರು ಮಂಜು (tudakuru manju) ಆಕ್ರೋಶ ಹೊರಹಾಕಿದ್ದಾರೆ. ಚುನಾವಣೆ ಹೊತ್ತಲ್ಲಿ ಹಿಂದೂ ಮುಖಂಡರನ್ನು ಗುರಿಯಾಗಿಸಿಕೊಂಡು ಚಿಕ್ಕಮಗಳೂರು ಜಿಲ್ಲಾಡಳಿತವು ಗಡಿಪಾರು ನೋಟಿಸ್‌ ನೀಡಿದೆ (Chikkamagaluru News) ಎಂದು ಕಿಡಿಕಾರಿದ್ದಾರೆ.

ಮಾಜಿ‌ ಬಜರಂಗದಳ ಸಂಚಾಲಕ ತುಡಕೂರು ಮಂಜುಗೆ 24 ಪ್ರಕರಣಗಳನ್ನು ಉಲ್ಲೇಖಿಸಿ ಮಾರ್ಚ್ 14 ರಂದು ಡಿಸಿ ನ್ಯಾಯಾಲಯ ಮುಂದೆ ಹಾಜರಾಗುವಂತೆ ಚಿಕ್ಕಮಗಳೂರು ಜಿಲ್ಲಾಡಳಿತವು ಗಡಿಪಾರು ನೋಟಿಸ್ ನೀಡಿದೆ.

17 ಕ್ರಿಮಿನಲ್‌ ಪ್ರಕರಣಗಳು ಹಾಗೂ 7 ಮುಂಜಾಗ್ರತಾ ಪ್ರಕರಣಗಳು ದಾಖಲಾಗಿವೆ. ಯುವಕರನ್ನು ಪ್ರಚೋದಿಸಿ ಅವರಲ್ಲಿ ಮತೀಯ ದ್ವೇಷವನ್ನು ತುಂಬಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಸಾಧ್ಯತೆ ಇದೆ ಎಂಬ ಅಂಶವನ್ನು ಉಲ್ಲೇಖಿಸಿದೆ. ಈ ಹಿಂದೆ ಈಶಾನ್ಯ ರಾಜ್ಯಗಳಿಂದ ಬಹಳಷ್ಟು ಜನ ಕಾರ್ಮಿಕರು ಚಿಕ್ಕಮಗಳೂರು, ಬಾಳೆಹೊನ್ನೂರು, ಮೂಡಿಗೆರೆ, ಅಲ್ದೂರು, ಬಾಳೂರು ವ್ಯಾಪ್ತಿಯ ಕಾಫಿ ತೋಟಗಳಿಗೆ ದಿನಗೂಲಿಗೆ ಕಾರ್ಮಿಕರು ಬರುತ್ತಿದ್ದರು. ಆದರೆ ತುಡಕೂರು ಮಂಜು, ಕಾರ್ಮಿಕರೆಲ್ಲರೂ ಬಾಂಗ್ಲಾದೇಶದಿಂದ ಅಕ್ರಮವಾಗಿ ವಲಸೆ ಬಂದವರೆಂದು ಬಿಂಬಿಸಿ ಅಪಪ್ರಚಾರ ಮಾಡಿ ಹಲ್ಲೆ ನಡೆಸಿದ್ದಾಗಿ ಉಲ್ಲೇಖಿಸಿದ್ದಾರೆ. ಹೀಗಾಗಿ ಕೋರ್ಟ್‌ ಹಾಜರಾಗಿ ವಿವರಣೆ ನೀಡುವಂತೆ ಸೂಚನೆ ನೀಡಲಾಗಿದೆ.

ಇತ್ತ ನೋಟಿಸ್‌ಗೆ ತುಡಕೂರು ಮಂಜು ಆಕ್ರೋಶ ಹೊರಹಾಕಿದ್ದಾರೆ. ನೋಟಿಸ್‌ಗೆ ಉತ್ತರಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಆದರೆ ಈಗಾಗಲೇ 24 ಪ್ರಕರಣಗಳಲ್ಲಿ 20 ಪ್ರಕರಣಗಳು ಜಿಲ್ಲಾ ನ್ಯಾಯಾಲಯದಲ್ಲಿ ಖುಲಾಸೆ ಆಗಿದೆ. ಬಿಜೆಪಿ ಕಾರ್ಯಕರ್ತ ಎಂಬ ಕಾರಣಕ್ಕೆ ಚುನಾವಣಾ ಸಮಯದಲ್ಲಿ ವೈಯಕ್ತಿಕವಾಗಿ ಟಾರ್ಗೆಟ್ ಮಾಡಲಾಗುತ್ತಿದೆ. ಇದಕ್ಕೆಲ್ಲ ವಕೀಲರ ಮೂಲಕ ಉತ್ತರ ನೀಡುತ್ತೇನೆ ಎಂದು ತುಡಕೂರು ಮಂಜು ತಿಳಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version